ಮಂಗಳವಾರ, ಅಕ್ಟೋಬರ್ 27, 2020
18 °C
ಪೌರಕಾರ್ಮಿಕರಿಗಿಲ್ಲ ಕೈಗವಸು: ಬಿಬಿಎಂಪಿ ಆಡಳಿತಾಧಿಕಾರಿ ಅಸಮಾಧಾನ

ಸ್ವಚ್ಚತಾ ಸಿಬ್ಬಂದಿ ಮೇಲೂ ಮಾನವೀಯತೆ ಬೇಕಲ್ಲವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೌರಕಾರ್ಮಿಕರು ಕೈಗವಸು ಧರಿಸದೆಯೇ ಕೆಲಸ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ, ‘ಸ್ವಚ್ಛತೆ ಕಾಪಾಡುವ ಸಿಬ್ಬಂದಿಯ ಮೇಲೆ‌ ಮಾನವೀಯತೆ ಇರಬೇಕಲ್ಲವೇ. ಅವರ ಆರೋಗ್ಯವೂ ಮುಖ್ಯವಲ್ಲವೇ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. 

‘ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವವರು ಪೌರಕಾರ್ಮಿಕರು. ಆ ಕರ್ತವ್ಯವನ್ನು ಅವರು ಸರಿಯಾಗಿ ನಿಭಾಯಿಸುತ್ತಿದ್ದಾರೆ. ಅವರಿಗೆ ಶೂ, ಕೈಗವಸು, ಮುಖಗವಸು, ಸ್ಯಾನಿಟೈಸರ್... ಮುಂತಾದ ಎಲ್ಲ ರೀತಿಯ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಬೇಕು. ಎಲ್ಲರೂ ಸುರಕ್ಷಾ ಸಾಮಗ್ರಿಗಳನ್ನು ಧರಿಸಿಯೇ ಕೆಲಸ ಮಾಡಬೇಕು’ ಎಂದು ಸೂಚನೆ ನೀಡಿದರು.

ಬಿಬಿಎಂಪಿ ಕಸ ವಿಲೇವಾರಿ ಪ್ರಕ್ರಿಯೆಯನ್ನು ವೀಕ್ಷಿಸುವ ಸಲುವಾಗಿ ಅವರು ಗಾಂಧಿನಗರ ವಾರ್ಡ್‌ನ ಮಸ್ಟರಿಂಗ್ ಕೇಂದ್ರಗಳಿಗೆ ಹಾಗೂ ಆಟೊ ಟಿಪ್ಪರ್‌ನಿಂದ ಕಾಂಪ್ಯಾಕ್ಟರ್‌ಗೆ ಕಸ ವರ್ಗಾವಣೆ ಮಾಡುವ ತಾಣಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಮಾರ ಪಾರ್ಕ್ ಬಳಿಯ ಕಸ ವರ್ಗಾವಣೆ ತಾಣದಲ್ಲಿ ಸಿಬ್ಬಂದಿ ಕೈಗವಸು ಧರಿಸದೆಯೇ ಕೆಲಸ ಮಾಡುತ್ತಿರುವುದು ಕಂಡುಬಂತು. ‘ಇವರೇಕೆ ಕೆಲಸದ ವೇಳೆ ಸುರಕ್ಷಾ ಸಾಮಗ್ರಿಗಳನ್ನು ಬಳಸುತ್ತಿಲ್ಲ. ಅವರ ಸುರಕ್ಷತೆ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಉಪ್ಪಾರಪೇಟೆ ಪೊಲೀಸ್ ಠಾಣೆ ಹಿಂಭಾಗದ ಮಸ್ಟರಿಂಗ್ ಕೇಂದ್ರದಲ್ಲಿ ಬಯೋಮೆಟ್ರಿಕ್ ಯಂತ್ರದಿಂದ ಹಾಜರಾತಿ ಪಡೆಯುವುದನ್ನು ಪರಿಶೀಲಿಸಿದರು. ಸ್ವಾತಂತ್ರ್ಯ ಉದ್ಯಾನವನ ಬಳಿಯ ಒಣಕಸ ಸಂಗ್ರಹ ಕೇಂದ್ರಕ್ಕೆ (ಡಿಡಬ್ಲ್ಯುಸಿಸಿ) ಭೇಟಿ ನೀಡಿ ಪರಿಶೀಲನೆ ಮಾಡಿದರು. ವರ್ಗಾವಣೆ ಕೇಂದ್ರದಲ್ಲಿ ಕಸವನ್ನು ಮುಚ್ಚಿದ ಮಾದರಿಯಲ್ಲೇ ವಿಲೇವಾರಿ ಮಾಡಬೇಕು. ಇದರಿಂದ ಸ್ಥಳೀಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಯಂ, ನೇರ ಪಾವತಿ ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರಿಗೂ ಒಂದೇ ರೀತಿಯ ಸಮವಸ್ತ್ರ ಒದಗಿಸಬೇಕು. ಅದರಲ್ಲಿ ಬಿಬಿಎಂಪಿ ಚಿಹ್ನೆ ಇರಬೇಕು ಎಂದು ಸೂಚನೆ ನೀಡಿದರು.
ಪಾದಚಾರಿ ಮಾರ್ಗ ಸರಿಪಡಿಸಿ: ಪಾದಚಾರಿ ಮಾರ್ಗಗಳಲ್ಲಿ ಕಸ, ಕಟ್ಟಡ ತ್ಯಾಜ್ಯ ರಾಶಿಬಿದ್ದಿರುವ ಬಗ್ಗೆಯೂ ಆಡಳಿತಾಧಿಕಾರಿ ಗರಂ ಆದರು. ಇವುಗಳನ್ನು ಕೂಡಲೇ ತೆರವುಗೊಳಿಸಬೇಕು. ಪಾದಚಾರಿ ಮಾರ್ಗ ಹದಗೆಟ್ಟಿದ್ದರೆ ಕೂಡಲೆ ದುರಸ್ತಿಪಡಿಸಬೇಕು.  ಫುಟ್‌ಪಾತ್‌ಗಳನ್ನು ಅನಧಿಕೃತ ಒತ್ತುವರಿ ಮಾಡಿಕೊಂಡಿದ್ದರೆ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು. 

ರಸ್ತೆಯಲ್ಲಿ ತಿಂಗಳಾನುಗಟ್ಟಲೆ ನಿಂತಿರುವ ಹಳೆಯ ವಾಹನಗಳನ್ನು ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ತೆರವುಗೊಳಿಸಬೇಕು. ಅವಕಾಶ ಇಲ್ಲದ ಕಡೆ ಪಾದಚಾರಿ ಮಾರ್ಗದ ಪಕ್ಕದಲ್ಲಿ ವಾಹನ ನಿಲ್ಲಿಸದಂತೆ ನೋಡಿಕೊಳ್ಳಬೇಕು ಎಂದರು.

ಪಶ್ಚಿಮ ವಲಯ ಜಂಟಿ ಆಯುಕ್ತ ಚಿದಾನಂದ, ವಾರ್ಡ್ ನೋಡಲ್ ಅಧಿಕಾರಿ ಗೀತಾ  ಉಪಸ್ಥಿತರಿದ್ದರು.

‘ಮಾದರಿ ವಾರ್ಡ್ ಗುರುತಿಸಿ’

‘ಉತ್ತಮ ರೀತಿ ಕಸ ವಿಲೇವಾರಿ ಮಾಡುತ್ತಿರುವ ವಾರ್ಡ್‌ಗಳನ್ನು ಎ, ಬಿ, ಸಿ ಎಂದು ವರ್ಗೀಕರಣ ಮಾಡಿ ಮಾದರಿ ವಾರ್ಡ್‌ಗಳನ್ನು ಗುರುತಿಸಬೇಕು’ ಎಂದು ಸಲಹೆ ನೀಡಿದರು.

‘ಮೂಲದಲ್ಲೇ ಕಸ ವಿಂಗಡಣೆ, ಮನೆ ಮನೆ ಕಸ ಸಂಗ್ರಹದ ವ್ಯವಸ್ಥಿತ ಅನುಷ್ಠಾನವನ್ನು ಆಧರಿಸಿ ಪ್ರತಿ ವಾರ್ಡ್‌ಗೂ ರ‍್ಯಾಂಕಿಂಗ್‌ ನೀಡಲಾಗತ್ತದೆ’ ಎಂದು ವಿಶೇಷ ಆಯುಕ್ತ ಡಿ.ರಂದೀಪ್‌ ಪ್ರತಿಕ್ರಿಯಿಸಿದರು. 

ಜೈವಿಕ ಅನಿಲ ಘಟಕ ತಪಾಸಣೆ

ಬಿಬಿಎಂಪಿ ವತಿಯಿಂದ ಸ್ಥಾಪಿಸಿರುವ ಜೈವಿಕ ಅನಿಲ ಘಟಕಕ್ಕೂ ಭೇಟಿ ನೀಡಿ ಅದರ ಕಾರ್ಯನಿರ್ವಹಿಸುವ ಬಗ್ಗೆ ಮಾಹಿತಿ ಪಡೆದರು. ಆಹಾರ ತ್ಯಾಜ್ಯ, ಪ್ರಾಣಿ ತ್ಯಾಜ್ಯ, ಸೆಗಣಿ ಬಳಸಿ ಜೈವಿಕ ಅನಿಲ ಉತ್ಪಾದನೆ ಮಾಡಬಹುದು. ದಿನಕ್ಕೆ 5 ಟನ್ ಸಾಮರ್ಥ್ಯವನ್ನು ಈ ಘಟಕವು ಹೊಂದಿದೆ. ಇಲ್ಲಿ ಉತ್ಪತ್ತಿ ಆಗುವ ವಿದ್ಯುತ್‌ನಿಂದ ಸ್ವಾತಂತ್ರ್ಯ ಉದ್ಯಾನದ ಬೀದಿ ದೀಪಗಳನ್ನು ಬೆಳಗಿಸಲಾಗುತ್ತಿದೆ’ ಎಂದು ಮುಖ್ಯ ಎಂಜಿನಿಯರ್‌ ವಿಶ್ವನಾಥ್‌ ಮಾಹಿತಿ ನೀಡಿದರು.

ಕಸ ಸಂಗ್ರಹಕ್ಕೆ ಹಳೆ ಮಾದರಿಯ ತಳ್ಳುಗಾಡಿ ಬಳಸುತ್ತಿರುವುದಕ್ಕೆ ಆಡಳಿತಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ಹಳೆಯ ತಳ್ಳುಗಾಡಿಗಳನ್ನು ಹಿಂತೆಗದುಕೊಳ್ಳಲು ಸೂಚನೆ ನೀಡಿದರು.

‘ಆಟೊಟಿಪ್ಪರ್ ಹೋಗಲು ಸಾಧ್ಯವಾಗದ ಬೀದಿಗಳಲ್ಲಿ ಮಾತ್ರ ಕಸ ಸಂಗ್ರಹಕ್ಕೆ ತಳ್ಳುಗಾಡಿ ಬಳಸಲಾಗುತ್ತಿದೆ. ರಸ್ತೆಯನ್ನು ಗುಡಿಸಿದಾಗ ಸಿಗುವ ಕಸವನ್ನೂ ಅಲ್ಲಲ್ಲಿ ಗುಡ್ಡೆ ಹಾಕಿ ಆಟೊಗಳ ಮೂಲಕವೇ ಸಂಗ್ರಹಿಸಲು ಸೂಚನೆ ನೀಡಲಾಗಿದೆ’ ಎಂದು ರಂದೀಪ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು