ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.1ರಿಂದ ರಾಜ್ಯದಾದ್ಯಂತ ಮಂತ್ರಾಕ್ಷತೆ ವಿತರಣಾ ಅಭಿಯಾನ: ವಿಹಿಂಪ

Published 27 ಡಿಸೆಂಬರ್ 2023, 14:34 IST
Last Updated 27 ಡಿಸೆಂಬರ್ 2023, 14:34 IST
ಅಕ್ಷರ ಗಾತ್ರ

ಬೆಂಗಳೂರು: ಅಯೋಧ್ಯೆಯಲ್ಲಿ 2024ರ ಜ.24ರಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌‍ಪಿ) ನೇತೃತ್ವದಲ್ಲಿ ಜ.1ರಿಂದ ಜ.15ರವರೆಗೆ ರಾಜ್ಯದಾದ್ಯಂತ ಮಂತ್ರಾಕ್ಷತೆ ವಿತರಣಾ ಅಭಿಯಾನ ನಡೆಯಲಿದೆ. 

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ‘ಸುಮಾರು 500 ವರ್ಷಗಳ ಸುದೀರ್ಘ ಸಂಘರ್ಷದ ಫಲಶ್ರುತಿಯ ಪರಿಣಾಮ ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣಗೊಂಡಿದೆ. ಈಗ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮದಲ್ಲಿದ್ದೇವೆ. ಈ ಸಂದರ್ಭದಲ್ಲಿ ರಾಷ್ಟ್ರದ ಪ್ರತಿ ಮನೆಗೂ ಮಂತ್ರಾಕ್ಷತೆ ತಲುಪಿಸುವ ಯೋಜನೆಯನ್ನು ಅಯೋಧ್ಯೆಯ ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌’ ಹಮ್ಮಿಕೊಂಡಿದೆ. ಈ ಕಾರ್ಯವನ್ನು ವಿಶ್ವ ಹಿಂದೂ ಪರಿಷತ್ ಪರಿವಾರದ ಸಂಘಟನೆಗಳು ಮಾಡಲಿವೆ. ಮಂತ್ರಾಕ್ಷತೆಯ ಜತೆಗೆ ರಾಮ ಮಂದಿರದ ಭಾವಚಿತ್ರ ಹಾಗೂ ನಿವೇದನಾ ಪತ್ರವನ್ನು ಪ್ರತಿ ಮನೆಗೂ ತಲುಪಿಸಲಾಗುತ್ತದೆ’ ಎಂದು ಹೇಳಿದರು. 

‘15 ದಿನಗಳ ಅಭಿಯಾನದಲ್ಲಿ ಜ.7ರಂದು ಮಹಾ ಸಂಪರ್ಕ ಅಭಿಯಾನ ನಡೆಯಲಿದೆ. ಆ ದಿನದಂದು ಎಲ್ಲಾ ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಈಗಾಗಲೇ ಅಯೋಧ್ಯೆಯಿಂದ ಮಂತ್ರಾಕ್ಷತೆ ಬಂದಿದ್ದು, ಅದನ್ನು ಎಲ್ಲ ತಾಲ್ಲೂಕುಗಳಿಗೂ ಹಂಚಿಕೆ ಮಾಡಲಾಗಿದೆ. ಅಭಿಯಾನದ ದಿನಗಳಂದು ಕಾರ್ಯಕರ್ತರು ಮನೆ ಮನೆಗೆ ಇದನ್ನು ತಲುಪಿಸುತ್ತಾರೆ. ಮಂದಿರ ನಿರ್ಮಾಣಕ್ಕೆ ನಡೆದ ನಿಧಿ ಸಮರ್ಪಣಾ ಅಭಿಯಾನದಲ್ಲಿ ರಾಜ್ಯದ 29 ಸಾವಿರ ಗ್ರಾಮಗಳನ್ನು ತಲುಪಿದ್ದೆವು. ಈ ಬಾರಿಯೂ ಅಷ್ಟು ಗ್ರಾಮಗಳನ್ನು ತಲುಪುವ ವಿಶ್ವಾಸವಿದೆ’ ಎಂದರು. 

‘ಜ.24ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ನಗರ, ಗ್ರಾಮಗಳ ಮಂದಿರಗಳಲ್ಲಿ ವಿಶೇಷ ಸತ್ಸಂಗ, ಭಜನೆಗಳು ನಡೆಯಲಿವೆ. ಅಲ್ಲಿಯೇ ಎಲ್‌ಇಡಿ ಪರದೆಯಲ್ಲಿ ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದ ನೇರ‍ಪ್ರಸಾರ ವೀಕ್ಷಿಸಬಹುದಾಗಿದೆ. ಅಂದು ಸಂಜೆ ಸೂರ್ಯಾಸ್ತದ ಬಳಿಕ ಪ್ರತಿ ಮನೆಯಲ್ಲಿಯೂ ಕನಿಷ್ಠ ಐದು ದೀಪಗಳನ್ನು ಬೆಳಗಬೇಕು. ಈ ಮೂಲಕ ದೀಪೋತ್ಸವದಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT