ಬುಧವಾರ, ಅಕ್ಟೋಬರ್ 28, 2020
18 °C
2018-–19ರ ಲೆಕ್ಕಪರಿಶೋಧನೆ ವರದಿಯಲ್ಲಿ ಸಿಎಜಿ ಉಲ್ಲೇಖ

ನಷ್ಟದ ಉದ್ದಿಮೆಗೆ ಹೆಚ್ಚು ಹೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಷ್ಟದಲ್ಲಿರುವ ಸಾರ್ವಜನಿಕ ಉದ್ಯಮಗಳಲ್ಲೇ ನಿರಂತರವಾಗಿ ರಾಜ್ಯ ಸರ್ಕಾರವು ಹೆಚ್ಚಿನ ಹೂಡಿಕೆ ಮಾಡುತ್ತಿದ್ದು, ಇದರಿಂದ ಶೇ 0.10ರಷ್ಟು  ಮಾತ್ರ ಪ್ರತಿಫಲ ಲಭಿಸುತ್ತಿದೆ ಎಂದು ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ (ಸಿಎಜಿ) ವರದಿ ಹೇಳಿದೆ. 

87 ಸರ್ಕಾರಿ ಕಂಪನಿಗಳು, ಒಂಬತ್ತು ನಿಗಮಗಳು, 44 ಕೂಡು ಬಂಡವಾಳ ಕಂಪನಿಗಳು, ಸಹಕಾರಿ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ 2019ರ ಮಾರ್ಚ್‌ ಅಂತ್ಯಕ್ಕೆ ರಾಜ್ಯ ಸರ್ಕಾರವು ₹ 66,518 ಕೋಟಿ ಹೂಡಿಕೆ ಮಾಡಿದೆ. ಈ ಪೈಕಿ ನಷ್ಟದಲ್ಲಿರುವ 7 ಪ್ರಮುಖ ಉದ್ದಿಮೆಗಳಲ್ಲಿ ₹ 38,948.50 ಕೋಟಿ ಹೂಡಿಕೆ ಮಾಡಲಾಗಿದೆ. ಈ ಉದ್ದಿಮೆಗಳು ₹ 8,273.67 ಕೋಟಿಯಷ್ಟು ಸಂಚಿತ ನಷ್ಟ ಅನುಭವಿಸುತ್ತಿದ್ದವು ಎಂಬ ಉಲ್ಲೇಖ ವರದಿಯಲ್ಲಿದೆ.

2014–15ರಲ್ಲಿ ಸಾರ್ವಜನಿಕ ಉದ್ದಿಮೆಗಳಲ್ಲಿನ ಹೂಡಿಕೆಯ ಒಟ್ಟು ಮೊತ್ತ ₹ 61,726.92 ಕೋಟಿಯಷ್ಟಿತ್ತು. ಆಗ ₹ 74.84 ಕೋಟಿ (ಶೇ 0.10) ಪ್ರತಿಫಲ ಲಭಿಸಿತ್ತು. 2018–19ರ ಅಂತ್ಯಕ್ಕೆ ಹೂಡಿಕೆ ಮೊತ್ತ ₹ 66,518.28 ಕೋಟಿ ತಲುಪಿತ್ತು. ಆಗ ₹ 38.30 ಕೋಟಿ (0.10ಕ್ಕಿಂತ ಕಡಿಮೆ) ಪ್ರತಿಫಲ ಲಭಿಸಿತ್ತು. ಆದರೆ, ಈ ಉದ್ದೇಶಕ್ಕಾಗಿ ಪಡೆದ ಸಾಲಗಳ ಮೇಲಿನ ಬಡ್ಡಿಯು ಶೇ 8.2ರಷ್ಟಿತ್ತು ಎಂಬ ಉಲ್ಲೇಖ ವರದಿಯಲ್ಲಿದೆ.

2018–19ರಲ್ಲಿ ರಾಜ್ಯ ಸರ್ಕಾರವು ವಿವಿಧ ಕಂಪನಿಗಳು, ನಿಗಮಗಳು ಮತ್ತು ಸಹಕಾರಿ ಸಂಸ್ಥೆಗಳಿಗೆ ₹ 4,487 ಕೋಟಿ ಸಾಲವನ್ನು ನೀಡಿತ್ತು. ಈ ಪೈಕಿ 35 ಪ್ರಕರಣಗಳಲ್ಲಿ ಯಾವುದೇ ನಿಬಂಧನೆ, ಷರತ್ತುಗಳನ್ನು ವಿಧಿಸದೇ ₹ 3,149.23 ಕೋಟಿ ಸಾಲ ಮಂಜೂರು ಮಾಡಲಾಗಿತ್ತು. 2019ರ ಮಾರ್ಚ್‌ ಅಂತ್ಯಕ್ಕೆ ಸರ್ಕಾರವು ನೀಡಿದ ಸಾಲಗಳ ಒಟ್ಟು ಮೊತ್ತವು ₹ 24,981 ಕೋಟಿಯಷ್ಟಿತ್ತು. ಆ ಸಮಯದಲ್ಲಿ ಮರುಪಾವತಿಯ ಮೊತ್ತವು ಕೇವಲ ₹ 31 ಕೋಟಿಯಷ್ಟಾಗಿತ್ತು ಎಂಬುದನ್ನು ಸಿಎಜಿ ಬಹಿರಂಗಪಡಿಸಿದೆ.

**
2018–19ರಲ್ಲಿ 20 ಪ್ರಕರಣಗಳಲ್ಲಿ ಪೂರಕ ಅಂದಾಜಿನಡಿ ಅನಗತ್ಯವಾಗಿ ₹ 1,319.88 ಕೋಟಿಯನ್ನು ಪಡೆಯಲಾಗಿತ್ತು. 27 ಲೆಕ್ಕ ಶೀರ್ಷಿಕೆಗಳಲ್ಲಿ ₹ 1,780 ಕೋಟಿಯನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಲಾಗಿದೆ. ನಾಲ್ಕು ಪ್ರಕರಣಗಳಲ್ಲಿ ವಿಧಾನಮಂಡಲದ ಒಪ್ಪಿಗೆ ಪಡೆಯದೇ ₹ 686.82 ಕೋಟಿಯನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಿರುವುದು ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

**
‘2018–19ನೇ ಆರ್ಥಿಕ ವರ್ಷದ ಕೊನೆಯ ಎರಡು ದಿನಗಳಲ್ಲಿ ₹ 7,667.67 ಕೋಟಿಯಷ್ಟು ಮೊತ್ತವನ್ನು ವಾಪಸ್‌ ಮಾಡಲಾಗಿತ್ತು. 19 ಅನುದಾನಗಳಲ್ಲಿ ₹ 5 ಕೋಟಿಗಿಂತಲೂ ಹೆಚ್ಚು ಉಳಿತಾಯವಾಗಿದ್ದ ಮೊತ್ತವನ್ನು ಆರ್ಥಿಕ ವರ್ಷದ ಕೊನೆಯ ಎರಡು ದಿನಗಳಲ್ಲಿ ವಾಪಸ್‌ ನೀಡಲಾಗಿದೆ’ ಎಂದು ಸಿಎಜಿ ವರದಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು