ಸೋಮವಾರ, ಜೂನ್ 21, 2021
29 °C
ಹಿರಿಯ ರಾಜಕಾರಣಿ ಅಭಿಮತ

ಹಿಂದಿ ಹೇರಿಕೆ ವಿರೋಧಿಸಿದ್ದ ಲೋಹಿಯಾ: ಎಂ.ಪಿ.ನಾಡಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನೀವು ದುಬಾರಿ ಪ್ರಧಾನಮಂತ್ರಿ. ನಿಮಗಾಗಿಯೇ ಪ್ರತಿನಿತ್ಯ ₹25 ಸಾವಿರ ಖರ್ಚು ಮಾಡಲಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ ಎಂದು ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಗೆ ರಾಮಮನೋಹರ ಲೋಹಿಯಾ ಪತ್ರ ಬರೆದಿದ್ದರು. ಅಂತಹ ದಿಟ್ಟ, ನೇರ ನಡೆ, ನುಡಿಯ ವ್ಯಕ್ತಿತ್ವ ಅವರದ್ದು’ ಎಂದು ಹಿರಿಯ ರಾಜಕಾರಣಿ ಎಂ.ಪಿ.ನಾಡಗೌಡ ಮಂಗಳವಾರ ಹೇಳಿದರು.

ಭಾರತ ಯಾತ್ರಾ ಕೇಂದ್ರ, ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌ ವಿಚಾರ ವೇದಿಕೆ, ಎಂ.ಪಿ.ಪ್ರಕಾಶ್‌ ಸಮಾಜಮುಖಿ ಟ್ರಸ್ಟ್‌ ಹಾಗೂ ಡಾ.ರಾಮಮನೋಹರ ಲೋಹಿಯಾ ಸಮತಾ ವಿಚಾರ ಟ್ರಸ್ಟ್‌ ಜಂಟಿಯಾಗಿ ಆಯೋಜಿಸಿದ್ದ ಲೋಹಿಯಾ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿಂತಕ ಕೆ.ಎಸ್‌.ನಾಗರಾಜ್, ‘ಪ್ರಾದೇಶಿಕ ಭಾಷೆಗೆ ಹೆಚ್ಚಿನ ಮನ್ನಣೆ ನೀಡಬೇಕೆಂದು ಲೋಹಿಯಾ ಅವರು ಆ ಕಾಲದಲ್ಲೇ ಒತ್ತಾಯಿಸಿದ್ದರು. ಆ ಮೂಲಕ ಹಿಂದಿ ಹೇರಿಕೆಯನ್ನು ಬಲವಾಗಿ ವಿರೋಧಿಸಿದ್ದರು. ಅವರು ತಮ್ಮ ಕೊನೆಯ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇಡೀ ಮಾನವ ಕುಲಕ್ಕೆ ಮಾದರಿಯಾಗಿದ್ದರು. ಇಂದಿನ ರಾಜಕಾರಣಿಗಳಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ಬರಹಗಾರ ಮಂಗ್ಳೂರ ವಿಜಯ, ‘ವರ್ಷದಲ್ಲಿ ಒಂದು ದಿನ ಲೋಹಿಯಾ ಅವರನ್ನು ಸ್ಮರಿಸಿದರೆ ಸಾಲದು. ಅವರ ತತ್ವ, ಆದರ್ಶಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು. ಅದನ್ನು ಮುಂದಿನ ಪೀಳಿಗೆಯವರಿಗೂ ವರ್ಗಾಯಿಸಬೇಕು. ಈ ಉದ್ದೇಶ ಸಾಕಾರಗೊಳ್ಳಬೇಕಾದರೆ ನಾವು ಮೊದಲು ಯುವಕರನ್ನು ಒಗ್ಗೂಡಿಸಬೇಕು. ಅವರ ಮನಸ್ಸಿನಲ್ಲಿ ಸಮಾಜವಾದದ ಬೀಜ ಬಿತ್ತಿ ಅದನ್ನು ಪೋಷಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಸಮಾಜವಾದಿ ಚಿಂತಕ ಕಾಳಪ್ಪ ‘ಸರ್ವಾಧಿಕಾರಿ ಶಕ್ತಿಗಳು ಇಂದು ಕೇಕೆ ಹಾಕಿ ನಗುತ್ತಿವೆ. ಅವರ ಅಟ್ಟಹಾಸವನ್ನು ಅಡಗಿಸುವ ಶಕ್ತಿಯನ್ನು ಸಮಾಜವಾದ ಕಳೆದುಕೊಂಡಿಲ್ಲ. ಕಾಲಚಕ್ರ ತಿರುಗುತ್ತಲೇ ಇರುತ್ತದೆ. ನಿರಂಕುಶ ಪ್ರಭುತ್ವ ಕೊನೆಗೊಳ್ಳುವ ಕಾಲ ಸಮೀಪಿಸುತ್ತಿದೆ’ ಎಂದರು.

ಪ್ರದೀಪ್‌ ವೆಂಕಟರಾಮ್‌, ಕೆ.ವಿ.ನಾಗರಾಜಮೂರ್ತಿ, ದಯಾನಂದ್‌ ಕೋಲಾರ, ಟಿ.ಪ್ರಭಾಕರ್‌, ಅಲಿಬಾಬಾ, ನರೇಂದ್ರ ಹಾಗೂ ಸುಷ್ಮಿತಾ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು