ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶವಂತಪುರ ಕ್ಷೇತ್ರದ ವಾರ್ಡ್‌ ನೋಟ: ಕಲ್ಲು ಗುಂಡಿಯ ಹಾದಿ, ದೂಳಿನ ಸ್ನಾನ

Last Updated 25 ಡಿಸೆಂಬರ್ 2019, 3:51 IST
ಅಕ್ಷರ ಗಾತ್ರ

ಬೆಂಗಳೂರು: ಕಲ್ಲುಗುಂಡಿಗಳ ಹಾದಿ, ದೂಳಿನ ಸ್ನಾನ. ಕೆರೆ ಇದೆ, ನೀರಿಲ್ಲ. ಬೇಸಿಗೆ ಬಂದರೆ ನೀರಿಗೆ ಬರ... ಇದು ಯಶವಂತಪುರ ವಿಧಾನಸಭಾ ಕ್ಷೇತ್ರದ ಐದು ವಾರ್ಡ್‌ಗಳ ಚಿತ್ರಣ. ಸಿಲಿಕಾನ್ ಸಿಟಿಗೆ ಜೋತು ಬಿದ್ದಂತಿರುವ ಈ ಹಳ್ಳಿಗಳು ಈಗ ಬಡಾವಣೆ ರೂಪಕ್ಕೆ ಹೊರಳುತ್ತಿವೆ. ಈ ವಾರ್ಡ್‌ಗಳ ಸದ್ಯದ ಚಿತ್ರಣವನ್ನು ವಿಜಯಕುಮಾರ್ ಎಸ್.ಕೆ. ಕಟ್ಟಿಕೊಟ್ಟಿದ್ದಾರೆ.

ವಾರ್ಡ್‌ 40– ದೊಡ್ಡಬಿದರಕಲ್ಲು

ಪೀಣ್ಯ ಕೈಗಾರಿಕಾ ಪ್ರದೇಶದ ಹೊಗೆ ಸೀಳಿಕೊಂಡು ಮುನ್ನುಗ್ಗಿದರೆ ಚಿಕ್ಕಬಿದರಕಲ್ಲು, ದೊಡ್ಡಬಿದರಕಲ್ಲು, ತಿಪ್ಪೇನಹಳ್ಳಿ, ತಿಗಳರಪಾಳ್ಯ, ಅಂದ್ರಹಳ್ಳಿ, ಡಿ ಗ್ರೂಪ್ ಸರ್ಕಲ್ ಎದುರಾಗುತ್ತವೆ. ಈ ಹಳ್ಳಿಗಳು 2006ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರಿಕೊಂಡಿವೆ. ಈ ಊರುಗಳಿಗೆ ಹೋಗಲು ಬೈಕ್ ಅಥವಾ ಯಾವುದೇ ವಾಹನ ಏರಿದರೂ ಮಣ್ಣಿನ ಮಜ್ಜನವಾಗುವುದು ಗ್ಯಾರಂಟಿ. ರಸ್ತೆ ಬದಿ ನಡೆದುಕೊಂಡು ಹೋದರಂತೂ ದೂಳು ದೇಹ ಸೇರುವುದನ್ನು ತಪ್ಪಿಸಲಾಗದು. ತುಮಕೂರು ರಸ್ತೆಯಿಂದ ಮಾಗಡಿ ರಸ್ತೆಗೆ ನೈಸ್ ರಸ್ತೆಗೆ ಪರ್ಯಾಯ ಸಂಪರ್ಕ ರಸ್ತೆಯೂ ಈ ಊರುಗಳನ್ನು ಹಾದು ಹೋಗುತ್ತದೆ. ಅತ್ತ ಹಳಿಯ ಸೌಂದರ್ಯವೂ ಉಳಿಯದೇ, ಇತ್ತ ನಗರದ ಸೌಲಭ್ಯಗಳೂ ಸಿಗದೆ ಈ ಭಾಗದ ಜನರು ರಸ್ತೆಗಳಲ್ಲಿ ಉಕ್ಕುತ್ತಿರುವ ಮಣ್ಣನ್ನು ವಿಧಿಯಿಲ್ಲದೆ ಅಕ್ಷರಶಃ ಮುಕ್ಕುತ್ತಿದ್ದಾರೆ.

ಈ ರಸ್ತೆಯಲ್ಲಿ ಕೆಲವೇ ದಿನಗಳ ಕಾಲ ವಾಹನ ಚಾಲನೆ ಮಾಡಿದವರು ‘ಡರ್ಟ್‌ಟ್ರ್ಯಾಕ್‌ ರೇಸ್‌’ನಲ್ಲಿ ವಾಹನ ಚಾಲನೆ ಮಾಡುವುದೂ ಕಷ್ಟವಾಗಲಾರದು. ದೆಹಲಿಯನ್ನು ಮೀರಿಸುವಷ್ಟು ವಾಯುಮಾಲಿನ್ಯವನ್ನು ಈ ಪ್ರದೇಶದ ಜನ ಅನುಭವಿಸುತ್ತಿದ್ದಾರೆ. ಮೂಗಿಗೆ ಬಟ್ಟೆ ಕಟ್ಟಿಕೊಂಡರೂ ದೂಳು ಉಸಿರಿನೊಂದಿಗೆ ಗಂಟಲು ಸೇರುವುದನ್ನು ತಪ್ಪಿಸಲು ಆಗುವುದಿಲ್ಲ ಎನ್ನುತ್ತಾರೆ ಸ್ಥಳೀಯರು. ಅಂದ್ರಹಳ್ಳಿ ಮುಖ್ಯರಸ್ತೆ ಮಾತ್ರವಲ್ಲ, ವಾರ್ಡ್‌ನ ಯಾವ ರಸ್ತೆಯನ್ನು ಹೊಕ್ಕರೂ ಗುಡ್ಡಗಾಡು ನೆನಪಾಗುತ್ತವೆ. ಮಹಿಳೆಯರು, ಯುವತಿಯರು ಸ್ಕೂಟರ್ ಚಾಲನೆ ಮಾಡುವುದನ್ನೇ ಬಿಟ್ಟಿದ್ದಾರೆ. ‘ಗುಂಡಿಗಳಲ್ಲಿ ಬಿದ್ದು–ಎದ್ದು ಸಾಕಾಗಿ ಹೋಗಿದೆ. ಶಾಲೆಗೆ ಮಕ್ಕಳನ್ನು ಬಿಡಲು ನೆಡೆದುಕೊಂಡೇ ಹೋಗುತ್ತೇವೆ. ದೂಳು ಕುಡಿದು ಮಕ್ಕಳಿಗೆ ಕೆಮ್ಮು–ದಮ್ಮು ಕಾಣಿಸಿಕೊಳ್ಳುತ್ತಿದೆ’ ಎಂದು ಅಂದ್ರಹಳ್ಳಿಯ ಕವಿತಾ ಹೇಳಿದರು.

ಕಸದ ಸಮಸ್ಯೆಯ ಬಗ್ಗೆ ಕೇಳಿದರೆ ‘ಇದು ಯಶವಂತಪುರ ಅಲ್ಲ, ಕಸವಂತಪುರ’ ಎನ್ನುತ್ತಾರೆ ಚಿಕ್ಕಬಿದರಕಲ್ಲಿನ ಹನುಮೇಗೌಡ. ‘2004–05ರಲ್ಲಿ ಗ್ರಾಮಸ್ಥರೇ ಸೇರಿ ಒಳಚರಂಡಿ ವ್ಯವಸ್ಥೆ ಮಾಡಿಕೊಂಡಿದ್ದೆವು. ಆ ಪೈಪುಗಳನ್ನು ಇಲಿ, ಹೆಗ್ಗಣಗಳು ಕೊರೆದು ಮಣ್ಣು ತುಂಬಿಕೊಂಡಿವೆ. ಸರಾಗವಾಗಿ ಒಳಚರಂಡಿ ನೀರು ಹರಿಯುತ್ತಿಲ್ಲ. ಹಣ ಕೊಟ್ಟರೆ ಜನ ಮತ ಹಾಕುತ್ತಾರೆ ಎಂಬ ಕಾರಣಕ್ಕೆ ಜನಪ್ರತಿನಿಧಿಗಳೂ ಈ ಸಮಸ್ಯೆಗಳಿಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮೈಸೂರು ಲ್ಯಾಂಪ್ಸ್ ಬಡಾವಣೆಯಲ್ಲಿ ಅಂಗವಿಕಲರೊಬ್ಬರು ಕಷ್ಟಪಟ್ಟು ಸ್ಕೂಟರ್ ಚಾಲನೆ ಮಾಡುತ್ತಿರುವುದು
ಮೈಸೂರು ಲ್ಯಾಂಪ್ಸ್ ಬಡಾವಣೆಯಲ್ಲಿ ಅಂಗವಿಕಲರೊಬ್ಬರು ಕಷ್ಟಪಟ್ಟು ಸ್ಕೂಟರ್ ಚಾಲನೆ ಮಾಡುತ್ತಿರುವುದು

‘‌‌ಬೇಸಿಗೆ ಬಂದರೆ ಕುಡಿಯುವ ನೀರಿನ ಸಮಸ್ಯೆ ಗಂಭೀರ ರೂಪ ತಾಳುತ್ತದೆ. ಜನವರಿ ನಂತರ ಪ್ರತಿವರ್ಷವೂ ಹಣ ಕೊಟ್ಟು ಟ್ಯಾಂಕರ್ ನೀರು ತರಿಸಿಕೊಳ್ಳುವುದು ತಪ್ಪಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದರೂ ಫಿಲ್ಟರ್ ಹಾಳಾಗಿ ಹೋಗಿವೆ. ಕಾವೇರಿ ನೀರಿನ ಸಂಪರ್ಕ ಕಲ್ಪಿಸುತ್ತೇವೆ ಎಂದು ಎರಡು ವರ್ಷದಿಂದ ಬಿಬಿಎಂಪಿ ಅಧಿಕಾರಿಗಳು ಬುರುಡೆ ಬಿಡುತ್ತಿದ್ದಾರೆ. ಬಿಬಿಎಂಪಿಗಿಂತ ಗ್ರಾಮ ಪಂಚಾಯಿತಿಯೇ ಎಷ್ಟೋ ಮೇಲಾಗಿತ್ತು’ ಎನ್ನುತ್ತಾರೆ ರಾಮಕೃಷ್ಣಯ್ಯ.

ವಾರ್ಡ್ 72– ಹೆರೋಹಳ್ಳಿ

‌ಅಂದ್ರಹಳ್ಳಿ ಕಡೆಯಿಂದ ಡಿಗ್ರೂಪ್ ವೃತ್ತ ದಾಟಿದರೆ ಹೆರೋಹಳ್ಳಿ ವಾರ್ಡ್ ಆರಂಭವಾಗುತ್ತದೆ. ಈ ವಾರ್ಡ್ ವ್ಯಾಪ್ತಿಯಲ್ಲಿ ಅಂದ್ರಹಳ್ಳಿ ಮುಖ್ಯರಸ್ತೆ, ಮಹದೇಶ್ವರನಗರ ಮುಖ್ಯ ರಸ್ತೆಗಳು ಹಾಗೂ ಕೆಲವು ಅಡ್ಡರಸ್ತೆಗಳೂ ಡಾಂಬರು ಕಂಡಿವೆ. ಶನಿಮಹಾತ್ಮ ದೇವಸ್ಥಾನ ರಸ್ತೆಯನ್ನು ಅಗೆದು ಬಿಡಲಾಗಿದ್ದು, ವಾಹನ ಸಂಚಾರವಿರಲಿ, ನಡೆದಾಡಲೂ ಸಾಧ್ಯವಾಗದ ಸ್ಥಿತಿ ಇದೆ.

ಬಿಬಿಎಂಪಿಗೆ ಸೇರಿದ 110 ಹಳ್ಳಿಗಳಲ್ಲಿ ನಿರ್ಮಾಣವಾದ ಹೊಸ ವಾರ್ಡ್‌ ಇದು. ಹೆರೋಹಳ್ಳಿ, ಮುತ್ತಯ್ಯನಪಾಳ್ಯ, ಬ್ಯಾಡರಹಳ್ಳಿ, ಗಿಡದಕೊನೆಹಳ್ಳಿ ಗ್ರಾಮಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗಿದೆ. ಈ ವಾರ್ಡ್‌ನಲ್ಲಿ ಕಸ ನಿರ್ವಹಣೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ವಾರ್ಡ್‌ಗೆ ಹೊಂದಿಕೊಂಡಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳಿವೆ. ಅಲ್ಲಿನ ಕಸ ಈ ವಾರ್ಡ್‌ನ ಖಾಲಿ ನಿವೇಶನಗಳು, ರಸ್ತೆಯ ಪಾಲಾಗುತ್ತಿವೆ. ಮಾರ್ಷಲ್‌ಗಳ ಕಣ್ತಪ್ಪಿಸಿ ಕಸ ಬಿಸಾಡಿ ಹೋಗುವುದು ತಪ್ಪಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತದೆ. ವಾರ್ಡ್‌ನ ಕೆಲ ಬಡಾವಣೆಗಳಿಗೆ ಕಾವೇರಿ ನೀರಿನ ಸಂಪರ್ಕ ನೀಡಲಾಗಿದೆ. 110 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕಿಸುವ ಯೋಜನೆಯ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುವ ಕಾರಣ ಮುಂದೆ ನೆಮ್ಮದಿಯಿಂದ ಉಸಿರಾಡಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

ಉಲ್ಲಾಳ ಉಪನಗರದಲ್ಲಿ ಒಳಚರಂಡಿ ಕಾಮಗಾರಿಗೆ ರಸ್ತೆ ಅಗೆದಿರುವ ದೃಶ್ಯ
ಉಲ್ಲಾಳ ಉಪನಗರದಲ್ಲಿ ಒಳಚರಂಡಿ ಕಾಮಗಾರಿಗೆ ರಸ್ತೆ ಅಗೆದಿರುವ ದೃಶ್ಯ

ವಾರ್ಡ್‌ 130– ಉಲ್ಲಾಳು
ನೈಸ್ ರಸ್ತೆಗೆ ಹೊಂದಿಕೊಂಡಂತೆ ಇರುವ ಉಲ್ಲಾಳ ವಾರ್ಡ್‌ನ ನಾಲ್ಕು ಬಡಾವಣೆಗಳಲ್ಲಿ (ಉಲ್ಲಾಳು, ಉಲ್ಲಾಳು ಉಪನಗರ, ಉಪಕಾರ ಲೇಔಟ್ ಮತ್ತು ಮಾರುತಿನಗರ) ಕಾವೇರಿ ನೀರು ಸಂಪರ್ಕ ಹಾಗೂ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಇಡೀ ಉಲ್ಲಾಳು ಉಪನಗರ ಕೆಮ್ಮಣ್ಣಿನ ಗುಂಡಿಯಂತಾಗಿದೆ. ಒಳಚರಂಡಿ ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯಲಾಗಿದೆ. ಬಸ್ ನಿಲ್ದಾಣ ಕಾಮಗಾರಿಯೂ ಪ್ರಗತಿಯಲ್ಲಿದೆ.

ದುಬಾಸಿಪಾಳ್ಯ ಕೆರೆ, ಉಲ್ಲಾಳುಕೆರೆ ಮತ್ತು ಕೆಂಗೇರಿ ಉಪನಗರದ ಕೆರೆ ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ಕೆರೆಗಳಿಗೆ ಒಳಚರಂಡಿ ನೀರು ಸೇರಿ ಸೇರಿಕೊಳ್ಳುತ್ತಿದೆ. ಉಲ್ಲಾಳುಕೆರೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸಿದೆಯಾದರೂ ಇಲ್ಲಿಗೆ ಒಳಚರಂಡಿ ನೀರು ಹೊರತಾಗಿ ಮಳೆ ನೀರು ಸೇರುವುದಿಲ್ಲ. ಹೀಗಾಗಿ, ಕೆರೆ ತುಂಬುವುದಿಲ್ಲ, ಇರುವ ನೀರು ಕೂಡ ಶೌಚಗುಂಡಿಯದ್ದು ಎಂದು ವಾಯುವಿಹಾರ ನಡೆಸುವ ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ. ಕೆರೆ ಅಭಿವೃದ್ಧಿಪಡಿಸಿದ ನಂತರ ಕೆರೆಗೆ ಮಳೆ ನೀರು ಸೇರುತ್ತಲೇ ಇಲ್ಲ. ಎಂಜಿನಿಯರ್‌ಗಳು ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬುದಕ್ಕೆ ಇದು ಉದಾಹರಣೆ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.

ವಾರ್ಡ್‌ 159– ಕೆಂಗೇರಿ
ಯಶವಂತಪುರ ಕ್ಷೇತ್ರದ ಬೇರೆ ಬಡಾವಣೆಗಳಿಗೆ ಹೋಲಿಸಿದರೆ ಅಷ್ಟೇನೂ ಸಮಸ್ಯೆಗಳಿಲ್ಲ. ಜಲಕಾಯಗಳಿಗೆ ರಾಜಕಾಲುವೆ ಮೂಲಕ ಕೊಳಚೆ ನೀರು ಸೇರುತ್ತಿರುವುದೇ ಇಲ್ಲಿನ ದೊಡ್ಡ ಸಮಸ್ಯೆ. ಗಾಂಧಿನಗರ ಕೆರೆಗೆ ಕೊಳಚೆ ನೀರು ಸೇರುತ್ತಿದೆ, ಕೆರೆಯ ತುಂಬೆಲ್ಲಾ ಗಿಡಗಳು ಬೆಳೆದು ನಿಂತಿವೆ. ಕೆರೆ ಅಭಿವೃದ್ಧಿಪಡಿಸುವ ಕಾಮಗಾರಿ ಆರಂಭಿಸುವುದಾಗಿ ಬಿಬಿಎಂಪಿ ಹೇಳುತ್ತಲೇ ಇದೆ. ಕೆಲಸ ಆರಂಭವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಇನ್ನೂ ಹಲವು ಮನೆಗಳಿಗೆ ಕಾವೇರಿ ನೀರಿನ ಸಂಪರ್ಕ ಆಗಿಲ್ಲ. ಒಳಚರಂಡಿ ನೀರು ರಾಜಕಾಲುವೆ ಸೇರುವುದು ತಪ್ಪಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ಕೆಂಗೇರಿ ರೈಲು ನಿಲ್ದಾಣದ ಬಳಿ ವಾಹನಗಳ ನಿಲುಗಡೆಗೆ ಜಾಗ ಇಲ್ಲದ ಕಾರಣ ಸಮಸ್ಯೆ ದೊಡ್ಡಾಗಿದೆ. ಮೈಸೂರು ಕಡೆಯಿಂದ ಬರುವ ರೈಲಿನಲ್ಲಿ ಬಹುತೇಕ ಪ್ರಯಾಣಿಕರು ಕೆಂಗೇರಿಯಲ್ಲೇ ಇಳಿಯುತ್ತಾರೆ. ಪ್ರಯಾಣಿಕರನ್ನು ಕರೆದೊಯ್ಯಲು ಬರುವ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲುವ ಕಾರಣ ಹಗಲು–ರಾತ್ರಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ವಾರ್ಡ್‌ ‌198– ಹೆಮ್ಮಿಗೆಪುರ
ಕೆಂಗೇರಿಗೆ ಪಕ್ಕದಲ್ಲಿರುವ ಹೆಮ್ಮಿಗೆಪುರ ವಾರ್ಡ್, ನೈಸ್ ರಸ್ತೆಯ ಆಜುಬಾಜಿನಲ್ಲಿದೆ. ಹಳ್ಳಿಯ ಸೊಗಡು ಈ ವಾರ್ಡ್‌ನಲ್ಲಿ ಇನ್ನೂ ಇದೆ. ಊರಿನವರು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನೊಂದೆಡೆ, ನಗರದ ಕಡೆಯಿಂದ ಬರುತ್ತಿರುವ ಕಾಂಕ್ರಿಟ್‌ ಕಟ್ಟಡಗಳು ಹಳೇ ಊರುಗಳನ್ನು ನುಂಗುವಂತೆ ಬೆಳೆಯುತ್ತಿವೆ. 110 ಹಳ್ಳಿಗಳಲ್ಲಿ ಒಳಚರಂಡಿ ಮತ್ತು ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಜಲಮಂಡಳಿ ಕಾಮಗಾರಿ ಆರಂಭಿಸಿದ್ದು, ಬರೊಬ್ಬರಿ 10 ಹಳ್ಳಿಗಳು ಹೆಮ್ಮಿಗೆಪುರ ಒಂದೇ ವಾರ್ಡ್‌ನಲ್ಲಿವೆ.

ರಾಮಪುರ, ವರಾಹಸಂದ್ರ, ಸೋಮಪುರ, ತಲಘಟ್ಟಪುರ, ಉತ್ತರಹಳ್ಳಿ, ಕೋನಸಂದ್ರ, ಕಾಣಕಲ್ ಸೇರಿ ಹತ್ತುಗಳಲ್ಲಿ ಕಾಮಗಾರಿ ಆರಂಭವಾಗಿದೆ. ಹಳೇ ಊರುಗಳ ರಸ್ತೆಗಳನ್ನು ಅಗೆಯಲಾಗಿದೆ. ಕಾಮಗಾರಿ ತ್ವರಿತಗರಿಯಲ್ಲಿ ಮುಗಿಸಲು ನೈಸ್ ರಸ್ತೆಯೇ ದೊಡ್ಡ ಅಡ್ಡಿ. ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲು ಕೆಲ ಊರುಗಳಿಗೆ ನೈಸ್ ರಸ್ತೆ ದಾಟಿಕೊಂಡು ಹೋಗಬೇಕು. ಬಿಡಿಎ ಅಭಿವೃದ್ಧಿಪಡಿಸಿರುವ ಬಡಾವಣೆಗಳು ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ಇವುಗಳನ್ನು ಬಿಬಿಎಂಪಿಗೆ ಹಸ್ತಾಂತರ ಮಾಡದ ಕಾರಣ ಸಮಸ್ಯೆ ಸರಿಪಡಿಸಲು ಆಗುತ್ತಿಲ್ಲ. ನೈಸ್ ರಸ್ತೆ ದಾಟಿಕೊಂಡು ಹೋಗುವರು ಬೀದಿ ದೀಪ ಇಲ್ಲದ ಕಾರಣ ರಾತ್ರಿ ವೇಳೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೆಮ್ಮಿಗೆಪುರದ ರಾಮಕೃಷ್ಣ ಹೇಳುತ್ತಾರೆ.

ಪಾಲಿಕೆ ಸದಸ್ಯರು ಏನಂತಾರೆ?

ಕಾಮಗಾರಿ ಪೂರ್ಣಗೊಂಡರೆ ಸಮಸ್ಯೆಗೆ ಪರಿಹಾರ
ಬಿಡಿಎ ನಿರ್ಮಾಣ ಮಾಡಿದ ಕೆರೆಗಳಿಗೆ ಜಲಮಂಡಳಿಯವರು ಒಳಚರಂಡಿ ನೀರು ಹರಿಸುತ್ತಿದ್ದಾರೆ. ಇದರಿಂದ ಸಮಸ್ಯೆ ಉಂಟಾಗುತ್ತಿದೆ. ಉಲ್ಲಾಳು ವ್ಯಾಪ್ತಿಯ ನಾಲ್ಕು ಬಡಾವಣೆಗಳಲ್ಲಿ ಬಿಬಿಎಂಪಿಯಿಂದ 110 ಹಳ್ಳಿಗಳ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಂಡರೆ ರಸ್ತೆ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಬಡಾವಣೆಗಳೂ ಅಂದವಾಗಿ ಕಾಣಲಿವೆ.
–ಶಾರದಾ,ಉಲ್ಲಾಳು ವಾರ್ಡ್ ಸದಸ್ಯೆ

*

ವಾರ್ಡ್‌ನಲ್ಲಿ ಕಸ ರಾಶಿ ಇಲ್ಲ
ಪಕ್ಕದ ವಾರ್ಡ್‌ಗೆ ಹೋಲಿಸಿದರೆ ಹೆರೋಹಳ್ಳಿ ವಾರ್ಡ್‌ನಲ್ಲಿ 110 ಹಳ್ಳಿ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ. ಕೆಲ ಬಡಾವಣೆಗಳಲ್ಲಿ ಇನ್ನು ಕಾಮಗಾರಿ ನಡೆಯುತ್ತಿರುವ ಕಾರಣ ತೊಂದರೆ ಇದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಡಾವಣೆಗಳ ಜನರು ಕಸ ತಂದು ನಮ್ಮ ವಾರ್ಡ್‌ನಲ್ಲಿ ಬಿಸಾಡುತ್ತಿದ್ದಾರೆ. ಆದರೂ ಎಲ್ಲಿಯೂ ಬ್ಲಾಕ್ ಸ್ಪಾಟ್ ಇಲ್ಲದಂತೆ ನೋಡಿಕೊಂಡಿದ್ದೇನೆ
–ರಾಜಣ್ಣ,ಹೆರೋಹಳ್ಳಿ ವಾರ್ಡ್ ಸದಸ್ಯ

*

ಶೀಘ್ರವೇ ಕೆರೆ ಶುದ್ಧೀಕರಣ
ಗಾಂಧಿನಗರ ಕೆರೆಗೆ ರಾಜಕಾಲುವೆ ಮೂಲಕ ಒಳಚರಂಡಿ ನೀರು ಸೇರುತ್ತಿದೆ. ಅದನ್ನು ತಪ್ಪಿಸಲು ₹2.48 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಟೆಂಡರ್ ಹಂತದಲ್ಲಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಅದನ್ನು ಬಿಟ್ಟರೆ ವಾರ್ಡ್‌ನಲ್ಲಿ ದೊಡ್ಡ ಸಮಸ್ಯೆಗಳಿಲ್ಲ. ಬಾಕಿರುವ ಮನೆಗಳಿಗೆ ಕಾವೇರಿ ನೀರಿನ ಸಂಪರ್ಕವನ್ನು ಶೀಘ್ರವೇ ಕೊಡಿಸಲಾಗುವುದು
–ವಿ.ವಿ. ಸತ್ಯನಾರಾಯಣ,ಕೆಂಗೇರಿ ಸದಸ್ಯ

*

ಸಮಸ್ಯೆಗಳಿಗೆ ಶೀಘ್ರ ಪರಿಹಾರ
110 ಹಳ್ಳಿ ಯೋಜನೆಯಡಿ 10 ಹಳ್ಳಿಗಳ ಅಭಿವೃದ್ಧಿ ನಮ್ಮ ವಾರ್ಡ್‌ನಲ್ಲೇ ಆಗುತ್ತಿದೆ. ಇಷ್ಟು ಕಾಮಗಾರಿ ಪೂರ್ಣಗೊಳ್ಳಲು ಸರ್ಕಾರದಿಂದ ಸಾಕಷ್ಟು ಅನುದಾನ ಬೇಕು. ಈ ರೀತಿಯ ಕಾರಣಗಳಿಂದಾಗಿಯೇ ಶಾಸಕ ಎಸ್.ಟಿ. ಸೋಮಶೇಖರ್ ಅವರು ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಮುಂದೆ ಸಮಸ್ಯೆಗಳು ಸರಿಯಾಗಲಿವೆ
ಆರ್ಯ ಶ್ರೀನಿವಾಸ್,ಹೆಮ್ಮಿಗೆಪುರ ಸದಸ್ಯ


ಜನರು ಏನಂತಾರೆ?

ದೂಳು ಕುಡಿಯುವುದು ತಪ್ಪಿಲ್ಲ
ದೊಡ್ಡಬಿದರಕಲ್ಲು ವಾರ್ಡ್‌ನಲ್ಲಿ ವಾಸ ಮಾಡುವುದೇ ಕಷ್ಟವಾಗಿದೆ. ಒಂದೇ ಒಂದು ರಸ್ತೆಯೂ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಮೂಗಿಗೆ ಬಟ್ಟೆ ಕಟ್ಟಿಕೊಂಡರೂ ದೂಳು ಕುಡಿಯುವುದು ತಪ್ಪುತ್ತಿಲ್ಲ. ಇನ್ನೆಷ್ಟು ದಿನಗಳ ಕಾಲ ಈ ಸಮಸ್ಯೆಯನ್ನು ಎದುರಿಸಬೇಕೋ ಗೊತ್ತಿಲ್ಲ.
–ಆನಂದ್,ದೊಡ್ಡಬಿದರಕಲ್ಲು

*

ಬೇಸಿಗೆ ಬಂದರೆ ನೀರಿಗೆ ಬರ
ಬೇಸಿಗೆ ಬಂದರೆ ನೀರಿನ ಸಮಸ್ಯೆ ತಲೆದೋರುತ್ತದೆ. ಜನವರಿಯ ನಂತರ ಹಣ ಕೊಟ್ಟು ನೀರು ಖರೀದಿಸಬೇಕು. ಕಾವೇರಿ ನೀರಿನ ಸಂಪರ್ಕ ಕಲ್ಪಿಸುವುದಾಗಿ ಎರಡು ವರ್ಷಗಳಿಂದ ರಾಜಕಾರಣಿಗಳು, ಬಿಬಿಎಂಪಿ ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಏನೂ ಪ್ರಯೋಜನವಾಗಿಲ್ಲ
–ಪುರುಷೋತ್ತಮ,ಚಿಕ್ಕಬಿದರಕಲ್ಲು

*

ಕೆರೆಗೆ ಬಾರದ ಮಳೆ ನೀರು
ಉಲ್ಲಾಳು ಬಡಾವಣೆಯಲ್ಲಿ ಮೂಲಸೌಕರ್ಯ ಸಮಸ್ಯೆ ಅಷ್ಟಾಗಿಲ್ಲ. ಕೆರೆಗಳಿಗೆ ಮಳೆ ನೀರು ಕೆರೆ ಸೇರುತ್ತಿಲ್ಲ,ಶೌಚನೀರು ಕೆರೆಗೆ ಬರುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕು
–ವಸಂತಕುಮಾರಿ,ಉಲ್ಲಾಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT