ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಕ್‌ ಚಾಲಕನ ಮೇಲೆ ಹಲ್ಲೆ ಪ್ರಕರಣ: ಹೆಡ್‌ಕಾನ್‌ಸ್ಟೆಬಲ್ ಕೊನೆಗೂ ಎತ್ತಂಗಡಿ

ಘಟನೆ ಬಗ್ಗೆ ವರದಿ ಸಲ್ಲಿಸಿದ ಎಸಿಪಿ
Last Updated 23 ಸೆಪ್ಟೆಂಬರ್ 2019, 12:33 IST
ಅಕ್ಷರ ಗಾತ್ರ

ಬೆಂಗಳೂರು: ಮಿನಿ ಟ್ರಕ್‌ ಚಾಲಕನ ಮೇಲೆ ಹೆಡ್‌ ಕಾನ್‌ಸ್ಟೆಬಲ್ ಒಬ್ಬರು ಹಲ್ಲೆ ಮಾಡಿದ್ದ ಪ್ರಕರಣ ದಿನಕ್ಕೊಂದು ಆಯಾಮ ಪಡೆಯುತ್ತಿದೆ. ಚಾಲಕನ ವಿರುದ್ಧ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ, ಹೆಡ್‌ ಕಾನ್‌ಸ್ಟೆಬಲ್ ಮಹಾಸ್ವಾಮಿ ಅವರನ್ನೂ ಹಲಸೂರು ಗೇಟ್‌ ಠಾಣೆಯಿಂದ ತರಬೇತಿ ವಿಭಾಗಕ್ಕೆ ಎತ್ತಂಗಡಿ ಮಾಡಲಾಗಿದೆ.

ಘಟನೆ ಸಂಬಂಧ ಪ್ರಾಥಮಿಕ ತನಿಖೆ ನಡೆಸಿದ್ದ ಎಸಿಪಿ ಸಿ.ಜೆ.ರಂಗಸ್ವಾಮಿ ಅವರು ಡಿಸಿಪಿ ಜಗದೀಶ್ ಮೂಲಕ ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್‌.ರವಿಕಾಂತೇಗೌಡ ಅವರಿಗೆ ಶನಿವಾರ ಸಂಜೆ ವರದಿ ಸಲ್ಲಿಸಿದ್ದಾರೆ. ಅದನ್ನು ಆಧರಿಸಿ ಹೆಡ್‌ ಕಾನ್‌ಸ್ಟೆಬಲ್‌ ವರ್ಗಾವಣೆ ಆದೇಶ ಹೊರಡಿಸಲಾಗಿದೆ.

‘ಹೆಡ್‌ ಕಾನ್‌ಸ್ಟೆಬಲ್‌ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಎಸಿಪಿ ವರದಿಯಲ್ಲಿ ತಿಳಿಸಿದ್ದಾರೆ. ಅದರನ್ವಯ ಹೆಡ್‌ ಕಾನ್‌ಸ್ಟೆಬಲ್‌ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಡಿವೈಎಸ್ಪಿ ದರ್ಜೆಯ ಅಧಿಕಾರಿ ವಿಚಾರಣೆ ನಡೆಸಲಿದ್ದು, ಹೆಡ್‌ ಕಾನ್‌ಸ್ಟೆಬಲ್‌ ಮೇಲೆ ಯಾವ ಕ್ರಮ ಜರುಗಿಸಬೇಕು ಎಂಬುದನ್ನು ಅವರೇ ತೀರ್ಮಾನಿಸಲಿದ್ದಾರೆ’ ಎಂದು ರವಿಕಾಂತೇಗೌಡ ಹೇಳಿದರು.

‘ಚಾಲಕ ಮಿನಿ ಟ್ರಕ್‌ ಅನ್ನು ಏಕಮುಖ ರಸ್ತೆಯಲ್ಲಿ ನಿಯಮಕ್ಕೆ ವಿರುದ್ಧವಾಗಿ ಚಲಾಯಿಸಿಕೊಂಡು ಬಂದಿದ್ದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದನ್ನು ಪ್ರಶ್ನಿಸಿದ್ದ ಹೆಡ್‌ ಕಾನ್‌ಸ್ಟೆಬಲ್‌ ಜೊತೆಗೆ ಆತ ವಾಗ್ವಾದ ನಡೆಸುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ. ಹೆಡ್‌ ಕಾನ್‌ಸ್ಟೆಬಲ್ ಸಹ ಆ ರೀತಿ ನಡೆದುಕೊಳ್ಳಬಾರದಿತ್ತು. ತಪ್ಪು ಯಾರೇ ಮಾಡಿದರೂ ತಪ್ಪೇ. ಅವರಿಗೆ ಕಾನೂನಿನಡಿ ಶಿಕ್ಷೆಯಾಗಬೇಕು’ ಎಂದರು.

ತಾಯಿಗೆ ಜೀವ ಬೆದರಿಕೆ; ದಾಖಲಾಗದ ಎಫ್‌ಐಆರ್‌

ಹೆಡ್‌ ಕಾನ್‌ಸ್ಟೆಬಲ್‌ ಅವರಿಂದ ಹಲ್ಲೆಗೊಳಗಾದ ಚಾಲಕ ಜೆ.ಪಿ.ನಗರ 6ನೇ ಹಂತದ ಜರಗನಹಳ್ಳಿ ನಿವಾಸಿ ಸುನೀಲ್ ಕುಮಾರ್ ಸದ್ಯ ಎಲ್ಲಿದ್ದಾರೆ ಎಂಬುದು ಗೊತ್ತಾಗಿಲ್ಲ. ಇದರ ಮಧ್ಯೆಯೇ ಅವರ ತಾಯಿ ರತ್ನಮ್ಮ ಅವರಿಗೆ ಐವರು ಅಪರಿಚಿತರು ಜೀವ ಬೆದರಿಕೆ ಹಾಕಿದ್ದಾರೆ.

ಈ ಸಂಬಂಧ ರತ್ನಮ್ಮ ಅವರು ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ‘ಕಾನ್‌ಸ್ಟೆಬಲ್‌ ಹಲ್ಲೆ ಮಾಡಿದ್ದನ್ನು ಮಗ ಕರೆ ಮಾಡಿ ತಿಳಿಸಿದ್ದ. ಅಂದಿನಿಂದಲೇ ಆತ ಮನೆಗೆ ಬಂದಿಲ್ಲ’ ಎಂದು ದೂರಿನಲ್ಲಿ ತಾಯಿ ತಿಳಿಸಿದ್ದಾರೆ. ಈ ಬಗ್ಗೆ ಎಫ್‌ಐಆರ್‌ ದಾಖಲಿಸಿಕೊಳ್ಳದ ಪೊಲೀಸರು, ಕೇವಲ ಎನ್‌ಸಿಆರ್‌ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಂಡಿದ್ದಾರೆ. ಪೊಲೀಸರ ಈ ವರ್ತನೆಗೂ ಟೀಕೆ ವ್ಯಕ್ತವಾಗಿದೆ.

‘ಮಗನ ಬರವಿಗಾಗಿ ಕಾಯುತ್ತಾ ಕೊರಗುತ್ತಿದ್ದೇನೆ. ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಬಂದಿದ್ದ ಐವರು ಅಪರಿಚಿತರು, ‘ನಿನ್ನ ಮಗ ಎಲ್ಲಿದ್ದಾನೆ’ ಎಂದು ಪ್ರಶ್ನಿಸಿದ್ದರು. ಗೊತ್ತಿಲ್ಲವೆಂದು ಹೇಳಿದಾಗ, ‘ನಿನ್ನ ಮಗ ಸಿಕ್ಕರೆ ಕೈ–ಕಾಲು ಮುರಿಯುತ್ತೇವೆ. ನಿನ್ನನ್ನು ಹಾಗೂ ನಿನ್ನ ಮಗನನ್ನು ಸುಮ್ಮನೇ ಬಿಡುವುದಿಲ್ಲ’ ಎಂದು ಬೆದರಿಕೆಯೊಡ್ಡಿ ಹೋಗಿದ್ದಾರೆ’ ಎಂದು ರತ್ನಮ್ಮ ದೂರಿದ್ದಾರೆ.

‘ಹೆಡ್‌ ಕಾನ್‌ಸ್ಟೆಬಲ್‌ಗೆ ಕೌಶಲ ತರಬೇತಿ’

‘ವರ್ಗಾವಣೆ ಮಾಡಲಾದ ಹೆಡ್‌ ಕಾನ್‌ಸ್ಟೆಬಲ್‌ ಅವರಿಗೆ ಸೂಕ್ಷ್ಮ ಕೌಶಲಗಳ ತರಬೇತಿ ಅಗತ್ಯವಿದೆ. ಹೀಗಾಗಿ ಅವರನ್ನು 10 ದಿನಗಳ ತರಬೇತಿಗೆ ನಿಯೋಜಿಸಲಾಗಿದೆ’ ಎಂದು ರವಿಕಾಂತೇಗೌಡ ಹೇಳಿದರು.

‘ಜನಸ್ನೇಹಿ ಪೊಲೀಸ್ ವ್ಯವಸ್ಥೆ ಎಂದರೆ ಏನು? ಸಾರ್ವಜನಿಕರ ಜೊತೆ ಹೇಗೆ ನಡೆದುಕೊಳ್ಳಬೇಕು? ವರ್ತನೆ ಹೇಗಿರಬೇಕು? ಎಂಬುದನ್ನು ತರಬೇತಿಯಲ್ಲಿ ಕಲಿಸಲಾಗುತ್ತದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT