ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: 6,316 ಮರ ಉಳಿಸಲು ಟ್ವಿಟರ್‌ನಲ್ಲಿ ಕಹಳೆ

ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಗೆ ಮರ ಕಡಿಯಲು ವಿರೋಧ
Last Updated 24 ಜೂನ್ 2021, 4:23 IST
ಅಕ್ಷರ ಗಾತ್ರ

ಬೆಂಗಳೂರು: ಸಿಂಗನಾಯಕನಹಳ್ಳಿ ಕೆರೆಯ ಅಭಿವೃದ್ಧಿಗಾಗಿ 6,316 ಮರಗಳನ್ನು ಕಡಿಯುವ ಪ್ರಸ್ತಾವವನ್ನು ವಿರೋಧಿಸಿ ಅನೇಕರು ಟ್ವಿಟರ್‌ನಲ್ಲಿ ಬುಧವಾರ ಅಭಿಪ್ರಾಯ ಹಂಚಿಕೊಂಡರು.

ಪರಿಸರ ಕಾಳಜಿ ಇರುವ ಸಮಾನ ಮನಸ್ಕ ಸಂಘಟನೆಗಳು ಸೇರಿಕೊಂಡು ಹಮ್ಮಿಕೊಂಡ ಈ ಟ್ವಿಟರ್‌ ಅಭಿಯಾನಕ್ಕೆ ನೂರಾರು ಮಂದಿ ಬೆಂಬಲ ವ್ಯಕ್ತಪಡಿಸಿದರು.

‘ನರಿ, ಹಾವುಗಳು, ಹಕ್ಕಿಗಳಂತಹ ಸಮೃದ್ಧ ಜೀವವೈವಿಧ್ಯದ ಜೊತೆಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅನುಸೂಚಿತ ಪಕ್ಷಿಯಾಗಿರುವ ನವಿಲುಗಳಿಗೂ ಸಿಂಗನಾಯಕನಹಳ್ಳಿ ಕೆರೆಯಂಗಳ ನೆಲೆ ಒದಗಿಸಿದೆ. ಇಲ್ಲಿನ 6,316 ಮರಗಳನ್ನು ಕಡಿಯುವುದು ಬೇಡ ಎನ್ನೋಣ’ ಎಂದು ಉಷಾ ಧನರಾಜ್‌ ಟ್ವೀಟ್‌ ಮೂಲಕ ಒತ್ತಾಯಿಸಿದರು.

‘ಈ ಮರಗಳು ಜಲಾನಯನ ಪ್ರದೇಶವನ್ನು ರಕ್ಷಿಸುತ್ತಿವೆ. ದಶಕಗಳಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ನೆರವಾಗುತ್ತಿವೆ. ಇಲ್ಲಿನ ಜೀವಿ ಪರಿಸರ ವ್ಯವಸ್ಥೆ ಆಸುಪಾಸಿನ ಗ್ರಾಮಸ್ಥರನ್ನೂ ಪೊರಯುತ್ತಿದೆ. ಇಷ್ಟೊಂದು ಭಾರಿ ಪ್ರಮಾಣದಲ್ಲಿ ಮರಗಳನ್ನು ಕಡಿಯದೆಯೂ ಈ ಕೆರೆಯ ಅಭಿವೃದ್ಧಿ ಸಾಧ್ಯ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊಸತನ್ನು ಸೃಷ್ಟಿಸುವ ಭರದಲ್ಲಿ ಪರಿಸರವ್ಯವಸ್ಥೆಯನ್ನು ನಾಶಪಡಿಸುವುದಾದರೂ ಏಕೆ’ ಎಂದು ಅವರು ಪ್ರಶ್ನಿಸಿದರು.

ಈ ಮರಗಳನ್ನು ಕಡಿಯದೆಯೇ ಕೆರೆಯ ಪುನರುಜ್ಜೀವನ ಕೈಗೊಳ್ಳಬೇಕು ಎಂದು ವಿಕ್ರಮ್‌ ವಿಜಯ್‌ ಅವರು ಟ್ವೀಟ್‌ ಮೂಲಕ ಒತ್ತಾಯಿಸಿದರು.

ಸಿಂಗನಾಯಕನಹಳ್ಳಿ ಕೆರೆಯಂಗಳದಲ್ಲಿ ಬೆಳೆದ ಮರಗಳ ಚಿತ್ರವನ್ನು ಟ್ವೀಟ್‌ ಮಾಡಿದ ಯೋಗದಾ ಜೋಷಿ, ‘ಹೆಬ್ಬಾಳ– ನಾಗವಾರ ಕಣಿವೆಯ ಕೆರೆಗಳ ಅಭಿವೃದ್ಧಿ ಯೋಜನೆ ಜಾರಿಯದಾರೆ ನಾವು ಹೃದಯವನ್ನೇ ಕಳೆದುಕೊಂಡಂತೆ. ಈ ಯೋಜನೆ ಕೈಬಿಡಿ’ ಎಂದು ಒತ್ತಾಯಿಸಿದರು.

‘ಮರಗಳನ್ನು ಕಡಿಯುವ ಪರಿಪಾಠ ನಿಲ್ಲಿಸಿ. ಮರಗಳನ್ನು ರಕ್ಷಿಸಿ. ಬೆಂಗಳೂರನ್ನು ಕಾಪಾಡಿ’ ಎಂದು ಪದ್ಮಿನಿ ಟ್ವೀಟ್‌ ಮೂಲಕ ಕೋರಿದರು.

ಕೋವಿಡ್‌ ಸಾಂಕ್ರಾಮಿಕದ ಕಾಲದಲ್ಲಿ ರಾಜ್ಯ ಸರ್ಕಾರ ಮರಗಳನ್ನು ಕಡಿಯಬೇಕಾಗುವ ಯೋಜನೆಗಳಿಗೆ ಒತ್ತು ನೀಡುತ್ತಿದೆ. ಕೆರೆ ನಿರ್ಮಿಸಲು ಈ ಸಲ 6 ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯಲು ಮುಂದಾಗಿದೆ. ಈ ಯೋಜನೆಗೆ ಮಂಜೂರಾತಿ ನೀಡಬಾರದು ಎಂದು ಮಾಲಿನಿ ಪರ್ಮಾರ್‌ ಒತ್ತಾಯಿಸಿದರು.

ಗಮನ ಸೆಳೆದ ಟ್ವೀಟ್‌ಗಳು

ನಿಮಗೆ ಯಾವುದನ್ನು ಸೃಷ್ಟಿಸಲು ಸಾಧ್ಯವಿಲ್ಲವೋ ಅವುಗಳನ್ನು ನಾಶಪಡಿಸಬೇಡಿ.
–ರಜತ್‌

**
6,316 ಮರಗಳನ್ನು ಕಡಿಯುವುದರಿಂದ ಪರಿಸರ ವ್ಯವಸ್ಥೆ ಮಾತ್ರ ವಿನಾಶವಾಗುವುದಲ್ಲ ಈ ದೊಡ್ಡ ಪ್ರದೇಶದ ಸುತ್ತಲಿನ ಬಯೋಮಂಡಲವೇ ನಾಶವಾಗುತ್ತದೆ. ಕೆರೆ ಇಲ್ಲದ ಕಾಡು ಕಾಡಿಲ್ಲದ ಕೆರೆಗಿಂತ ಎಷ್ಟೋ ವಾಸಿ.
–ಸಂಕರ್ಷಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT