ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿರುವ ಕಡೆಗೆ ತೆರಳಿ ಪಾಠ

ಮಧ್ಯಪ್ರದೇಶದಿಂದ ಬಂದು ಭಿಕ್ಷೆ ಬೇಡುತ್ತಿದ್ದ ಮಕ್ಕಳೀಗ ವಿದ್ಯಾರ್ಥಿಗಳು
Last Updated 4 ಆಗಸ್ಟ್ 2020, 23:29 IST
ಅಕ್ಷರ ಗಾತ್ರ

ಬೆಂಗಳೂರು: ಬಲೂನ್ ಮಾರಿ, ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ವಲಸೆ ಕುಟುಂಬಗಳ 30 ಮಕ್ಕಳು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ವಿವಿಧ ಶಾಲೆಗಳಲ್ಲಿ ಓದು ಮುಂದುವರಿಸಿದ್ದಾರೆ.

ಮಧ್ಯಪ್ರದೇಶದಿಂದ ನಗರಕ್ಕೆ ವಲಸೆ ಬಂದಿದ್ದ ಕುಟುಂಬಗಳು ಜೀವನೋಪಾಯಕ್ಕಾಗಿ ಸಿಗ್ನಲ್‍ಗಳಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದವು. ವಿಜಯನಗರದ ಟೋಲ್‍ಗೇಟ್ ಬಳಿಯ ರಸ್ತೆಬದಿಯಲ್ಲಿ ಇವರು ವಾಸ್ತವ್ಯ ಹೂಡಿದ್ದರು. ಇವರ ಮಕ್ಕಳೆಲ್ಲ ಶಾಲೆಯ ಮುಖಗಳನ್ನು ಕಾಣದೆ, ಬೀದಿಗಳಲ್ಲಿ ನಿಂತು ಭಿಕ್ಷಾಟನೆ ಮಾಡುತ್ತಿದ್ದರು. ಈ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಶಾಲೆಗೆ ಸೇರಿಸಿದವರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ (ಬಿಇಒ) ನಾಗರತ್ನ.

‘2013ರಲ್ಲಿ ಕ್ಷೇತ್ರದ ಸಮೀಕ್ಷೆಯಲ್ಲಿ ತೊಡಗಿದ್ದಾಗ ರಸ್ತೆಬದಿಯಲ್ಲಿ ಈ ಮಕ್ಕಳು ಕಂಡು ಬಂದರು. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ 40 ಮಕ್ಕಳನ್ನು ಶಾಲೆಗೆ ದಾಖಲು ಮಾಡಲಾಯಿತು' ಎಂದು ನಾಗರತ್ನ ವಿವರಿಸಿದರು. ಪ್ರಸ್ತುತ ಅವರು ಬೆಂಗಳೂರು ನಗರ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿಯಾಗಿದ್ದಾರೆ.

‘ಈ ಮಕ್ಕಳೆಲ್ಲಾ ಜಾಣರಿದ್ದಾರೆ. ಓದಿನಲ್ಲಿ ತುಂಬಾ ಆಸಕ್ತಿ ಇದೆ. ಆದರೆ, ಕುಟುಂಬ ಹಿನ್ನೆಲೆಯಿಂದ ಇವರೆಲ್ಲಾ ಶಿಕ್ಷಣದಿಂದ ವಂಚಿತರಾಗಿದ್ದರು. 40 ಮಕ್ಕಳಲ್ಲಿ ಹತ್ತು ವಿದ್ಯಾರ್ಥಿಗಳು ಶಾಲೆ ತೊರೆದಿದ್ದಾರೆ. ಉಳಿದ 30 ಮಕ್ಕಳು ನಗರದ ವಿವಿಧ ಶಾಲೆಗಳಲ್ಲಿ ಓದು ಮುಂದುವರಿಸಿದ್ದಾರೆ. ಆರ್‌ಟಿಇ ಪೂರ್ಣ ಗೊಂಡ ವಿದ್ಯಾರ್ಥಿಗಳು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಲಿಯುತ್ತಿದ್ದಾರೆ’ ಎಂದು ಸಂತಸ ಹಂಚಿಕೊಂಡರು.

‘ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರ ಪಾತ್ರವೂ ಇದೆ. ಮಕ್ಕಳಿಗೆ ಹೋಟೆಲ್‍ನಿಂದ ಉಚಿತವಾಗಿ ಊಟದ ವ್ಯವಸ್ಥೆ ಮಾಡಿದರು. ಹೆಲ್ಪ್ ಟು ಎಜುಕೇಷನ್ ಸಂಸ್ಥೆಯೂ ಸೇರಿ ಹಲವು ದಾನಿಗಳು ಮಕ್ಕಳ ಶಿಕ್ಷಣಕ್ಕೆ ಕೈಜೋಡಿಸಿದರು. ಈ ಕುಟುಂಬಗಳಿಗೆ ಹೊಸಹಳ್ಳಿ ಸರ್ಕಾರಿ ಶಾಲೆ ಬಳಿ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಕೊರೊನಾದಿಂದ ಇಬ್ಬರು ಶಿಕ್ಷಕರು ಮಕ್ಕಳಿರುವಲ್ಲಿಯೇ ತೆರಳಿ, ನಿತ್ಯ ಪಾಠ ಹೇಳಿಕೊಡುತ್ತಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT