ಭಾನುವಾರ, ಮೇ 9, 2021
19 °C

ಮೆಟ್ರೊ ಮಾರ್ಗಕ್ಕೆ ಸಾವಿರ ಮರ ತೆರವು; ಆಕ್ಷೇಪಣೆ ಸಲ್ಲಿಕೆಗೆ 10 ದಿನ ಕಾಲಾವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಮ್ಮ ಮೆಟ್ರೊ ಎರಡನೇ ಹಂತದ ಸಿಲ್ಕ್‌ ಬೋರ್ಡ್‌ ಹಾಗೂ ಕೆ.ಆರ್. ಪುರ (ರೀಚ್‌ 2ಎ) ನಡುವಿನ ಮೆಟ್ರೊ ರೈಲು ಮಾರ್ಗ ನಿರ್ಮಾಣಕ್ಕೆ 1026 ಮರಗಳಿಗೆ ಕೊಡಲಿಯೇಟು ಬೀಳಲಿದೆ. ಬಿಎಂಆರ್‌ಸಿಎಲ್‌ನ ಈ ನಡೆಗೆ ಪರಿಸರ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಮರಗಳನ್ನು ತೆರವುಗೊಳಿಸಲು ಅನುಮತಿ ನೀಡಬೇಕು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಬಿಬಿಎಂಪಿಗೆ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕೆ ಬಿಬಿಎಂಪಿ ಅನುಮತಿ ನೀಡಿದೆ. ಆದಾಗ್ಯೂ, ಈ ಮರಗಳ ತೆರವಿಗೆ ಸಂಬಂಧಿಸಿದ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಹತ್ತು ದಿನ ಕಾಲಾವಕಾಶ ನೀಡಲಾಗಿದೆ ಎಂದು ಪಾಲಿಕೆ ಶುಕ್ರವಾರ ತಿಳಿಸಿದೆ.

ಈ ರೀಚ್‌ನ ಒಟ್ಟು ಉದ್ದ 19.63 ಕಿ.ಮೀ. ಈ ಪೈಕಿ ಕಾಡುಬೀಸನಹಳ್ಳಿಯಿಂದ ಬೈಯಪ್ಪನಹಳ್ಳಿ ಡಿಪೊವರೆಗಿನ 9.5 ಕಿ.ಮೀ. ವರೆಗಿನ ಮಾರ್ಗದಲ್ಲಿ ಈ ಮರಗಳನ್ನು ತೆರವುಗೊಳಿಸಬೇಕಾಗಿದೆ. ಬಹುತೇಕ ಮರಗಳು ರಸ್ತೆಯ ಬದಿಯಲ್ಲಿಯೇ ಇದ್ದು, ಈ ಮಾರ್ಗದಲ್ಲಿ ನಿಲ್ದಾಣಗಳ ನಿರ್ಮಾಣ ಮಾಡಲು ಮರಗಳನ್ನು ತೆರವು ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

‘ಕೋವಿಡ್ ಹರಡುತ್ತಿರುವ ಈ ಸಂದರ್ಭದಲ್ಲಿ ಪರಿಸರದ ಮೇಲೆ ಹಾನಿಯುಂಟು ಮಾಡಲು ನಿಗಮ ಮುಂದಾಗಿದೆ. ಈಗಾಗಲೇ ಆಕ್ಸಿಜನ್‌ ಇಲ್ಲದೆ ಜನ ನರಳುತ್ತಿದ್ದಾರೆ. ಈ ಮರಗಳನ್ನು ಕಡಿಯುವ ಬದಲು ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ನಿಗಮ ಯೋಚನೆ ಮಾಡಬೇಕು’ ಎಂದು ರಚ್ಚು ಎಂಬುವರು ಟ್ವೀಟ್ ಮಾಡಿದ್ದಾರೆ.

ಜಯನಗರದ ಪರಿಸರ ಕಾರ್ಯಕರ್ತೆ ರಜನಿ ಸಂತೋಷ್, ‘ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ, ಮೆಟ್ರೊ ಮಾರ್ಗ ನಿರ್ಮಾಣ ನಮ್ಮ ಆದ್ಯತೆಯಾಗಬಾರದು’ ಎಂದು ಹೇಳಿದರು.

ಪರಿಸರ ಕಾರ್ಯಕರ್ತ ದತ್ತಾತ್ರೇಯ ದೇವರೆ, ‘ಸರ್ಕಾರ ಕೋವಿಡ್‌ ಕರ್ಫ್ಯೂ ಜಾರಿ ಮಾಡಿದೆ. ಈ ಸಂದರ್ಭದಲ್ಲಿ ಮರಗಳ ತೆರವಿಗೆ ಅನುಮತಿ ನೀಡಿ, ಆಕ್ಷೇಪಣೆ ಸಲ್ಲಿಸಲು ಕೇವಲ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಕರ್ಫ್ಯೂ, ಲಾಕ್‌ಡೌನ್‌ನಂತಹ ನಿರ್ಬಂಧಗಳು ಮುಗಿದ ನಂತರ ಈ ಎಲ್ಲ ಪ್ರಕ್ರಿಯೆ ನಡೆಸಬೇಕು. ಆಕ್ಷೇಪಣೆ ಸಲ್ಲಿಸುವ ಕಾಲಾವಕಾಶವನ್ನು ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು