ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ನಿರ್ಮಿಸುವವರಿಗೆ ತಾತ್ಕಾಲಿಕ ವ್ಯವಸ್ಥೆ: ಬಿಡಿಎ ಭರವಸೆ

Published 23 ಡಿಸೆಂಬರ್ 2023, 15:24 IST
Last Updated 23 ಡಿಸೆಂಬರ್ 2023, 15:24 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆಯಾಗಿರುವ ನಿವೇಶನದಾರರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬದ್ಧವಾಗಿದೆ’ ಎಂದು ಪ್ರಾಧಿಕಾರದ ಎಂಜಿನಿಯರ್ ಸದಸ್ಯ ಶಾಂತ ರಾಜಣ್ಣ ತಿಳಿಸಿದ್ದಾರೆ.

‘ಬಡಾವಣೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟಿರುವ ಬಹುತೇಕ ಜಮೀನಿನ ಭೂಮಾಲೀಕರು ನ್ಯಾಯಾಲಯದಲ್ಲಿ ವಿವಿಧ ಕಾರಣಗಳಿಂದ ದಾವೆ ಹೂಡಿದ್ದು, ನ್ಯಾಯಾಲಯದಲ್ಲಿ ಪ್ರಾಧಿಕಾರದಿಂದ ವಕೀಲರನ್ನು ನೇಮಿಸಿ ಪರಿಣಾಮಕಾರಿ ವಾದ ಮಂಡಿಸಲಾಗಿದೆ. ನ್ಯಾಯಾಲಯದಲ್ಲಿ ಈ ಎಲ್ಲ ಪ್ರಕರಣಗಳ ತೀರ್ಪು ಕಾಯ್ದಿರಿಸಲಾಗಿದ್ದು, ಪ್ರಾಧಿಕಾರವು ತೊಡಕು ನಿವಾರಣೆಗೆ ಈಗಾಗಲೇ ಕಾರ್ಯಪ್ರವೃತ್ತವಾಗಿದೆ’ ಎಂದು ಹೇಳಿದ್ದಾರೆ.

‘ಭೂವ್ಯಾಜ್ಯದಿಂದ ಪ್ರಾಧಿಕಾರಕ್ಕೆ ಲಭ್ಯವಿದ್ದ ಪ್ರದೇಶದಲ್ಲಿ ರಚಿಸಿರುವ ಪ್ರದೇಶವು ಚದುರಿದ ಪ್ರದೇಶವಾಗಿದ್ದು, ಈ ಕಾರಣದಿಂದ ಅಳವಡಿಸಿರುವ ಕುಡಿಯುವ ನೀರಿನ ಕೊಳವೆ ಹಾಗೂ ಒಳಚರಂಡಿ ಮಾರ್ಗಗಳಲ್ಲಿ ನಿರಂತರತೆ ಕಾಯ್ದುಕೊಳ್ಳಲು ಸಾಧ್ಯವಾಗಿರುವುದಿಲ್ಲ. ಈ ರೀತಿ ಕೊಳವೆ ಸಂಪರ್ಕದ ಜಾಲಗಳಲ್ಲಿ ನಿರಂತರತೆ ಕೊರತೆಯಿಂದ ಬಡಾವಣೆಯ ಕೆಲವು ಬ್ಲಾಕ್‌ಗಳಲ್ಲಿ ಒಳಚರಂಡಿ ವ್ಯವಸ್ಥೆಯಡಿ ಬರುವ ಕೊಳಚೆ ನೀರನ್ನು ಈಗಾಗಲೇ ನಿರ್ಮಿಸಲಾಗಿರುವ ಸಂಸ್ಕರಣಾ ಘಟಕಗಳಿಗೆ ಸಂಪರ್ಕಿಸಲು ಕಷ್ಟಸಾಧ್ಯವಾಗಿದೆ’ ಎಂದಿದ್ದಾರೆ.

‘ಲಭ್ಯ ಸಂಪನ್ಮೂಲ ಬಳಸಿಕೊಂಡು, ಪರ್ಯಾಯ ವ್ಯವಸ್ಥೆಯನ್ನು‌ ತಾತ್ಕಾಲಿಕವಾಗಿ ಒದಗಿಸಲು ಪ್ರಾಧಿಕಾರವು ಬದ್ಧವಾಗಿದೆ. ಸಮಸ್ಯೆಯಿರುವ ಪ್ರದೇಶಗಳಲ್ಲಿ ಮನೆ ನಿರ್ಮಾಣ ಕೈಗೊಂಡಿರುವ ಸಾರ್ವಜನಿಕರು ಕೆಂಪೇಗೌಡ ಬಡಾವಣೆಯ ಕುಡಿಯುವ ನೀರು ಮತ್ತು ಒಳಚರಂಡಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ರನ್ನು ಸಂಪರ್ಕಿಸಿ ತಾತ್ಕಾಲಿಕ ವ್ಯವಸ್ಥೆ ಪಡೆಯಬಹುದು’ ಎಂದು ಕೋರಿದ್ದಾರೆ.

‘ಬಡಾವಣೆಯಲ್ಲಿ ವಿದ್ಯುತ್ ಜಾಲಗಳಲ್ಲಿ ಭೂಗರ್ಭ ಕೇಬಲ್ ಅಳವಡಿಸಲಾಗಿದೆ. ಬಡಾವಣೆಯಲ್ಲಿ ಯಾವುದೇ ಅಪಾಯಕಾರಿ ವಿದ್ಯುತ್ ಮಾರ್ಗ ಇಲ್ಲ. ವಿದ್ಯುತ್ ಜಾಲಗಳ ನಿರ್ವಹಣೆಯನ್ನು ಬೆಸ್ಕಾಂ ನಿರ್ವಹಿಸುತ್ತಿದೆ. ಭೂಗರ್ಭ ಕೇಬಲ್‌ಗಳಿಗೆ ವಿದ್ಯುತ್ ಜಾಲದ ನಿರಂತರತೆ ಸಮಸ್ಯೆಯಿಂದ ಬಡಾವಣೆಯ ಎಲ್ಲ ನಿವೇಶನಗಳಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿರುವುದಿಲ್ಲ. ಸದ್ಯ ಮನೆ ನಿರ್ಮಾಣಕ್ಕೆ ಮುಂದಾಗಿರುವವರು ವಿದ್ಯುತ್ ಸಂಪರ್ಕದ ಅಗತ್ಯವಿದ್ದರೆ, ಬಿಡಿಎ ಎಂಜಿನಿಯರ್‌ಗಳನ್ನು ಸಂಪರ್ಕಿಸಬಹುದು’ ಎಂದು ತಿಳಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಡಿ.11ರಂದು ಪ್ರಕಟವಾಗಿದ್ದ ‘ಬಿಡಿಎ ಎಂಜಿನಿಯರ್‌ಗಳ ವಿರುದ್ಧ ನಿವೇಶನದಾರರ ಆಕ್ರೋಶ’ ವರದಿಗೆ ಶಾಂತ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT