ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಸಿಬ್ಬಂದಿಗೆ ಸರ್ಕಾರಿ ನೌಕರರಿಗಿಂತ ಹೆಚ್ಚು ಸವಲತ್ತು

ವಿವರ ಬಿಡುಗಡೆ ಮಾಡಿದ ಕೆಎಸ್‌ಆರ್‌ಟಿಸಿ
Last Updated 7 ಏಪ್ರಿಲ್ 2021, 22:50 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ಸಂಸ್ಥೆ ನೌಕರರಿಗೆ ಸರ್ಕಾರಿ ನೌಕರರಿಗಿಂತಲೂ ಹೆಚ್ಚಿನ ಸವಲತ್ತುಗಳನ್ನು ನೀಡಿತ್ತಿದ್ದು, ಈ ಸಂಬಂಧ ಕೆಎಸ್‌ಆರ್‌ಟಿಸಿ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ.

ಮನೆ ಬಾಡಿಗೆ ಭತ್ಯೆ, ತುಟ್ಟಿಭತ್ಯೆ, ನಗರ ಪರಿಹಾರ ಭತ್ಯೆ, ರಜೆ ಸೌಲಭ್ಯ, ಪ್ರಯಾಣ ಭತ್ಯೆ, ಶವಸಂಸ್ಕಾರ, ಅನುಕಂಪದ ನೌಕರಿ ಸೌಕರ್ಯಗಳನ್ನು ಸರ್ಕಾರಿ ನೌಕರರಂತೆಯೇ ಯತಾವತ್ತಾಗಿ ಅಳವಡಿಸಿಕೊಳ್ಳಲಾಗಿದೆ.

ಸರ್ಕಾರಿ ವಾಹನ ಚಾಲಕರಿಗೆ ಸಮವಸ್ತ್ರಕ್ಕೆ ತಿಂಗಳಿಗೆ ₹400 ನೀಡಲಾಗುತ್ತದೆ. ಸಾರಿಗೆ ನೌಕರರಿಗೆ ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ₹175 ಹೊಲಿಗೆ ಭತ್ಯೆ ಮತ್ತು ಅವುಗಳನ್ನು ಸ್ವಚ್ಛಗೊಳಿಸಲು ತಿಂಗಳಿಗೆ ₹35 ನೀಡಲಾಗುತ್ತಿದೆ. ಬೆಚ್ಚನೆಯ ಉಡುಪು ಭತ್ಯೆಯಾಗಿ ಸರ್ಕಾರಿ ನೌಕರರಿಗೆ ಎರಡು ವರ್ಷಗಳಿಗೊಮ್ಮೆ ₹3,600 ರಿಂದ ₹5,000 ನೀಡಲಾಗುತ್ತಿದೆ. ಸಾರಿಗೆ ನೌಕರರಿಗೆ ನಾಲ್ಕು ವರ್ಷಗಳಿಗೊಮ್ಮೆ ಜರ್ಸಿ ಮತ್ತು ಮಳೆ ಕೋಟು ಖರೀದಿಗೆ ₹600 ನೀಡಲಾಗುತ್ತಿದೆ.

ಸರ್ಕಾರಿ ನೌಕರರಿಗೆ ಹಬ್ಬದ ಮುಂಗಡವಾಗಿ ವರ್ಷಕ್ಕೆ ₹10 ಸಾವಿರ ನೀಡುತ್ತಿದ್ದರೆ, ಸಾರಿಗೆ ನೌಕರರಿಗೆ ₹5 ಸಾವಿರ ನೀಡಲಾಗುತ್ತಿದೆ. ಸ್ವಯಂ ನಿವೃತ್ತಿ ಪಡೆಯುವ ಸರ್ಕಾರಿ ನೌಕರರಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಸೌಲಭ್ಯ ಇರುವುದಿಲ್ಲ. ವೈದ್ಯಕೀಯವಾಗಿ ಅಸಮರ್ಥರಾಗಿರುವ ಸಾರಿಗೆ ನೌಕರರು ಸ್ವಯಂ ನಿವೃತ್ತಿ ಬಯಸಿದರೆ ₹6 ಲಕ್ಷ ಹೆಚ್ಚುವರಿ ಆರ್ಥಿಕ ನೆರವು, ವಿಶೇಷ ಪ್ರಕರಣಗಳಲ್ಲಿ ₹10 ಲಕ್ಷದ ತನಕ ನೀಡಲಾಗುತ್ತದೆ. ನಾಲ್ಕು ವರ್ಷಕ್ಕೊಮ್ಮೆ ಕುಟುಂಬ ಸಮೇತ 4 ಸಾವಿರ ಕಿಲೋ ಮೀಟರ್ ಪ್ರಯಾಣಿಸಲು ಪ್ರಯಾಣ ದರ ನೀಡಲಾಗುತ್ತಿದೆ.

2006ರ ನಂತರ ಸರ್ಕಾರಿ ಸೇವೆಗೆ ಸೇರಿದವರು ನಿವೃತ್ತಿ ವೇತನದ ಬದಲು ಎನ್‌ಪಿಎಸ್ ಯೋಜನೆಯಡಿ ಪಿಂಚಣಿ ಪಡೆಯುತ್ತಾರೆ. ಪಿಎಫ್‌(ಭವಿಷ್ಯನಿಧಿ) ಸೌಲಭ್ಯ ಇರುವುದಿಲ್ಲ. ಸಾರಿಗೆ ನೌಕರರಿಗೆ ಪಿಎಫ್‌ ಸೌಲಭ್ಯ ಇದೆ. ಇದಕ್ಕೆ ನಿಗಮಗಳ ಕಡೆಯಿಂದ ಪಾವತಿಯಾಗುವ ಹಣದಲ್ಲಿ ಕಡಿತ ಮಾಡಿ ಪಿಂಚಣಿಗೆ ಪಾವತಿಸಲಾಗುತ್ತಿದೆ ಎಂದು ನಿಗಮ ವಿವರಿಸಿದೆ.

ಸರ್ಕಾರಿ ನೌಕರರಿಗೆ ಇಲ್ಲದಿರುವ ಹೆಚ್ಚುವರಿ ಸೌಲಭ್ಯಗಳೆಂದರೆ ಬೋನಸ್, ಉಚಿತ ಬಸ್ ಪಾಸ್, ವರ್ಷಕ್ಕೊಮ್ಮೆ ಕುಟುಂಬ ಸಮೇತ ಪ್ರಯಾಣಿಸಲು ಉಚಿತ ಪಾಸ್, ನೌಕರರ ಮಕ್ಕಳು ಶಾಲೆ, ಕಾಲೇಜುಗಳಿಗೆ ತೆರಳಲು ಉಚಿತ ಪಾ‌ಸ್, ಸಾರಿಗೆ ಆದಾಯದಲ್ಲಿ ಶೇ 3 ರಷ್ಟು ಪ್ರೋತ್ಸಾಹ ಧನ, ಮನೆ ಕಟ್ಟಲು, ಖರೀದಿಸಲು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆಯುವ ₹5 ಲಕ್ಷ ಸಾಲಕ್ಕೆ ಶೇ 4 ರಷ್ಟು ಬಡ್ಡಿ ಸಹಾಯ ಧನ, ವಾರ್ಷಿಕ ಗರಿಷ್ಠ ₹20 ಸಾವಿರ ಬಡ್ಡಿ ಸಹಾಯಧನ ಮತ್ತು ಸೇವಾವಧಿಯಲ್ಲಿ ₹1 ಲಕ್ಷ ಬಡ್ಡಿ ಸಹಾಯಧನ ನೀಡಲಾಗುತ್ತಿದೆ ಎಂದು ತಿಳಿಸಿದೆ.

264 ಬಸ್‌ಗಳ ಕಾರ್ಯಾಚರಣೆ
ಮುಷ್ಕರದ ನಡುವೆಯೂ ನಿಗಮದ 264 ಬಸ್‌ಗಳು ಕಾರ್ಯಾಚರಣೆ ಮಾಡಿವೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ 3,152, ಎನ್‌ಡಬ್ಲ್ಯೂಕೆಆರ್‌ಟಿಸಿ ವ್ಯಾಪ್ತಿಯಲ್ಲಿ 1,645 ಮತ್ತು ಎನ್‌ಇಕೆಆರ್‌ಟಿಸಿ ವ್ಯಾಪ್ತಿಯಲ್ಲಿ 3,234 ಖಾಸಗಿ ಬಸ್‌ಗಳು ಕಾರ್ಯಾಚರಣೆ ಮಾಡಿವೆ ಎಂದು ವಿವರಿಸಿದೆ.

ಬಸ್‌ ಮೇಲೆ ಕಲ್ಲು ತೂರಿದ ಕಾರಣಕ್ಕೆ ಅತ್ತಿಬೆಲೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ಹೊರ ರಾಜ್ಯಗಳ 470 ಬಸ್‌ಗಳು ಬೆಂಗಳೂರಿನಿಂದ ಕಾರ್ಯಾಚರಣೆ ಮಾಡಿವೆ ಎಂದು ಹೇಳಿದೆ.

‘ಸಾರ್ವಜನಿಕ ಸಾರಿಗೆಯೂ ವಿದ್ಯುತ್‌ ಚಾಲಿತ’
ಬೆಂಗಳೂರು:
‘ಬೆಂಗಳೂರು ಸೇರಿ ರಾಜ್ಯದ ಎಲ್ಲ ಕಡೆಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವಿದ್ಯುತ್‌ ಚಾಲಿತ ವ್ಯವಸ್ಥೆಯಾಗಿ ಪರಿವರ್ತಿಸಲಾಗುವುದು’ ಎಂದು ವಿಜ್ಞಾನ–ತಂತ್ರಜ್ಞಾನ, ಐಟಿ–ಬಿಟಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿಳಿಸಿದರು.

ಜಪಾನ್‌ನಲ್ಲಿ ನಡೆಯುತ್ತಿರುವ ಜಾಗತಿಕ ತಂತ್ರಜ್ಞಾನ ಆಡಳಿತ ಶೃಂಗಸಭೆಯಲ್ಲಿ ವರ್ಚುವಲ್‌ ಆಗಿ ಪಾಲ್ಗೊಂಡು ಮಾತನಾಡಿದ ಅವರು, ಆಡಳಿತ, ಅಭಿವೃದ್ಧಿ ಸೇರಿ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT