ಶನಿವಾರ, ಸೆಪ್ಟೆಂಬರ್ 18, 2021
28 °C
ಖಾಸಗೀಕರಣ–ಕೇಸರೀಕರಣದ ನೀತಿ:

ರಾಜ್ಯ ಸರ್ಕಾರದ ಅಧಿಕಾರ ಕಸಿಯುವ ಎನ್‌ಇಪಿ: ವೈ.ಎಸ್.ವಿ. ದತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೇಂದ್ರಸರ್ಕಾರವು ತರಾತುರಿಯಲ್ಲಿ ಜಾರಿ ಮಾಡಲು ಹೊರಟಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ಒಕ್ಕೂಟ ವ್ಯವಸ್ಥೆಗೇ ಧಕ್ಕೆ ತರುತ್ತದೆ. ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಕೇಂದ್ರಸರ್ಕಾರಕ್ಕೆ ಹೋಗುತ್ತಿದ್ದಂತೆ, ಈ ಕ್ಷೇತ್ರದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಹಕ್ಕನ್ನು ರಾಜ್ಯಸರ್ಕಾರಗಳು ಕಳೆದುಕೊಳ್ಳುತ್ತವೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸಮುದಾಯ ಕರ್ನಾಟಕ ಸಂಘಟನೆಯು ‘ನೂತನ ಶಿಕ್ಷಣ ನೀತಿ ಮತ್ತು ಒಕ್ಕೂಟ ಧರ್ಮ’ದ ಕುರಿತು ಆನ್‌ಲೈನ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಚರ್ಚೆಯಲ್ಲಿ ಮಾತನಾಡಿದ ಅವರು, ‘ಶಿಕ್ಷಣ ತಜ್ಞರು, ಉಪನ್ಯಾಸಕರು, ವಿರೋಧ ಪಕ್ಷಗಳು ಮತ್ತು ಪೋಷಕರ ಜೊತೆ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ರೂಪಿಸಿರುವ ಈ ನೀತಿಯನ್ನು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

‘ಎಲ್ಲರ ಜೊತೆ ಚರ್ಚಿಸಿ, ಅಲ್ಲಿ ಮೂಡಿಬರುವ ಅಭಿಪ್ರಾಯದ ಆಧಾರದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಬೇಕು’ ಎಂದೂ ಹೇಳಿದರು.

‘ಭಾಷಾ ಕಲಿಕೆಯನ್ನು ಕೇವಲ ಎರಡು ಸೆಮಿಸ್ಟರ್‌ಗಳಿಗೆ ಸೀಮಿತಗೊಳಿಸಲಾಗಿದೆ. ಕನಿಷ್ಠ ಆರು ಸೆಮಿಸ್ಟರ್‌ ಅಂದರೆ, ಮೂರು ವರ್ಷಗಳಾದರೂ ಭಾಷೆಯ ಕಲಿಕೆಗೆ ಆದ್ಯತೆ ನೀಡಬೇಕು’ ಎಂದರು.

ಜೆಡಿಎಸ್‌ ಮುಖಂಡ ವೈ.ಎಸ್.ವಿ. ದತ್ತ, ‘ಈ ನೀತಿಯು ಒಕ್ಕೂಟ ವ್ಯವಸ್ಥೆಯ ಜಾಯಮಾನಕ್ಕೆ ಹೊಂದುವುದಿಲ್ಲ. ಏಕೆಂದರೆ, ರಾಜ್ಯಸರ್ಕಾರಗಳನ್ನು ವಿಶ್ವಾಸಕ್ಕೇ ತೆಗೆದುಕೊಂಡಿಲ್ಲ. ಹೊಸ ನೀತಿಯನ್ನು ರಾಜ್ಯಗಳ ಮೇಲೆ ಹೇರುವ ಕೆಲಸ ನಡೆಯುತ್ತಿದೆ’ ಎಂದರು.

‘ಪದವಿಯ ಅವಧಿಯನ್ನು ನಾಲ್ಕು ವರ್ಷಕ್ಕೆ ಏರಿಸಿರುವುದರಿಂದ ಗ್ರಾಮೀಣ ಪ್ರದೇಶ, ಹಿಂದುಳಿದ, ಕೆಳಸ್ತರದ ವಿದ್ಯಾರ್ಥಿಗಳಿಗೆ ಕಷ್ಟವಾಗಲಿದೆ. ಮೂರು ವರ್ಷಗಳ ಪದವಿಯ ಸಂದರ್ಭದಲ್ಲಿಯೇ, ಅರ್ಧಕ್ಕೆ ಶಿಕ್ಷಣ ತೊರೆದು ದುಡಿಯಲು ಹೋಗುವಂತಹ ಅನಿವಾರ್ಯತೆಯಲ್ಲಿ ಈ ವಿದ್ಯಾರ್ಥಿಗಳು ಇರುತ್ತಾರೆ. ಮುಂದೆ ಈ ಎನ್‌ಇಪಿಯ ಬಹುಶಿಸ್ತಿನ ಶಿಕ್ಷಣ ಪಡೆಯಲು ವರ್ಷಕ್ಕೆ ₹7 ಲಕ್ಷ ಖರ್ಚು ಮಾಡಬೇಕು. ಅಂದರೆ, ನಾಲ್ಕು ವರ್ಷಗಳ ಪದವಿ ಪೂರೈಸಲು ₹28 ಲಕ್ಷ ಬೇಕಾಗುತ್ತದೆ. ಬಡ ವಿದ್ಯಾರ್ಥಿಗಳಿಗೆ ಇದನ್ನು ಭರಿಸಲು ಸಾಧ್ಯವಾಗುತ್ತದೆಯೇ’ ಎಂದು ಅವರು ಪ್ರಶ್ನಿಸಿದರು.

‘ಪ್ರಾದೇಶಿಕ ಭಾಷೆಗಳು ಅಂದರೆ, ಕನ್ನಡ ಸಾಹಿತ್ಯ, ಸಂಸ್ಕೃತಿ, ಕಾವ್ಯದ ಕಲಿಕೆಯನ್ನು ಒಂದು ವರ್ಷಕ್ಕೇ ಮುಗಿಸಿಬಿಡಿ ಎನ್ನುವುದರ ಮೂಲಕ ನಮ್ಮ ಸಂಸ್ಕೃತಿಗೆ ಧಕ್ಕೆ ತರುವ ಕೆಲಸವನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ. ಭಾಷೆ, ಸಾಹಿತ್ಯ ಮತ್ತು ಪ್ರಾದೇಶಿಕ ಸೊಗಡನ್ನು ನಮ್ಮ ಮಕ್ಕಳಿಗೆ ಪರಿಚಯಿಸಬೇಕು ಎಂದು ಸಂವಿಧಾನವೇ ಹೇಳಿದೆ’ ಎಂದರು.

‘ಇತಿಹಾಸ ರಾಷ್ಟ್ರೀಯ ವಿಷಯವಲ್ಲ. ಈ ವಿಷಯವನ್ನೂ ರಾಷ್ಟ್ರೀಯಗೊಳಿಸುವ ಯತ್ನ ನಡೆಯುತ್ತಿದೆ. ಅಂದರೆ, ಷಹಜಹಾನ್‌–ಮುಮ್ತಾಜ್‌ರ ಪ್ರೇಮದ ಸಂಕೇತದಂತಿರುವ ತಾಜ್‌ಮಹಲ್‌ ಕೇಸರೀಕರಣದ ಪಂಡಿತರ ಕೈಗೆ ಸಿಕ್ಕು ತೇಜೋಮಹಲ್ ಅಥವಾ ಇನ್ನಾವುದಾದರೂ ದೇವಸ್ಥಾನವಾಗಿಬಿಡುತ್ತದೆ. ಇದು ಖಾಸಗೀಕರಣ ಮತ್ತು ಕೇಸರೀಕರಣದ ನೀತಿ’ ಎಂದು ಟೀಕಿಸಿದರು.

ಜೆಎನ್‌ಯು ಕನ್ನಡ ಅಧ್ಯಯನ ಪೀಠದ ನಿವೃತ್ತ ಮುಖ್ಯಸ್ಥ ಪುರುಷೋತ್ತಮ ಬಿಳಿಮಲೆ, ಸಮುದಾಯ ಕರ್ನಾಟಕದ ಅಧ್ಯಕ್ಷ ಅಚ್ಯುತ, ಜನವಾದಿ ಸಂಘಟನೆಯ ಕೆ.ಎಸ್. ವಿಮಲಾ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.

‘ಕನ್ನಡ, ಕನ್ನಡಿಗರ ಮೇಲಿನ ದಾಳಿ’

‘ಹೊಸ ಶಿಕ್ಷಣ ನೀತಿಯು ಭಾಷಾ ಶಿಕ್ಷಣವನ್ನು ಮೊಟಕುಗೊಳಿಸುವ ಮೂಲಕ ಪರೋಕ್ಷವಾಗಿ ಕನ್ನಡ ಮತ್ತು ಕನ್ನಡಿಗರ ಮೇಲೆ ದಾಳಿ ನಡೆಸುವ ಹುನ್ನಾರವಾಗಿದೆ’ ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ದೂರಿದರು.

‘ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಪರ ಇರುವ ಕೇಂದ್ರಸರ್ಕಾರವಿದು. ಸಾರ್ವಜನಿಕ ರಂಗವನ್ನು ಆದಷ್ಟು ಬೇಗ ತಮ್ಮ ಕಪಿಮುಷ್ಠಿಗೆ ತೆಗೆದುಕೊಳ್ಳಬೇಕು ಎಂದು ಕಾರ್ಪೊರೇಟ್ ಕಂಪನಿಗಳು ಹವಣಿಸುತ್ತಿವೆ. ಈಗ ಶಿಕ್ಷಣ ಕ್ಷೇತ್ರವನ್ನೂ ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಖಾಸಗಿ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಇಂತಹ ಕಾರ್ಪೊರೇಟ್‌ ಕಂಪನಿಗಳ ಹಿತಾಸಕ್ತಿಗೆ ಪೂರಕವಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು