ಮಂಗಳವಾರ, ಜನವರಿ 31, 2023
27 °C

ಶಾಸಕರ ಭವನದ ಬಳಿ ಎಸ್‌ಸಿ–ಎಸ್‌ಟಿ ಗುತ್ತಿಗೆದಾರರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಗುತ್ತಿಗೆದಾರರಿಗೆ ₹50 ಲಕ್ಷಗಳವರೆಗಿನ ಸರ್ಕಾರಿ ಕಾಮಗಾರಿಗಳಲ್ಲಿ ಮೀಸಲಾತಿ ಮಿತಿಯನ್ನು ₹1 ಕೋಟಿಗೆ ಹೆಚ್ಚಿಸುವಂತೆ ಒತ್ತಾಯಿಸಿ ಎಸ್‌ಸಿ–ಎಸ್‌ಟಿ ಗುತ್ತಿಗೆದಾರರು ಶಾಸಕರ ಭವನದಲ್ಲಿ ಪ್ರತಿಭಟನೆ ನಡೆಸಿದರು.

ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಸಭೆ ನಡೆಯುವಾಗ ಗುತ್ತಿಗೆದಾರ ಸಂಘದ ಪ್ರತಿನಿಧಿಗಳು ಧರಣಿ ನಡೆಸಿ ಸಮಿತಿಗೆ ತಮ್ಮ ಅಹವಾಲು ಸಲ್ಲಿಸಿದರು. 

ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಮನವಿಯನ್ನು ಸ್ವೀಕರಿಸಿ, ಮುಂದಿನ ವಾರ ನಡೆಯುವ ಸಮಿತಿಯ ಸಭೆಯಲ್ಲಿ ವಿಷಯವನ್ನು ಕೈಗೆತ್ತಿಕೊಳ್ಳಲಾಗುವುದು. ಅಲ್ಲಿ ಈ ಸಂಬಂಧ ತೀರ್ಮಾನ ತೆಗೆದುಕೊಂಡು ಮುಖ್ಯಮಂತ್ರಿ ಅವರ ಬಳಿ ನಿಯೋಗ ಒಯ್ಯುವುದಾಗಿ ಭರವಸೆ ನೀಡಿದರು ಎಂದು ಸಂಘದ ರಾಜ್ಯಾಧ್ಯಕ್ಷ ಎನ್‌.ಮಹದೇವಸ್ವಾಮಿ ತಿಳಿಸಿದರು.

ಮೀಸಲಾತಿ ಮಿತಿ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿಯವರಿಗೆ ಅನೇಕ ಬಾರಿ ಮನವಿ ಮಾಡಿದ್ದೆವು. ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಲು ಆರ್ಥಿಕ ಇಲಾಖೆಗೆ ಮುಖ್ಯಮಂತ್ರಿಯವರು ಸೂಚಿಸಿದ್ದರು. ಆರ್ಥಿಕ ಇಲಾಖೆ ಗುತ್ತಿಗೆ ಕಾಮಗಾರಿಗಳ ಮೀಸಲಾತಿ ಮಿತಿಯನ್ನು ₹50 ಲಕ್ಷದಿಂದ ₹1 ಕೋಟಿಗೆ ಹೆಚ್ಚಿಸಲು ಮುಖ್ಯಮಂತ್ರಿಯವರಿಗೆ ಕಡತ ಮಂಡಿಸಲಾಗಿದೆ. ಆದರೆ, ಮುಖ್ಯಮಂತ್ರಿಯವರು ಈವರೆಗೂ ಅನುಮೋದನೆ ನೀಡಿಲ್ಲ ಎಂದು ಅವರು ಹೇಳಿದರು.

ಅಲ್ಲದೇ, ಜಾರಿಯಲ್ಲಿರುವ ಮೀಸಲು ಗುತ್ತಿಗೆ ಕಾಮಗಾರಿಗಳಲ್ಲಿ ಈ ಸಮುದಾಯಗಳವರು ಪಾಲ್ಗೊಳ್ಳದಂತೆ ತಡೆಯಲು ಕಳೆದ ಮೇ ತಿಂಗಳಲ್ಲಿ ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ ಎಂದೂ ಮಹದೇವಸ್ವಾಮಿ ದೂರಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು