ಪರಿಸರ ಮತ್ತು ಕಾನೂನಿನ ಅನ್ವಯ ಈ ಯೋಜನೆಗಳು ತಪ್ಪಾಗಿವೆ. ಇದನ್ನು ಸರಿಪಡಿಸದೇ ಇದ್ದರೆ ಮುಂದೆ ಅನಾಹುತಕ್ಕೆ ಕಾರಣವಾಗಬಹುದು. ಅದಕ್ಕಾಗಿಯೇ ಶರಾವತಿ ಮತ್ತು ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆಗಳ ವಿರುದ್ಧದ ಹೋರಾಟದಲ್ಲಿ ನಾನು ಭಾಗಿಯಾಗಿದ್ದೇನೆ.
ನ್ಯಾ. ಸಂತೋಷ್ ಎನ್. ಹೆಗ್ಡೆ, ವಿಶ್ರಾಂತ ಲೋಕಾಯುಕ್ತ
ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಿ ಎಂದು ನಿಮ್ಮನ್ನು ಜನರು ಆಯ್ಕೆ ಮಾಡಿರುವುದು. ಪರಿಸರವನ್ನು ನಾಶ ಮಾಡಲು ನಿಮ್ಮನ್ನು ಆಯ್ಕೆ ಮಾಡಿರುವುದಲ್ಲ. ಸರ್ಕಾರ ಸರಿದಾರಿಗೆ ಬಾರದೇ ಇದ್ದರೆ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸುವುದು ಸೇರಿದಂತೆ ಎಲ್ಲ ಕಾನೂನು ಹೋರಾಟಗಳೊಂದಿಗೆ ನಾನಿದ್ದೇನೆ.
ನ್ಯಾ. ವಿ. ಗೋಪಾಲಗೌಡ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ
ಪಶ್ಚಿಮ ಘಟ್ಟದ ಹೃದಯವನ್ನು ಸರ್ಕಾರ ಬಗೆಯುತ್ತಿದೆ. ಪರಿಸರಕ್ಕಿಂತ ಚುನಾವಣಾ ರಾಜಕೀಯವೇ ಮುಖ್ಯವಾಗಿದೆ. ವಿವೇಕವಂತ ವಿಚಾರವಂತ ಬುದ್ಧಿವಂತ ಜನರಿಂದಲೇ ಪ್ರಕೃತಿಗೆ ತೊಂದರೆ ಒದಗಿಬಂದಿದೆ. ಇದನ್ನು ತಡೆಯಬೇಕಿದೆ.
ಎ.ಟಿ. ರಾಮಸ್ವಾಮಿ ಅಧ್ಯಕ್ಷ ‘ಪರಿಸರಕ್ಕಾಗಿ ನಾವು’ ಸಂಘಟನೆ
ಪಶ್ಚಿಮಘಟ್ಟದಲ್ಲಿ ಟಿಂಬರ್ ಮಾಫಿಯಾವೇ ಎಲ್ಲ ಯೋಜನೆಗಳ ಹಿಂದೆ ಕೆಲಸ ಮಾಡುತ್ತಿದೆ. ಈ ಮಾಫಿಯಾಕ್ಕೆ ಅನುಕೂಲ ಮಾಡಿಕೊಳ್ಳಲು ಬೇರೆ ಬೇರೆ ಹೆಸರಲ್ಲಿ ಸರ್ಕಾರ ಯೋಜನೆಯನ್ನು ಹಾಕಿಕೊಳ್ಳುತ್ತದೆ.