ಶನಿವಾರ, ಸೆಪ್ಟೆಂಬರ್ 18, 2021
23 °C
ಬಾಲಗಂಗಾಧರ ನಾಥ ಮೇಲ್ಸೇತುವೆಯ ಇಳಿಜಾರು ರಸ್ತೆ ಅಭಿವೃದ್ಧಿ

ಬೆಂಗಳೂರು: ಗಡುವಿಗೆ ಮುನ್ನವೇ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿಯು ಕೆ.ಆರ್‌.ಮಾರುಕಟ್ಟೆ ಬಳಿ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯ ಇಳಿಜಾರಿನಿಂದ ಎಸ್.ಜೆ.ಪಿ ರಸ್ತೆವರೆಗಿನ ವೈಟ್‌ ಟಾಪಿಂಗ್ ಮತ್ತು ಅಡ್ಡಮೋರಿ ಅಭಿವೃದ್ಧಿ ಕಾಮಗಾರಿಯನ್ನು ಗಡುವಿಗೆ ಮುನ್ನವೇ ಪೂರ್ಣಗೊಳಿಸಿದೆ.

ಕಾಮಗಾರಿ ಪೂರ್ಣಗೊಳಿಸಲು 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಬಿಬಿಎಂಪಿ 10 ದಿನಗಳೊಳಗೆ ಕಾಮಗಾರಿ ಮುಗಿಸಿ ಇಲ್ಲಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ.

ಮಳೆಯಾದ ಸಂದರ್ಭದಲ್ಲಿ ಈ ಮೇಲುಸೇತುವೆ ಇಳಿಜಾರಿನ ಬಳಿ ನೀರು ನಿಂತು ಸಮಸ್ಯೆ ಉಂಟಾಗುತ್ತಿತ್ತು. ಅದನ್ನು ನಿವಾರಿಸಲು ಇಲ್ಲಿನ ಮೇಲ್ಸೇತುವೆ ಇಳಿಜಾರಿಗೆ ವೈಟ್‌ಟಾಪಿಂಗ್ ನಡೆಸಲು ಮತ್ತು ಅಡ್ಡಮೋರಿಯನ್ನು ನಿರ್ಮಿಸಲು ಬಿಬಿಎಂಪಿ ನಿರ್ಧರಿಸಿತ್ತು. ಸಂಚಾರ ವಿಭಾಗದ ಪೊಲೀಸರು ಈ ಕಾಮಗಾರಿಯನ್ನು 15 ದಿನಗಳ ಒಳಗೆ ಪೂರ್ಣಗೊಳಿಸಬೇಕು ಎಂಬ ಷರತ್ತು ವಿಧಿಸಿ ಇಲ್ಲಿನ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲು ಅನುಮತಿ ನೀಡಿದ್ದರು. ಈ ಕಾಮಗಾರಿಯನ್ನು ಆ. 07ರಂದು ಪ್ರಾರಂಭಿಸಲಾಗಿತ್ತು.

ಪ್ರಥಮ ಹಂತದಲ್ಲಿ ಮೇಲ್ಸೇತುವೆ ಹತ್ತಿರದ ಅಡ್ಡಮೋರಿಯನ್ನು ಮಾತ್ರ ಅಭಿವೃದ್ಧಿ ಪಡಿಸಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರು. ಕಾಮಗಾರಿಯನ್ನೂ ನಡೆಸುವಾಗ ಎಸ್‌ಜೆಪಿ ರಸ್ತೆ ಜಂಕ್ಷನ್ ಹತ್ತಿರ ರಸ್ತೆಗೆ ಅಡ್ಡಲಾಗಿ ಮತ್ತೊಂದು ರಾಜಕಾಲುವೆ ಹಾದು ಹೋಗಿರುವುದು ಕಂಡು ಬಂದಿತ್ತು. ಅದನ್ನೂ ಅಭಿವೃದ್ಧಿಪಡಿಸಿಕೊಂಡು ವೈಟ್ ಟಾಪಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅನುವು ಮಾಡಿಕೊಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು