ಬುಧವಾರ, ಸೆಪ್ಟೆಂಬರ್ 23, 2020
27 °C
ವ್ಯಾಪಾರ ವಹಿವಾಟು ಇಲ್ಲ; ಬಾಡಿಗೆ ಪಾವತಿಗೂ ಪರದಾಟ

ಕೊರೊನಾ ಹಾವಳಿ | ಬಾಗಿಲು ಮುಚ್ಚಿದ 50 ಸಾವಿರ ಅಂಗಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್ ಸಡಿಲ ಗೊಂಡ ನಂತರವೂ ವ್ಯಾಪಾರ ವಹಿವಾಟು ಚುರುಕುಗೊಳ್ಳದ ಕಾರಣ ನಗರದಲ್ಲಿ ಸಾಕಷ್ಟು ಅಂಗಡಿ ಗಳು, ಸಣ್ಣ ಕೈಗಾರಿಕೆಗಳು ಬಾಗಿಲನ್ನೇ ತೆರೆದಿಲ್ಲ. 50 ಸಾವಿರಕ್ಕೂ ಹೆಚ್ಚು ಅಂಗಡಿಗಳು ಮುಚ್ಚಿವೆ ಎಂದು ಎಫ್‌ಕೆಸಿಸಿಐ ಅಂದಾಜಿಸಿದೆ.

ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ, ರೆಡಿಮೇಡ್ ಗಾರ್ಮೆಂಟ್‌ಗಳು,ಸ್ಟೇಷನರಿ, ಮೊಬೈಲ್ ಪರಿಕರ, ಪ್ಲಾಸ್ಟಿಕ್ ಸಲಕರಣೆ ಅಂಗಡಿಗಳು, ಸಣ್ಣ ಸಣ್ಣ ಹೋಟೆಲ್‌ಗಳಲ್ಲಿ ವಹಿವಾಟು ಸಂಪೂರ್ಣ ಕುಸಿದ ಕಾರಣ ಹಲವರು ಬಂದ್ ಮಾಡಿದ್ದಾರೆ. ಬಾಡಿಗೆ ಪಾವತಿ ಸಲು ಸಾಧ್ಯವಾಗದೆ ಕೆಲವರು ಅಂಗಡಿ ಮಳಿಗೆ ಖಾಲಿ ಮಾಡಿದ್ದು, ಮಳಿಗೆ ಖಾಲಿ ಇದೆ ಎಂಬ ಫಲಕಗಳು ಅಲ್ಲಲ್ಲಿ ನೇತಾಡುತ್ತಿವೆ.

‘ಬಾಡಿಗೆ ಪಾವತಿಸದ ಕಾರಣ ಮುಂಗಡ ಹಣದಲ್ಲಿ ಬಾಡಿಗೆ ಜಮೆ ಮಾಡಿಕೊಳ್ಳುತ್ತಿದ್ದೇವೆ. ಆ ಹಣವೂ ಬಾಕಿ ಬಾಡಿಗೆಗೆ ಸಮವಾದ ನಂತರ ಮಳಿಗೆ ಖಾಲಿ ಮಾಡಿಸಲಾಗುವುದು. ಖಾಲಿ ಮಾಡಿಸಿದ ನಂತರ ಹೊಸದಾಗಿ ಬಾಡಿಗೆಗೆ ಬರುವವರು ಯಾರು ಎಂಬ ಚಿಂತೆಯೂ ಕಾಡುತ್ತಿದೆ’ ಎಂದು ಬಿಟಿಎಂ ಲೇಔಟ್‌ನ ಇಮ್ರಾನ್ ಹೇಳಿದರು.

‘ಕೋರಮಂಗಲದ ಕೆಲವು ಹೋಟೆಲ್‌ಗಳು ಬಾಗಿಲು ತೆರೆದೇ ಇಲ್ಲ. ಸ್ನೇಹಿತೆ ಜತೆ ಸಾಮಾನ್ಯವಾಗಿ ಹೋಗುತ್ತಿದ್ದ ಹೋಟೆಲ್‌ ಈಗ ಪಾಳು ಬಿದ್ದ ಕೊಂಪೆಯಂತಾಗಿದೆ. ಮತ್ತೆ ತೆರೆಯುವ ಲಕ್ಷಣಗಳೂ ಕಾಣಿಸುತ್ತಿಲ್ಲ’ ಎಂದು ಐ.ಟಿ ಕಂಪನಿಯೊಂದರ ಉದ್ಯೋಗಿ ಚೇತನ್ ಹೇಳಿದರು.

‘ಮಾಲ್‌ಗಳ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ತೆರೆದಿರುವ ಮಾಲ್‌ಗಳಲ್ಲಿ ಮೊದಲಿದ್ದ ಕಳೆ ಮಾಯವಾಗಿದೆ. ಒಳಗಿನ ಕೆಲವು ಅಂಗಡಿಗಳು
ತೆರೆದಿದ್ದರೆ, ಹಲವು ಮುಚ್ಚಿವೆ. ಇಡೀ ಮಾಲ್‌ನಲ್ಲಿ ನಾಲ್ಕೈದು ಗ್ರಾಹಕರು ಓಡಾಡುವುದು ಕಾಣಿಸುತ್ತದೆ’ ಎಂದು ಅವರು ತಿಳಿಸಿದರು.

‘ನಗರದಲ್ಲಿ 4 ಲಕ್ಷ ಅಂಗಡಿಗಳಿವೆ. ಇವುಗಳಲ್ಲಿ ಶೇ 12ರಷ್ಟು ಅಂದರೆ 50 ಸಾವಿರಕ್ಕೂ ಹೆಚ್ಚು ಅಂಗಡಿಗಳು ಬಾಗಿಲು ಮುಚ್ಚಿಕೊಂಡಿವೆ ಎಂದು ಅಂದಾಜಿಸಲಾಗಿದೆ. ಇವು ಮತ್ತೆ ತೆರೆಯುವ ಸಾಧ್ಯತೆ ತೀರಾ ಕಡಿಮೆ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್‌. ಜನಾರ್ದನ್ ಹೇಳಿದರು.

ಸಣ್ಣ ಕೈಗಾರಿಕೆಗಳೂ ಬಂದ್
ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆ ಗಳ ಸ್ಥಿತಿಯೂ ಇದೇ ಆಗಿದೆ. ಬೇಡಿಕೆ ಇಲ್ಲದೆ ಕೆಲವರು ಕೈಗಾರಿಕೆಗಳನ್ನು ಮುಚ್ಚಿದ್ದರೆ, ಮತ್ತೆ ಕೆಲವರು ಕಾರ್ಮಿಕರಿಲ್ಲದ ಕಾರಣಕ್ಕೆ ಬಾಗಿಲು ತೆರೆದಿಲ್ಲ.

ಪೀಣ್ಯ ಕೈಗಾರಿಕಾ ಪ್ರದೇಶದ ರಾಜಗೋಪಾಲನಗರ, ದೊಡ್ಡಣ್ಣ ಕೈಗಾರಿಕಾ ವಲಯ, ಬೈರವೇಶ್ವರ ಕೈಗಾರಿಕಾ ವಲಯ ದಲ್ಲಿ ಶೇ 8ರಿಂದ ಶೇ 10ರಷ್ಟು ಕೈಗಾರಿಕೆಗಳು ಬಾಗಿಲು ಮುಚ್ಚಿಕೊಂಡಿವೆ ಎಂದು ಪೀಣ್ಯ ಕೈಗಾರಿಕಾ ಸಂಘದ ಉಪಾಧ್ಯಕ್ಷ ಪ್ರಾಣೇಶ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು