ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಮತ್ತೊಂದು ಅವಘಡ: ಕುಸಿದು ಬಿದ್ದ ಅಪಾರ್ಟ್‌ಮೆಂಟ್‌

Last Updated 7 ಅಕ್ಟೋಬರ್ 2021, 17:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ಕಸ್ತೂರಿನಗರದ ಡಾಕ್ಟರ್ಸ್ ಬಡಾವಣೆಯಲ್ಲಿ ನಿರ್ಮಿಸಿದ್ದ ನಾಲ್ಕು ಅಂತಸ್ತಿನ ಕಟ್ಟಡ ಗುರುವಾರ ಕುಸಿದು ಬಿದ್ದಿದೆ. ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದೇ ಅವಘಡಕ್ಕೆ ಕಾರಣವೆಂದು ಹೇಳಲಾಗುತ್ತಿದ್ದು, ಎ.ಎನ್‌. ಬಿಲ್ಡರ್ಸ್‌ ವಿರುದ್ಧ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆನ್ನಿಗಾನಹಳ್ಳಿ (ವಾರ್ಡ್‌ ನಂ.50) ವ್ಯಾಪ್ತಿಯಲ್ಲಿರುವ ಡಾಕ್ಟರ್ಸ್ ಬಡಾವಣೆಯ 2ನೇ ಅಡ್ಡರಸ್ತೆಯಲ್ಲಿ ‘ಸನ್‌ಶೈನ್’ ಅಪಾರ್ಟ್‌ಮೆಂಟ್‌ ಸಮುಚ್ಚಯ ಹೆಸರಿನಲ್ಲಿ ಕಟ್ಟಡ ನಿರ್ಮಿಸಲಾಗಿತ್ತು. ಕಟ್ಟಡದ ಎಂಟು ಫ್ಲ್ಯಾಟ್‌ಗಳಲ್ಲಿ ಜನರು ವಾಸವಿದ್ದರು. ಕೆಲ ದಿನಗಳ ಹಿಂದಷ್ಟೇ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡು, ಸ್ವಲ್ಪ ಪ್ರಮಾಣದಲ್ಲಿ ವಾಲಿತ್ತು.

ಆತಂಕಗೊಂಡ ಎಲ್ಲ ನಿವಾಸಿಗಳು, ಫ್ಲ್ಯಾಟ್‌ ಖಾಲಿ ಮಾಡಿದ್ದರು. ನಿಧಾನವಾಗಿ ವಾಲುತ್ತಿದ್ದ ಕಟ್ಟಡ, ಗುರುವಾರ ಮಧ್ಯಾಹ್ನ ಏಕಾಏಕಿ ಕುಸಿದು ಬಿದ್ದಿದ್ದು, ಫ್ಲ್ಯಾಟ್‌ಗಳಲ್ಲಿ ಯಾರೂ ಇಲ್ಲದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

‘ಎ.ಎನ್‌. ಬಿಲ್ಡರ್ಸ್‌ನ ಆಯೇಷಾ ಬೇಗ್, ಮೊಹಮ್ಮದ್ ಆಸೀಫ್ ಹಾಗೂ ಮೊಹಮ್ಮದ್ ಇಯಾಸುದ್ದೀನ್ ಎಂಬುವರು ಜಂಟಿಯಾಗಿ ಕಟ್ಟಡ ನಿರ್ಮಿಸಿದ್ದರು. ಕಟ್ಟಡ ನಿರ್ಮಾಣದ ವೇಳೆ ಯಾವುದೇ ನಿಯಮಗಳನ್ನು ಪಾಲಿಸಿರಲಿಲ್ಲ. ಬಿಬಿಎಂಪಿ ಅಧಿಕಾರಿಗಳು ನೀಡಿರುವ ದೂರು ಆಧರಿಸಿ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡು ಇಡೀ ಕಟ್ಟಡದ ಕುಸಿದಿತ್ತು. ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು, ಕಟ್ಟಡದ ಅವಶೇಷಗಳಡಿ ಯಾರಾದರೂ ಸಿಲುಕಿದ್ದಾರಾ? ಎಂಬುದನ್ನು ಹುಡುಕಾಡಿದರು. ಯಾರು ಇಲ್ಲವೆಂಬುದು ಗೊತ್ತಾಗುತ್ತಿದ್ದಂತೆ ನಿಟ್ಟುಸಿರು ಬಿಟ್ಟೆವು’ ಎಂದೂ ತಿಳಿಸಿದರು.

‘ಎಂಟು ವರ್ಷಗಳ ಹಿಂದಷ್ಟೇ ಕಟ್ಟಡವನ್ನು ನಿರ್ಮಿಸಲಾಗಿತ್ತು. ಕಟ್ಟಡದ ಗುಣಮಟ್ಟ ಉತ್ತಮವಾಗಿರಲಿಲ್ಲ. ಹೀಗಾಗಿ, ಎಂಟೇ ವರ್ಷದಲ್ಲೇ ಬಿರುಕು ಕಾಣಿಸಿಕೊಂಡು ಕುಸಿದು ಬಿದ್ದಿದೆ. ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸಿದ್ದ ಎ.ಎನ್‌. ಬಿಲ್ಡರ್ಸ್‌ನ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಆರೋಪಿಗಳನ್ನು ವಿಚಾರಣೆ ನಡೆಸಿದ ಬಳಿಕವೇ ಮತ್ತಷ್ಟು ಮಾಹಿತಿ ಸಿಗಲಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದೂ ಹೇಳಿದರು.

ಶ್ವಾನ ರಕ್ಷಣೆ: ಕುಸಿದು ಬಿದ್ದ ಕಟ್ಟಡದ ಫ್ಲ್ಯಾಟ್‌ನಲ್ಲಿ ಶ್ವಾನವೊಂದು ಸಿಲುಕಿಕೊಂಡಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ, ಫ್ಲ್ಯಾಟ್‌ನೊಳಗೆ ಹೋಗಿ ಶ್ವಾನವನ್ನು ರಕ್ಷಿಸಿ ಹೊರಗೆ ತಂದರು. ಅದನ್ನು ಪಡೆದ ಮಾಲೀಕರು, ಸಿಬ್ಬಂದಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅನುಮತಿ ಮೂರು ಅಂತಸ್ತಿಗೆ: ಕಟ್ಟಿದ್ದು ನಾಲ್ಕು ಅಂತಸ್ತು

‘ಮೂರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು, ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ‘ಆಯೆಷಾ ಬೇಗ್, ಮೊಹಮ್ಮದ್ ಆಸಿಫ್ ಮತ್ತು ಮೊಹಮ್ಮದ್ ಇಯಾಸುದ್ದೀನ್‌ ಎಂಬುವರು ಜಂಟಿಯಾಗಿ 40/80 ಅಡಿ ಅಳತೆಯಲ್ಲಿ ಸನ್‌ಶೈನ್ ಅಪಾರ್ಟ್‌ಮೆಂಟ್ ಹೆಸರಿನಲ್ಲಿ ಎಂಟು ಫ್ಲ್ಯಾಟ್‌ಗಳನ್ನು ಒಳಗೊಂಡ ಮನೆ ನಿರ್ಮಿಸಿದ್ದಾರೆ. 2012–13ನೇ ಸಾಲಿನಲ್ಲಿ ಮೂರು ಅಂತಸ್ತಿನ ಕಟ್ಟಡಕ್ಕೆ ಅನುಮತಿ ಪಡೆಯಲಾಗಿದೆ. ಆದರೆ, ನಾಲ್ಕು ಅಂತಸ್ತಿನ ಕಟ್ಟಡ ಮತ್ತು ಅದರ ಮೇಲೊಂದು ಟೆಂಟ್ ನಿರ್ಮಿಸಲು ಸಿದ್ಧತೆ ನಡೆಸಲಾಗಿತ್ತು’ ಎಂದು ಹೇಳಿದರು.

‘ಕೆರೆ ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದರಿಂದ ಅನಾಹುತವಾಗಿದೆ ಮತ್ತು ಸ್ವಾಧೀನಾನುಭವ ಪತ್ರ ಪಡೆಯದೆ ವಾಸಕ್ಕೆ ನೀಡಲಾಗಿದೆ ಎಂಬ ಆರೋಪಗಳೂ ಇವೆ. ಮಣ್ಣು ಪರೀಕ್ಷೆ ನಡೆಸಿಯೇ ಕಟ್ಟಡ ನಿರ್ಮಿಸಬೇಕಾಗುತ್ತದೆ. ಆದರೆ, ಅದ್ಯಾವುದನ್ನು ಮಾಡಿದಂತೆ ಕಾಣಿಸುತ್ತಿಲ್ಲ ಮತ್ತು ಕಳಪೆ ಕಾಮಗಾರಿಯಿಂದಲೇ ಕಟ್ಟಡ ಬಿದ್ದಿದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕೆರೆ ಜಾಗದಲ್ಲಿ ಕಟ್ಟಡ ಇರುವ ಬಗ್ಗೆ ಸ್ಥಳೀಯರು ದೂರು ಕೊಟ್ಟಿದ್ದರೂ ನಿರ್ಲಕ್ಷ್ಯ ವಹಿಸಿದ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದರು.

‌‌‌‘ಸ್ವಾಧೀನಾನುಭವ ಪತ್ರ ಪಡೆಯದಿದ್ದರೆ ವಿದ್ಯುತ್ ಮತ್ತು ನೀರಿನ ಸಂಪರ್ಕ ದೊರೆಯುವುದಿಲ್ಲ. ಅಕ್ರಮವಾಗಿ ವಿದ್ಯುತ್ ಮತ್ತು ನೀರಿನ ಸಂಪರ್ಕ ಪಡೆದಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಅಕ್ರಮವಾಗಿ ಸಂಪರ್ಕ ನೀಡಿದ್ದರೆ ಸಂಬಂಧಪಟ್ಟ ಅಧಿಕಾರಿಯ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಅಕ್ಕ–ಪಕ್ಕದ ಕಟ್ಟಡ ಸದೃಢತೆ ಬಗ್ಗೆಯೂ ಸಮೀಕ್ಷೆ

ಕುಸಿತಗೊಂಡ ಕಟ್ಟಡದ ಸುತ್ತಮುತ್ತಲಿನ ಕಟ್ಟಡಗಳ ದೃಢತೆ, ವಾಸ ಯೋಗ್ಯದ ಬಗ್ಗೆ ನುರಿತ ಸ್ಟ್ರಕ್ಚರಲ್ ಎಂಜಿನಿಯರ್‌ಗಳನ್ನು ಒಳಗೊಂಡ ಪ್ರತಿಷ್ಠಿತ ಸಂಸ್ಥೆ ಮೂಲಕ ಸಮೀಕ್ಷೆ ನಡೆಸಿ ವರದಿ ನೀಡಲು ಜಂಟಿ ಆಯುಕ್ತರಿಗೆ ಮತ್ತು ಮುಖ್ಯ ಎಂಜಿನಿಯರ್‌ಗೆ ಸೂಚನೆ ನೀಡಲಾಗಿದೆ ಎಂದು ಗೌರವ್ ಗುಪ್ತ ಹೇಳಿದರು.

ಮಣ್ಣಿನ ಪರೀಕ್ಷೆ ನಡೆಸಬೇಕು. ಕಟ್ಟಡ ವಾಸಯೋಗ್ಯ ಅಲ್ಲದಿದ್ದರೆ ಕೂಡಲೇ ತೆರವುಗೊಳಿಸಬೇಕು. ಯಾವುದೇ ಕಟ್ಟಡದಲ್ಲಿ ನಿಯಮ ಬಾಹಿರವಾಗಿ ಅನಧಿಕೃತ ಮಹಡಿ ನಿರ್ಮಿಸಿಕೊಂಡಿರುವುದು ದೃಢಪಟ್ಟಲ್ಲಿ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಬಿದ್ದಿರುವ ಕಟ್ಟಡವನ್ನು ಸಂಪೂರ್ಣವಾಗಿ ತೆರವುಗೊಳಿಸುವ ಕಾಮಗಾರಿ ಆರಂಭಿಸಲಾಗಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT