ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಂಶೋಧನಾ ಅನುದಾನ ಇಳಿಕೆ ಸಲ್ಲದು

ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಮಹಾನಿರ್ದೇಶಕ ಹಿಮಾಂಶು ಪಾಠಕ್‌
Published 3 ಆಗಸ್ಟ್ 2023, 16:19 IST
Last Updated 3 ಆಗಸ್ಟ್ 2023, 16:19 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೂರ್ಣಾವಧಿ ವಿಜ್ಞಾನಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಹಾಗೂ ಸಂಶೋಧನಾ ವ್ಯವಸ್ಥೆಗೆ ನೀಡುತ್ತಿರುವ ಅನುದಾನ ಇಳಿಕೆ ಕೃಷಿ ಕ್ಷೇತ್ರಕ್ಕೆ ಆಶಾದಾಯಕವಲ್ಲ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಮಹಾನಿರ್ದೇಶಕ ಹಿಮಾಂಶು ಪಾಠಕ್‌ ಹೇಳಿದ್ದಾರೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ 57ನೇ ಘಟಿಕೋತ್ಸವದಲ್ಲಿ ಅವರ ಮುದ್ರಿತ ಭಾಷಣದ ಸಾರವನ್ನು ಕುಲಪತಿ ಎಸ್‌.ವಿ.ಸುರೇಶ್‌ ಓದಿದರು.

ಕೃಷಿ ವಲಯದಲ್ಲಿ ತ್ವರಿತ ಮತ್ತು ಫಲಪೂರ್ಣ ಫಲಿತಾಂಶಕ್ಕಾಗಿ ಸಾರ್ವಜನಿಕ ಹಾಗೂ ಖಾಸಗಿ ಪಾಲುದಾರಿಕೆಯನ್ನು ಬಲಗೊಳಿಸಬೇಕಿದೆ. ದ್ವಿಪಕ್ಷೀಯ ಶಿಕ್ಷಣ ಮತ್ತು ಸಂಯೋಜಿತ ಸಂಶೋಧನಾ ಚಟುವಟಿಕೆಗಳನ್ನು ಅನ್ವೇಷಿಸಬೇಕಿದೆ. ಇದರಿಂದ ತಂತ್ರಜ್ಞಾನಗಳ ನಡುವಿನ ಅಂತರ ಕಡಿಮೆ ಮಾಡಬಹುದು ಎಂದಿದ್ದಾರೆ.

ರೈತ ಒಕ್ಕೂಟ, ರೈತ ಉತ್ಪಾದನಾ ಸಂಘಗಳು ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನೋಪಾಯಗಳನ್ನು ಭದ್ರಪಡಿಸಿವೆಯಾದರೂ, ನಿಯಂತ್ರಣ, ಮೇಲ್ವಿಚಾರಣೆ ಸಮಸ್ಯೆ, ಮಾರುಕಟ್ಟೆ ಸಂಪರ್ಕ, ಹಣಕಾಸು ಮತ್ತು ಮೂಲಸೌಕರ್ಯಗಳ ಕೊರತೆ ದೀರ್ಘಾವಧಿ ಸುಸ್ಥಿರತೆಗೆ ಅಡ್ಡಿಯಾಗಿವೆ ಎಂದು ಪ್ರತಿಪಾದಿಸಿದ್ದಾರೆ.

ಭಾರತದಲ್ಲಿ ಸುಸ್ಥಿರ ಬೆಳೆ ಉತ್ಪಾದನೆಗಾಗಿ ಕೃಷಿ ಸಮಸ್ಯೆಗಳ ಪರಿಹಾರಕ್ಕೆ ಹೊಸ ವಿಧಾನಗಳನ್ನು ಕಂಡುಕೊಳ್ಳಬೇಕಿದೆ. ಅದಕ್ಕಾಗಿ ಕೃಷಿ ಸಂಶೋಧನೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲೇ ಆಮೂಲಾಗ್ರ ಬದಲಾವಣೆ ತರಬೇಕಿದೆ. ಕೃಷಿ ವಿಶ್ವವಿದ್ಯಾಲಯಗಳು, ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನಂತಹ ಸಂಸ್ಥೆಗಳು ಬಹುಶಿಸ್ತೀಯ ಸಹಯೋಗದ ಸಂಶೋಧನಾ ಚಟುವಟಿಕೆಗಳ ಜಾಲವನ್ನು ಹೆಣೆಯಬೇಕಿದೆ. ಭಾರತ ವಿಶ್ವದ ಅತಿದೊಡ್ಡ ತರಕಾರಿ ಮಾರುಕಟ್ಟೆ. ಜಾಗತಿಕ ಉತ್ಪಾದನೆಯ ಶೇ 9.3ರಷ್ಟು ಪಾಲು ಹೊಂದಿದೆ. ಆದರೆ, ಕಳಪೆ ಸಂಗ್ರಹಣಾ ವ್ಯವಸ್ಥೆಯ ಫಲವಾಗಿ ಸಾಕಷ್ಟು ತರಕಾರಿಗಳು ವ್ಯರ್ಥವಾಗುತ್ತಿವೆ. ತರಕಾರಿ ತ್ಯಾಜ್ಯಗಳಿಂದಲೂ ಜೀವಸತ್ವ ಹಾಗೂ ಸೇವಿಸುವ ನಾರು ಸಂಸ್ಕರಿಸಬೇಕು. ಬಳಸಲಾದ ಆಹಾರ ಪದಾರ್ಥಗಳನ್ನು ಪ್ರಾಣಿಗಳಿಗೆ ಆಹಾರವಾಗಿ ನೀಡಬೇಕು ಎಂದಿದ್ದಾರೆ.

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿ, ಹೆಚ್ಚುತ್ತಿರುವ ಮಾನವ ಚಟುವಟಿಕೆಗಳಿಂದಾಗಿ ಹವಾಮಾನ ವೈಪರೀತ್ಯ ಕಾಣುತ್ತಿದ್ದೇವೆ. ವಾತಾವರಣದ ಉಷ್ಣತೆ ಹೆಚ್ಚುತ್ತಿದೆ. ಮಳೆಯ ಪ್ರಮಾಣ ಮತ್ತು ವಿತರಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಮಳೆಯ ದಿನಗಳ ಸಂಖ್ಯೆ ಕಡಿಮೆಯಾಗುವ ಆತಂಕ ಎದುರಾಗಿದೆ. ಇಂತಹ ಸನ್ನಿವೇಶದಲ್ಲಿ ಸುಸ್ಥಿರ ಕೃಷಿ ಸವಾಲುಗಳನ್ನು ನಿವಾರಿಸುವ ಗುರಿಯನ್ನು ಕೃಷಿ ವಿಶ್ವವಿದ್ಯಾಲಯಗಳು ಸಮರ್ಥವಾಗಿ ತಲುಪಬೇಕು ಎಂದರು.  

ರಾಜ್ಯಪಾಲ ಥಾವರಚಂದ್ ಗೆಹಲೋತ್, ಕುಲಸಚಿವ ಬಸವೇಗೌಡ, ಶಿಕ್ಷಣ ನಿರ್ದೇಶಕ ಕೆ.ಸಿ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಬೇಲೂರಿನ ಕೃಷಿ ಕಾರ್ಮಿಕ ಕುಟುಂಬದ ಬಿ.ಎಸ್.ರಕ್ಷತಾ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಚಿನ್ನದ ಪದಕ ಪ್ರದಾನ ಮಾಡಿದರು. ಕೃಷಿ ಸಚಿವ  ಎನ್‌.ಚಲುವರಾಯಸ್ವಾಮಿ ಕುಲಪತಿ ಎಸ್‌.ವಿ.ಸುರೇಶ್ ಇದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಬೇಲೂರಿನ ಕೃಷಿ ಕಾರ್ಮಿಕ ಕುಟುಂಬದ ಬಿ.ಎಸ್.ರಕ್ಷತಾ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಚಿನ್ನದ ಪದಕ ಪ್ರದಾನ ಮಾಡಿದರು. ಕೃಷಿ ಸಚಿವ  ಎನ್‌.ಚಲುವರಾಯಸ್ವಾಮಿ ಕುಲಪತಿ ಎಸ್‌.ವಿ.ಸುರೇಶ್ ಇದ್ದಾರೆ.

- ಬಾಲ್ಯದಲ್ಲೇ ಕಂಡ ಕೃಷಿ ಸಮಸ್ಯೆಗಳು 

ಅಜ್ಜಂದಿರು ಅಪ್ಪ-ಅಮ್ಮ ಎಲ್ಲರೂ ಕೃಷಿಕರು. ಕುಟುಂಬದ ಕೃಷಿ ಸಂಕಷ್ಟವನ್ನು ಹತ್ತಿರದಿಂದ ಗಮನಿಸುತ್ತಾ ಬಂದಿರುವ ನನಗೆ ರೈತ ಸಮುದಾಯಕ್ಕೆ ಏನಾದರೂ ಸಹಾಯ ಮಾಡಬೇಕು ಎನ್ನುವ ಹಂಬಲವಿತ್ತು. ಹಾಗಾಗಿ ಓದಿಗೆ ಕೃಷಿ ವಿಷಯವನ್ನೇ ಆಯ್ಕೆ ಮಾಡಿಕೊಂಡೆ ಎಂದು ಬಿಎಸ್ಸಿ (ಆನರ್ಸ್‌) ಪದವಿಯಲ್ಲಿ ಎಂಟು ಚಿನ್ನದ ಪದಕ ಮುಡಿಗೇರಿಸಿಕೊಂಡ ನಂಜನಗೂಡಿನ ಸೌಜನ್ಯ ಸಂತಸ ಹಂಚಿಕೊಂಡರು. ಸದ್ಯ ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವೆ. ಓದು ಮಗಿದ ತಕ್ಷಣ ರೈತರಿಗೆ ಯಾವ ರೀತಿಯ ಸಹಾಯ ಮಾಡಬೇಕು ಎನ್ನುವ ಚೌಕಟ್ಟು ಸಿದ್ಧಪಡಿಸಿಕೊಳ್ಳುವೆ ಎಂದರು. ಎಂಟು ಚಿನ್ನದ ಪದಕ ಪಡೆದ ಡಿ.ದರ್ಶನ್‌ ಮಾತನಾಡಿ ‘ಅಪ್ಪ ದೇವರಾಜ್ ಪೀಣ್ಯದ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಾ ಓದಿಸಿದ್ದಾರೆ. ಕೃಷಿ ಪದವಿ ಮುಗಿಯುತ್ತಿದ್ದಂತೆ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಕೆಲಸ ಸಿಕ್ಕಿದೆ. ಅಲ್ಲಿದ್ದುಕೊಂಡು ಯುಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧರಿಸಿದ್ದೇನೆ. ಕಷ್ಟಪಟ್ಟು ಓದಿಸಿದ ಅಪ್ಪ ಸ್ವಾಭಿಮಾನಿ. ನನಗೆ ಕೆಲಸ ಸಿಕ್ಕರೂ ಅವರು ಕೆಲಸ ಬಿಡಲು ಒಪ್ಪುತ್ತಿಲ್ಲ’ ಎಂದು ಹೇಳಿದರು. ಹಾಸನ ಜಿಲ್ಲೆ ಬೇಲೂರಿನ ಕೃಷಿ ಕಾರ್ಮಿಕರ ಕುಟುಂಬದ ಕುಡಿ ಬಿ.ಎಸ್.ರಕ್ಷಿತಾ ಎರಡು ಚಿನ್ನದ ಪದಕಗಳನ್ನು ಪಡೆದಿದ್ದು ಕೃಷಿಯಲ್ಲಿ ಸಂಶೋಧನೆ ಕೈಗೊಳ್ಳುವ ಆಸಕ್ತಿ ಹೊಂದಿದ್ದಾರೆ. ಕೇರಳದ ಕೊಚ್ಚಿಯ ನೌಕರರಾದ ಶಾಲ್‌ ಹಾಗೂ ರಶ್ಮಿ ದಂಪತಿ ಪುತ್ರಿ ಮಾಳವಿಕಾ ಐದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಸದ್ಯ ದೆಹಲಿಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದು ವಿವಿಧ ತಳಿಗಳ ಸಂಶೋಧನೆ ಮಾಡುವ ಗುರಿ ಇಟ್ಟುಕೊಂಡಿದ್ದಾರೆ.  ಕೃಷಿ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಏಳು ಚಿನ್ನದ ಪದಕ ಗಳಿಸಿದ ಎನ್‌.ಪೂಜಾ ಅವರು ಬಳ್ಳಾರಿ ಜಿಲ್ಲೆ ಸಂಡೂರಿನವರು. ಐಎಎಸ್‌ ಮಾಡಿ ಜಿಲ್ಲಾಧಿಕಾರಿಯಾಗುವ ಕನಸು ಕಟ್ಟಿಕೊಂಡಿದ್ದಾರೆ.   ಬೇಸಾಯ ಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಏಳು ಚಿನ್ನದ ಪದಕ ಪಡೆದ ವುಚುಲ ಕೃಪಬಿಂದು ಅವರದು ಆಂಧ್ರಪ್ರದೇಶದ ರಾಜಮಂಡ್ರಿ. ಪ್ರಸ್ತುತ ಅವರು ಪಶ್ಚಿಮ ಬಂಗಾಳದಲ್ಲಿ ಕೃಷಿ ಸಂಶೋಧನೆ ಮಾಡುತ್ತಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT