ಗುರುವಾರ , ಜನವರಿ 23, 2020
19 °C
ಆದೇಶ ಪಾಲಿಸದ ಬಿಬಿಎಂಪಿ

ವೈಟ್‌ಟಾಪಿಂಗ್‌: ಟೆಂಡರ್‌ ಷರತ್ತು ವಿಧಿಸುವಾಗ ಕೆಟಿಪಿಪಿ ಕಾಯ್ದೆ ನಿಯಮ ಉಲ್ಲಂಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯಡಿಯೂರು ವಾರ್ಡ್‌ನ ಪಟಾಲಮ್ಮ ರಸ್ತೆ ಹಾಗೂ ನ್ಯಾಷನಲ್‌ ಕೋ–ಆಪರೇಟಿವ್‌ ರಸ್ತೆಗಳ ವೈಟ್‌ ಟಾಪಿಂಗ್‌ಗೆ ಟೆಂಡರ್‌ ಕರೆದಿರುವ ಬಿಬಿಎಂಪಿ, ಸರ್ಕಾರದ ಆದೇಶವನ್ನೇ ಉಲ್ಲಂಘಿಸಿ ಕಾಮಗಾರಿಯ ಪ್ಯಾಕೇಜ್‌ ನಿಗದಿಪಡಿಸಿದೆ.

ಟೆಂಡರ್‌ ಷರತ್ತುಗಳನ್ನು ನಿಗದಿಪಡಿಸುವಾಗಲೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಅಂಶಗಳನ್ನು ಗಾಳಿಗೆ ತೂರಿದೆ.

ಪಟಾಲಮ್ಮ ರಸ್ತೆಯನ್ನು ಆರ್ಮುಗಂ ವೃತ್ತದಿಂದ ಸೌತ್‌ ಎಂಡ್ ವೃತ್ತದವರೆಗೆ ಮತ್ತು ಅಲ್ಲಿಂದ 9ನೇ ಮುಖ್ಯರಸ್ತೆಯ 22ನೇ ಅಡ್ಡ ರಸ್ತೆಯ ಜಂಕ್ಷನ್‌ವರೆಗೆ ₹8.72 ಕೋಟಿ ವೆಚ್ಚದಲ್ಲಿ ಹಾಗೂ ನ್ಯಾಷನಲ್‌ ಕೋ ಆಪರೇಟಿವ್‌ ರಸ್ತೆಯನ್ನು 23ನೇ ಅಡ್ಡರಸ್ತೆಯಿಂದ ಜಯನಗರ ನಾಲ್ಕನೇ ಮುಖ್ಯರಸ್ತೆಯ 36ನೇ ಅಡ್ಡರಸ್ತೆವರೆಗೆ ₹8.83 ಕೋಟಿ ವೆಚ್ಚದಲ್ಲಿ ವೈಟ್‌ಟಾಪಿಂಗ್‌ ಮಾಡಲಾಗುತ್ತಿದೆ.

ಈ ಕಾಮಗಾರಿಗಳನ್ನು ಮುಖ್ಯಮಂತ್ರಿ ನವ ನಗರೋತ್ಥಾನ ಯೋಜನೆ ಅಡಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಕಾಮಗಾರಿಗಳಿಗೆ ಡಿ. 6ರಂದು ಅಲ್ಪಾವಧಿ ಟೆಂಡರ್‌ ಕರೆದಿರುವ ಬಿಬಿಎಂಪಿಯು ಇ–ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಲು ಸೋಮವಾರ
ದವರೆಗೆ (ಡಿ. 23) ಅವಕಾಶ ನೀಡಿತ್ತು.

ನಗರಾಭಿವೃದ್ಧಿ ಇಲಾಖೆ ಸೆ.20ರಂದು ಹೊರಡಿಸಿದ್ದ ಆದೇಶದ ಪ್ರಕಾರ 2018–19ನೇ ಸಾಲಿನ ಮುಖ್ಯಮಂತ್ರಿ ನವ ನಗರೋತ್ಥಾನ ಯೋಜನೆಯ ಯಾವುದೇ ಕಾಮಗಾರಿಗಳ ಪ್ಯಾಕೇಜ್‌ಗಳ ಅಂದಾಜು ಮೊತ್ತವು ₹10 ಕೋಟಿಗಿಂತ ಕಡಿಮೆ ಇರಬಾರದು. ತುಂಡು ಗುತ್ತಿಗೆ ನೀಡುವುದನ್ನು ತಪ್ಪಿಸುವ ಸಲುವಾಗಿ ಸರ್ಕಾರ ಈ ಕಟ್ಟುನಿಟ್ಟಿನ ಆದೇಶ ಮಾಡಿತ್ತು. ಆದರೆ, ಬಿಬಿಎಂಪಿಯು ವೈಟ್‌ಟಾಪಿಂಗ್‌ ಕಾಮಗಾರಿಗೆ ಟೆಂಡರ್‌ ಕರೆದಿರುವ ಈ ಎರಡು ರಸ್ತೆಗಳು ಒಂದೇ ವಾರ್ಡ್‌ನಲ್ಲಿ ಬರುತ್ತವೆ. ಹಾಗಾಗಿ ಎರಡೂ ರಸ್ತೆಗಳಿಗೂ ₹17.55 ಕೋಟಿ ವೆಚ್ಚದ ಒಂದೇ ಪ್ಯಾಕೇಜ್‌ ರೂಪಿಸಿ ಟೆಂಡರ್‌ ಕರೆಯುವುದಕ್ಕೆ ಅವಕಾಶ ಇತ್ತು. ಆದರೆ, ಬಿಬಿಎಂಪಿಯು ಕಾಮಗಾರಿಗಳನ್ನು ₹10 ಕೋಟಿಗಿಂತ ಕಡಿಮೆ ವೆಚ್ಚದ ಎರಡು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿದೆ.

ಕೆಟಿಪಿಪಿ ಕಾಯ್ದೆ ಉಲ್ಲಂಘನೆ: ಕೆಟಿಪಿಪಿ ಕಾಯ್ದೆಯ ಕೆಡಬ್ಲ್ಯು–4 ಟೆಂಡರ್‌ ದಾಖಲೆಗಳ ಪ್ರಕಾರ ಯಾವುದೇ ಕಾಮಗಾರಿ ನಿರ್ವಹಿಸಲು ಅಗತ್ಯ ಇರುವ ಉಪಕರಣಗಳಲ್ಲಿ ಶೇ 50 ರಷ್ಟು ಉಪಕರಣಗಳನ್ನು ಗುತ್ತಿಗೆದಾರರು ಸ್ವತಃ ಹೊಂದಿರಬೇಕು. ಉಳಿದ ಶೇ 50 ಉಪಕರಣ ಬಾಡಿಗೆಗೆ ಅಥವಾ ಭೋಗ್ಯಕ್ಕೆ ಪಡೆಯಲು ಅವಕಾಶ ಇದೆ. ಕಾಮಗಾರಿ ವಿಳಂಬ ತಪ್ಪಿಸಲು ಹಾಗೂ ಗುಣಮಟ್ಟ ಕಾಪಾಡಲು ಈ ನಿಯಮ ಪಾಲನೆ ಅವಶ್ಯ. ಈ ರಸ್ತೆಗಳ ವೈಟ್‌ಟಾಪಿಂಗ್‌ಗೆ ಒಂದು ಕಾಂಕ್ರೀಟ್‌ ಪೇವರ್ ಯಂತ್ರ ಹಾಗೂ ಕಾಂಕ್ರೀಟ್‌ ಪೇವ್‌ಮೆಂಟ್‌ ಗ್ರೂವ್‌ ಕಟ್ಟಿಂಗ್‌ ಮಾಡುವ ಎರಡು ಯಂತ್ರಗಳನ್ನು ಬಳಸುವ ಅಗತ್ಯವಿದೆ. ಬಿಬಿಎಂಪಿ ವಿಧಿಸಿರುವ ಟೆಂಡರ್‌ ಷರತ್ತುಗಳ ಪ್ರಕಾರ ಅಷ್ಟೂ ಯಂತ್ರಗಳನ್ನು ಗುತ್ತಿಗೆದಾರರು ಬಾಡಿಗೆಗೆ ಪಡೆಯಬಹುದಾಗಿದೆ. 

ವೈಟ್‌ಟಾಪಿಂಗ್‌ ಕಾಮಗಾರಿ ಗುತ್ತಿಗೆ ಪಡೆಯಬೇಕಾದರೆ ಗುತ್ತಿಗೆದಾರರು ಅಂತಹದ್ದೇ ಕಾಮಗಾರಿ ನಿರ್ವಹಿಸಿದ ಅನುಭವ ಹೊಂದಿರಬೇಕು. ಆದರೆ, ಬಿಬಿಎಂಪಿ ವಿಧಿಸಿರುವ ಷರತ್ತಿನ ಪ್ರಕಾರ ಡಾಂಬಾರ್ ರಸ್ತೆ ನಿರ್ಮಿಸಿ ಅನುಭವ ಹೊಂದಿರುವ ಗುತ್ತಿಗೆದಾರರು ಕೂಡಾ ಟೆಂಡರ್‌ನಲ್ಲಿ ಭಾಗವಹಿಸಬಹುದಾಗಿದೆ.

‘ಕಾಮಗಾರಿಯ ಗುತ್ತಿಗೆ ನೀಡುವಾಗ ತಮಗೆ ಬೇಕಾದವರಿಗೆ ಅನುಕೂಲ ಕಲ್ಪಿಸುವ ಸಲುವಾಗಿಯೇ ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್‌ (ಯೋಜನೆ ದಕ್ಷಿಣ) ಅವರು ಷರತ್ತು ವಿಧಿಸುವಾಗ ಕೆಟಿಪಿಪಿ ಕಾಯ್ದೆಯ ಅಂಶಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಗುತ್ತಿಗೆದಾರರೊಬ್ಬರು ಆರೋಪಿಸಿದರು.

ಹನ್ನೊಂದು ತಿಂಗಳು ಬೇಕೇ?

ಯಡಿಯೂರು ವಾರ್ಡ್‌ನ ಎರಡೂ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಲು 11 ತಿಂಗಳು ಕಾಲಾವಕಾಶ ನೀಡಲಾಗಿದೆ. ಪಟಾಲಮ್ಮ ರಸ್ತೆಯಲ್ಲಿ 1.2 ಕಿ.ಮೀ ಉದ್ದ ಹಾಗೂ ನ್ಯಾಷನಲ್‌ ಕೋ–ಆಪರೇಟಿವ್‌ ರಸ್ತೆಯಲ್ಲಿ 1.10 ಕಿ.ಮೀ ಉದ್ದಕ್ಕೆ ವೈಟ್‌ಟಾಪಿಂಗ್‌ ಮಾಡಲು 11 ತಿಂಗಳು ಕಾಲಾವಕಾಶ ನೀಡುವ ಅಗತ್ಯವಾದರೂ ಏನು ಎಂಬುದು ಪ್ರಶ್ನೆ.

‘ಸ್ವಂತ ಪೇವಿಂಗ್‌ ಯಂತ್ರ ಹೊಂದಿರುವ ಗುತ್ತಿಗೆದಾರರು ದಿನಕ್ಕೆ 200 ಮೀ. ಉದ್ದದ ರಸ್ತೆಯ ವೈಟ್‌ಟಾಪಿಂಗ್‌ ನಡೆಸಬಹುದು. 1.2 ಕಿ.ಮೀ ಉದ್ದರ ರಸ್ತೆ ವೈಟ್‌ಟಾಪಿಂಗ್‌ ಕಾಮಗಾರಿಯನ್ನು ಪೂರ್ಣಗೊಳಿಸಲು ಹೆಚ್ಚೆಂದರೆ 3 ತಿಂಗಳು ಸಾಕು’ ಎಂದು ಗುತ್ತಿಗೆದಾರರೊಬ್ಬರು ತಿಳಿಸಿದರು.

‘11 ತಿಂಗಳು ಕಾಲಾವಕಾಶ ನೀಡಿರುವುದರ ಹಿಂದೆ ಬೇರೆಯೇ ಉದ್ದೇಶ ಇದೆ. ಯಾವುದೇ ಕಾಮಗಾರಿ ಪೂರ್ಣಗೊಳಿಸಲು 11 ತಿಂಗಳಿಗಿಂತೆ ಹೆಚ್ಚು ಸಮಯ ತಗುಲಿದರೆ ದರಪಟ್ಟಿಯ (ಎಸ್‌.ಆರ್‌.ರೇಟ್) ಪ್ರಕಾರ ಹೆಚ್ಚುವರಿ ದರವನ್ನು ಪಡೆಯಲು ಅವಕಾಶ ಇದೆ. ನಿಗದಿತ ಮೊತ್ತಕ್ಕಿಂತ ಹೆಚ್ಚು ದರವನ್ನು ಪಡೆಯಲು ಗುತ್ತಿಗೆದಾರರಿಗೆ ಅವಕಾಶ ಮಾಡಿಕೊಡುವ ಹುನ್ನಾರವಿದು’ ಎಂದು ಅವರು ದೂರಿದರು.

‘ಉಲ್ಲಂಘನೆಯಾದರೆ ಆಯುಕ್ತರೇ ಹೊಣೆ’

‘ಯಡಿಯೂರು ವಾರ್ಡ್‌ನ ವೈಟ್‌ಟಾಪಿಂಗ್‌ ಕಾಮಗಾರಿಗಳ ಟೆಂಡರ್‌ ವೇಳೆ ಕೆಟಿಪಿಪಿ ಷರತ್ತು ಉಲ್ಲಂಘನೆಯಾದರೆ ಅದಕ್ಕೆ ಪಾಲಿಕೆ ಆಯುಕ್ತರೇ ನೇರ ಹೊಣೆ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಎಚ್ಚರಿಸಿದರು.

‘ತಮಗೆ ಬೇಕಾದವರಿಗೆ ಕಾಮಗಾರಿ ಗುತ್ತಿಗೆ ನೀಡಲು ಟೆಂಡರ್ ಷರತ್ತುಗಳನ್ನು ಸಡಿಲಿಸುವುದರಲ್ಲಿ ಅರ್ಥವಿಲ್ಲ. ಹಾಗಿದ್ದರೆ ಕೆಟಿಪಿಪಿ ಕಾಯ್ದೆ ಏಕೆ ಬೇಕು’ ಎಂದು ಅವರು ಪ್ರಶ್ನಿಸಿದರು.

‘ಕೆಟಿಪಿಪಿ ಕಾಯ್ದೆಯ ಅಂಶಗಳನ್ನು ಪಾಲನೆ ಮಾಡದೆ ಟೆಂಡರ್‌ ನೀಡಿದರೆ ಸುಮ್ಮನಿರಲು ಸಾಧ್ಯವಿಲ್ಲ. ಈ ಬಗ್ಗೆ ಕೌನ್ಸಿಲ್‌ ಸಭೆಯಲ್ಲಿ ಪ್ರಸ್ತಾಪಿಸುತ್ತೇವೆ. ಬಿಜೆಪಿ ಸರ್ಕಾರ ಬಂದ ಬಳಿಕ ಮಾಡಿರುವ ಷರತ್ತುಗಳನ್ನು ಅವರ ಪಕ್ಷದ ಆಡಳಿತವೇ ಇರುವ ಬಿಬಿಎಂಪಿ ಉಲ್ಲಂಘಿಸುತ್ತಿದೆ. ಇದಕ್ಕಿಂತ ವಿಪರ್ಯಾಸ ಬೇರೆ ಇಲ್ಲ’ ಎಂದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು