ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಿ ರಾಮೇಶ್ವರಂ ಕೆಫೆ ಪ್ರಕರಣ | ಬಾಂಬ್ ಸ್ಫೋಟಕ್ಕೆ ‘ವಿದೇಶಿ ಹ್ಯಾಂಡ್ಲರ್’ ಸೂಚನೆ

ಸಂಚಿನಲ್ಲಿ 11 ಮಂದಿ ಭಾಗಿ ಪತ್ತೆ
Published 24 ಮೇ 2024, 0:54 IST
Last Updated 24 ಮೇ 2024, 0:54 IST
ಅಕ್ಷರ ಗಾತ್ರ

ಬೆಂಗಳೂರು: ಬ್ರೂಕ್‌ಫೀಲ್ಡ್‌ನಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಲು ವಿದೇಶದಲ್ಲಿರುವ ಹ್ಯಾಂಡ್ಲರ್‌ ಸೂಚನೆ ನೀಡಿದ್ದನೆಂಬ ಸಂಗತಿ ತನಿಖೆಯಿಂದ ಗೊತ್ತಾಗಿದ್ದು, ಕೃತ್ಯದ ಸಂಚಿನಲ್ಲಿ ಭಾಗಿಯಾಗಿದ್ದ 11 ಮಂದಿಯನ್ನು ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಮಾರ್ಚ್ 1ರಂದು ನಡೆದಿದ್ದ ಬಾಂಬ್‌ ಸ್ಫೋಟದ ಸಂಬಂಧ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮ್ಮದ್ ತಾಹಾನನ್ನು ಬಂಧಿಸಿ ವಿಚಾರಣೆ ನಡೆಸಿದ್ದ ಅಧಿಕಾರಿಗಳು, ಹಲವು ಮಾಹಿತಿ ಕಲೆಹಾಕಿದ್ದಾರೆ.

‘ಕಚ್ಚಾ ಬಾಂಬ್ (ಐಇಡಿ) ತಯಾರಿಸಿ ಹೇಳಿದ ಸ್ಥಳದಲ್ಲಿ ಇಟ್ಟು ಬರುವುದಷ್ಟೇ ನಮ್ಮ ಕೆಲಸ. ವಿದೇಶದಲ್ಲಿರುವ **** ಎಂಬ ಹೆಸರಿನ ಹ್ಯಾಂಡ್ಲರ್, ಕೋಡ್ ವರ್ಡ್ ಮೂಲಕ ಸೂಚನೆ ನೀಡಿದ್ದ. ಹೀಗಾಗಿ, ಬಾಂಬ್ ಇಟ್ಟೆವು. ನಮ್ಮ ಕೆಲಸಕ್ಕೆ ಹಲವರು ಹಣಕಾಸು ಹಾಗೂ ಇತರೆ ನೆರವು ನೀಡಿದ್ದಾರೆ’ ಎಂಬುದಾಗಿ ಅಬ್ದುಲ್ ತಾಹಾ ಹಾಗೂ ಮುಸಾವೀರ್ ಬಾಯಿ ಬಿಟ್ಟಿದ್ದಾಗಿ ಮೂಲಗಳು ಹೇಳಿವೆ.

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ಭಯೋತ್ಪಾದನಾ ಸಂಘಟನೆ ಪರ ಗೋಡೆ ಬರಹ ಹಾಗೂ ಕೊಯಮತ್ತೂರಿನ ಕಾರು ಬಾಂಬ್ ಸ್ಫೋಟ ಪ್ರಕರಣದಲ್ಲೂ ವಿದೇಶಿ ಹ್ಯಾಂಡ್ಲರ್ ಕೈವಾಡವಿರುವ ಶಂಕೆ ಎನ್‌ಐಎ ಅಧಿಕಾರಿಗಳಿಗೆ ಬಂದಿತ್ತು. ಆದರೆ, ಹ್ಯಾಂಡ್ಲರ್ ಯಾರು ಎಂಬ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ.

ಇದೀಗ, ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಲ್ಲೂ ವಿದೇಶಿ ಹ್ಯಾಂಡ್ಲರ್ ಭಾಗಿಯಾಗಿರುವುದು ಗೊತ್ತಾಗಿದೆ. ಆತನ ಪತ್ತೆಗೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

11 ಮಂದಿ ಶಂಕಿತರು:
‘ತಮಿಳುನಾಡು, ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ದೊಡ್ಡ ಮಟ್ಟದಲ್ಲಿ ಸಂಚು ನಡೆದಿತ್ತು. ಎರಡೂ ರಾಜ್ಯಗಳ 11 ಮಂದಿ, ವಿಧ್ವಂಸಕ ಕೃತ್ಯ ಎಸಗಲು ಹಣಕಾಸು ಹಾಗೂ ಇತರೆ ಸಹಾಯ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನು ಆಧರಿಸಿಯೇ 11 ಸ್ಥಳಗಳ ಮೇಲೆ ದಾಳಿ ಮಾಡಲಾಯಿತು’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.

‘ಬಾಂಬ್ ಇರಿಸಲು ತರಬೇತಿ, ಸಿದ್ಧತೆ, ತಯಾರಿ ಹಾಗೂ ಬಾಂಬ್ ಸ್ಫೋಟದ ನಂತರ ಪರಾರಿಯಾಗಲು ಅಗತ್ಯವಿದ್ದ ಹಣಕಾಸು ನೆರವು ನೀಡಲು ಕೆಲವರು ಒಪ್ಪಿಕೊಂಡಿದ್ದರು. ಅದರಂತೆ ಹಣ ಸಹ ನೀಡಿದ್ದರು. ಈ ಪೈಕಿ ಕೆಲವರು ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿದ್ದಾರೆ. 11 ಶಂಕಿತರ ಪೈಕಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಶಂಕಿತರು ವಾಸವಿದ್ದ ಸ್ಥಳ ಹಾಗೂ ಕಚೇರಿಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ. ಜೊತೆಗೆ, ಕೆಲ ದಾಖಲೆಗಳು ಹಾಗೂ ಪುಸ್ತಕಗಳನ್ನು ಸುಪರ್ದಿಗೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಶಂಕಿತ 11 ಮಂದಿಯೂ ಈ ಹಿಂದೆ ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ನಡೆದಿದ್ದ ಸಭೆಗಳಲ್ಲಿ ಪಾಲ್ಗೊಂಡಿದ್ದರೆಂಬ ಮಾಹಿತಿ ಇದೆ’ ಎಂದು ಮೂಲಗಳು ಹೇಳಿವೆ.

ಬೆಂಗಳೂರು, ಹುಬ್ಬಳ್ಳಿಯಲ್ಲಿ ಹಲವರು ವಶಕ್ಕೆ ಹಣಕಾಸು ವ್ಯವಹಾರದ ಬಗ್ಗೆ ದಾಖಲೆ ಪರಿಶೀಲನೆ ಸಂಚಿನಲ್ಲಿ ಮತ್ತಷ್ಟು ಮಂದಿ ಭಾಗಿ ಶಂಕೆ

‘ಸಂಕೇತಗಳ ಮೂಲಕ ಸಂಭಾಷಣೆ’ ‘ವಿದೇಶದಲ್ಲಿರುವ ಹ್ಯಾಂಡ್ಲರ್ ಭಾರತದಲ್ಲಿರುವ ಯುವಕರನ್ನು ಸಂಪರ್ಕಿಸಿ ಭಯೋತ್ಪಾದನಾ ಕೃತ್ಯಕ್ಕೆ ಪ್ರಚೋದಿಸುತ್ತಿದ್ದಾನೆ. ಸಾಮಾಜಿಕ ಮಾಧ್ಯಮಗಳ ಮೂಲಕ ಸಂಭಾಷಣೆ ನಡೆಸುತ್ತಿದ್ದಾನೆ. ಜೊತೆಗೆ ಬಾಂಬ್ ಸ್ಫೋಟ ಹಾಗೂ ಇತರೆ ಕೃತ್ಯಗಳಿಗೆ ಸೂಚನೆ ಸಹ ನೀಡುತ್ತಿರುವುದು ಗೊತ್ತಾಗಿದೆ’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ. ‘ವಿದೇಶಿ ಹ್ಯಾಂಡ್ಲರ್ ಪ್ರತ್ಯೇಕ ಸಂಕೇತಗಳನ್ನು ಸೃಷ್ಟಿಸಿದ್ದಾನೆ. ಯಾರಿಗೆ ಯಾವ ಸಂದರ್ಭದಲ್ಲಿ ಯಾವ ಸಂಕೇತ ನೀಡಬೇಕು ಎಂಬುದನ್ನು ಆತನೇ ತೀರ್ಮಾನಿಸುತ್ತಿದ್ದಾನೆ. ಹೀಗಾಗಿ ಆತನ ಕೃತ್ಯಗಳ ಬಗ್ಗೆ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ. ಬಂಧಿತ ಆರೋಪಿಗಳು ಸಹ ಸಂಕೇತಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಿಲ್ಲ’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT