ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟ್‌ಟಾಪಿಂಗ್‌ ಹೆಸರಲ್ಲಿ ದುಂದುವೆಚ್ಚ: ಆಕ್ಷೇಪ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ₹35.50 ಕೋಟಿ ವೆಚ್ಚದ ಕಾಮಗಾರಿ
Last Updated 29 ನವೆಂಬರ್ 2021, 20:40 IST
ಅಕ್ಷರ ಗಾತ್ರ

ಬೆಂಗಳೂರು: ವೈಟ್‌ ಟಾಪಿಂಗ್ ಎರಡನೇ ಹಂತದ ಯೋಜನೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ 1.03 ಕಿಲೋ ಮೀಟರ್‌ ಉದ್ದದ ರಸ್ತೆಗೆ ಮರು ಟೆಂಡರ್ ಪ್ರಕ್ರಿಯೆಯನ್ನೇ ನಡೆಸದೆ ₹35.50 ವೆಚ್ಚ ಮಾಡಲು ಬಿಬಿಎಂಪಿ ಮುಂದಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಮೈಸೂರು ರಸ್ತೆಯಿಂದ ಹಾಸ್ಟೆಲ್ ಜಂಕ್ಷನ್‌ ತನಕ (1,035 ಮೀಟರ್‌) 6 ಪಥದ ರಸ್ತೆ, ಎರಡೂ ಬದಿಯಲ್ಲಿ ಆರ್‌ಸಿಸಿ ಬಾಕ್ಸ್ ಡಕ್ಟ್, ಸೈಕಲ್ ಪಥ, ಪಾದಚಾರಿ ಮಾರ್ಗ, 900 ಮಿಲಿಮೀಟರ್ ವ್ಯಾಸದ ಮಳೆ ನೀರಿನ ಚರಂಡಿ, ರಸ್ತೆ ಪೀಠೋಪಕರಣ, ಸೂಚನಾ ಫಲಕ ಅಳವಡಿಕೆ, ಎಲ್‌ಇಡಿ ಬೀದಿ ದೀಪ ಅಳವಡಿಕೆ, ಪಾದಚಾರಿ ಮಾರ್ಗದಲ್ಲಿ ಬೊಲ್ಲಾರ್ಡ್‌ ಅಳವಡಿಕೆ ಒಳಗೊಂಡಿದೆ.

ಮೈಸೂರು ರಸ್ತೆ ಜಂಕ್ಷನ್‌ ಬಳಿ ರೈಲ್ವೆ ಸೇತುವೆ ವಿಸ್ತರಿಸಲು ಅನುವಾಗುವಂತೆ ಮತ್ತೊಂದು ಬಾಕ್ಸ್ ಅಳವಡಿಸಲು ಅಂದಾಜು ಪಟ್ಟಿಯಲ್ಲಿ ಇಡುಗಂಟು ಮೊತ್ತ ಮೀಸಲಿಡಲಾಗುತ್ತಿದೆ ಎಂದು ಅಂದಾಜು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಎರಡನೇ ಹಂತದ ಪ್ಯಾಕೇಜ್–1ರಲ್ಲಿನ ಉಳಿತಾಯ ಮೊತ್ತ ಆಗಿರುವುದರಿಂದ ಟೆಂಡರ್ ಪ್ರಕ್ರಿಯೆ ನಡೆಸದೆ ಪ್ಯಾಕೇಜ್‌ನ ಮೂಲ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲು ಅವಕಾಶ ಇದೆ ಎಂಬುದು ಸರ್ಕಾರದ ವಾದ.

ಟೆಂಡರ್ ಪ್ರಕ್ರಿಯೆ ನಡೆಸದೆ ಯಾವುದೇ ಕಾಮಗಾರಿ ನಿರ್ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯಲ್ಲಿ ಅವಕಾಶ ಇಲ್ಲ ಎಂಬುದು ತಜ್ಞರ ಅಭಿಪ್ರಾಯ.

ಕನಿಷ್ಠ ₹12 ಕೋಟಿ ಲಂಚಕ್ಕೆ ಬೇಕಲ್ಲವೇ?

1 ಕಿಲೋ ಮೀಟರ್‌ಗೆ ₹35.50 ಕೋಟಿ ಖರ್ಚು ಮಾಡುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಗುತ್ತಿಗೆದಾರರ ಸಂಘವೇ ಪ್ರಧಾನಮಂತ್ರಿಗೆ ದೂರು ನೀಡಿರುವಂತೆ ಶೇ 40ರಷ್ಟು ಅಂದರೆ ಕನಿಷ್ಠ ₹12 ಕೋಟಿಯಾದರೂ ಲಂಚಕ್ಕೆ ಹಂಚಿಕೆಯಾಗಬೇಕಿದೆ. ಗುತ್ತಿಗೆದಾರರ ಸಂಘವೇ ದೂರು ನೀಡಿರುವುದರಿಂದ ಮೇಲ್ನೋಟಕ್ಕೆ ಸುಳ್ಳು ಎನ್ನಲಾಗದು. ಈ ರಾಜ್ಯ ಯಾವ ರೀತಿಯಲ್ಲೂ ಉದ್ಧಾರ ಸಾಧ್ಯವಿಲ್ಲ. ಭ್ರಷ್ಟಾಚಾರ ಕೆಲವೇ ಜನರಿಗೆ ಸೀಮಿತ ಅಲ್ಲ. ಇದಕ್ಕೆ ಮೂಲ ಕಾರಣ ವ್ಯಕ್ತಿಗಳಲ್ಲ, ಸಮಾಜ. ಶ್ರೀಮಂತಿಕೆ ಮತ್ತು ಅಧಿಕಾರವನ್ನು ಸಮಾಜ ಪೂಜಿಸುತ್ತಿದೆ. ಆದ್ದರಿಂದಾಗಿ, ಸಾಮಾಜಿಕ ಭಯ ಇಲ್ಲವಾಗಿದೆ. ಈ ರೀತಿಯ ವ್ಯಕ್ತಿಗಳನ್ನು ಹಿಂದೆ ಬಹಿಷ್ಕರಿಸಲಾಗುತ್ತಿತ್ತು. ಭ್ರಷ್ಟಾಚಾರಿಗಳು, ಅತ್ಯಾಚಾರಿಗಳನ್ನು ಸಮಾಜ ದೂರ ಇಡುತ್ತಿತ್ತು. ಆದ್ದರಿಂದ ಜನರಿಗೆ ಹೆದರಿಕೆ ಇತ್ತು. ಈಗ ಅದು ಇಲ್ಲವಾಗಿದೆ. ಇದೆಲ್ಲರದ ಪರಿಣಾಮವಾಗಿ ಹೊಸದಾಗಿ ನಿರ್ಮಾಣವಾದ ರಸ್ತೆಗಳು ಒಂದೇ ಮಳೆಗೆ ಗುಂಡಿ ಬೀಳುತ್ತಿವೆ.

–ಎನ್‌.ಸಂತೋಷ್ ಹೆಗ್ಡೆ, ನಿವೃತ್ತ ನ್ಯಾಯಮೂರ್ತಿ

‘ವೈಟ್ ಕಾಲರ್ ಕ್ರೈಮ್’

ವೈಟ್‌ ಟಾಪಿಂಗ್ ಎನ್ನುವುದು ದೊಡ್ಡ ಮೋಸದ, ಭ್ರಷ್ಟಾಚಾರದ ರಸ್ತೆ ನಿರ್ಮಾಣ ಕಾರ್ಯಕ್ರಮ. ಪಕ್ಕಾ ವೈಟ್ ಕಾಲರ್ ಕ್ರೈಮ್.

ಟೆಂಡರ್‌ ಶೂರ್ ಹೆಸರಿನಲ್ಲಿ ಆರಂಭವಾದಾಗಿನಿಂದಲೂ ‘ಟೆಂಡರ್‌ ಲೆಸ್’ ಕಾಮಗಾರಿ‌ಯೇ. ರಾಜ್ಯದ ಮೂರೂ ಭ್ರಷ್ಟ ಜೆಸಿಬಿ (ಜೆಡಿಎಸ್‌, ಕಾಂಗ್ರೆಸ್, ಬಿಜೆಪಿ) ಪಕ್ಷಗಳು ತಾವು ಅಧಿಕಾರದಲ್ಲಿ ಇಲ್ಲದಿರುವಾಗ ಈ ಯೋಜನೆಯನ್ನು ವಿರೋಧಿಸಿ, ಅಧಿಕಾರಕ್ಕೆ ಬಂದಾಗ ಕನಿಷ್ಠ ಸಂಕೋಚವೂ ಇಲ್ಲದೆ ಜನರ ತೆರಿಗೆ ಹಣ ಲೂಟಿ ಮಾಡುವ ಕೆಟ್ಟ ದಂಧೆಯಲ್ಲಿ ಮುಳುಗಿವೆ. ಈಗಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಹಿಂದಿನ ಎಲ್ಲ ಸರ್ಕಾರಗಳನ್ನು ಮೀರಿಸುತ್ತಿದೆ. ಟೆಂಡರ್ ರಹಿತ ವೈಟ್ ಟಾಪಿಂಗ್ ಕಾಮಗಾರಿಯೇ ಅದಕ್ಕೆ ಜ್ವಲಂತ ಉದಾಹರಣೆ.

–ರವಿ ಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ

‘ಒಂದು ಕಿ.ಮೀಗೆ ₹35 ಕೋಟಿ ಏಕೆ’

ಉಳಿತಾಯದ ಮೊತ್ತವಾದರೂ ಮರು ಟೆಂಡರ್ ಕರೆದೇ ಗುತ್ತಿಗೆ ನಿಗದಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಕೆಟಿಪಿಪಿ ಕಾಯ್ದೆಯ ಉಲ್ಲಂಘನೆ ಆಗಲಿದೆ. ಕಾಂಗ್ರೆಸ್ ಅವಧಿಯಲ್ಲಿ ಒಂದು ಕಿಲೋ ಮೀಟರ್‌ಗೆ ₹12 ಕೋಟಿ ಖರ್ಚು ಮಾಡಲಾಗಿತ್ತು. ಅದನ್ನೇ ಭಾರಿ ಅಕ್ರಮ ನಡೆದಿದೆ ಎಂದು ಬಿಜೆಪಿ ಆರೋಪಿಸಿತ್ತು. ಸ್ಮಾರ್ಟ್‌ಸಿಟಿ ಯೋಜನೆಯಡಿ ಒಂದು ಕಿಲೋ ಮೀಟರ್‌ಗೆ ₹16 ಕೋಟಿ ಖರ್ಚು ಮಾಡಲಾಗುತ್ತಿದೆ. ಜ್ಞಾನಭಾರತಿ ಆವರಣಕ್ಕೆ ₹35.50 ಕೋಟಿ ಖರ್ಚು ಮಾಡಲು ಹೊರಟಿರುವುದು ಏಕೆ. ಶೇ 40ರಷ್ಟು ಲಂಚ ಕೊಡಬೇಕಾಗಿದೆ ಎಂದು ಗುತ್ತಿಗೆದಾರರ ಸಂಘವೇ ಆರೋಪಿಸಿದೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ₹35.50 ಕೋಟಿ ಅನುಮೋದನೆ ಪಡೆದಿರುವ ಬಗ್ಗೆಯೇ ತನಿಖೆ ಮಾಡಿಸಲಿ.

–ಅಬ್ದುಲ್ ವಾಜೀದ್‌, ಕಾಂಗ್ರೆಸ್ ಮುಖಂಡ‌

‘ತಜ್ಞರಿಂದ ಪರಿಶೀಲನೆ ಆಗಲಿ’

ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಒಂದು ಕಿಲೋ ಮೀಟರ್‌ ವೈಟ್‌ ಟಾಪಿಂಗ್ ಕಾಮಗಾರಿ ಮೊತ್ತ ₹12 ಕೋಟಿ ದಾಟಿರಲಿಲ್ಲ. ಅದನ್ನೇ ದುಬಾರಿ ಎಂದು ಬಿಜೆಪಿ ಆರೋಪಿಸಿತ್ತು. ಈಗ ₹35.50 ಕೋಟಿ ಖರ್ಚು ಮಾಡು ತ್ತಿರುವುದಕ್ಕೆ ಏಕೆ. ಈ ಬಗ್ಗೆ ತಾಂತ್ರಿಕ ತಜ್ಞರಿಂದ ಪರಿಶೀಲನೆ ಮಾಡಿಸಬೇಕು.

–ರಾಮಲಿಂಗಾರೆಡ್ಡಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT