ಸೋಮವಾರ, ಆಗಸ್ಟ್ 2, 2021
28 °C

ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣಗಳು ದಿಢೀರ್‌ ಏರಲು ಕಾರಣವೇನು? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರಿನಲ್ಲಿ ಕೋವಿಡ್‍-19 ಸೋಂಕಿನ ಪ್ರಕರಣಗಳು ಏಕಾಏಕಿ ಹೆಚ್ಚುತ್ತಿದ್ದು, ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ. ಪ್ರಕರಣಗಳ ಏರುಗತಿಯ ಜೊತೆಗೆ ಸರ್ಕಾರದ ಕೆಲವು ಹೆಜ್ಜೆಗಳು ಕೂಡಾ ಸಮಸ್ಯೆಯನ್ನು ಹೆಚ್ಚಿಸಿದೆ. ಸರ್ಕಾರದ ಒಂದು ಮೂಲದ ಪ್ರಕಾರ, ಅಧಿಕಾರಿಗಳು, ಪರಿಣತರು ಜೂನ್‍ ಮೂರನೇ ವಾರದಲ್ಲಿಯೇ ಜೂನ್‍ 21ರ ನಂತರ ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ ಎಂದು ಎಚ್ಚರಿಸಿದ್ದರು. ಪರಿಣಾಮ ಇಂದು ಖಾಸಗಿ ಆಸ್ಪತ್ರೆಗಳಲ್ಲೂ ರೋಗಿಗಳಿಗೆ ಹಾಸಿಗೆ ವ್ಯವಸ್ಥೆ ಮಾಡಬೇಕಾಗಿದೆ. ಹೀಗೇ ಪ್ರಕರಣಗಳು ಏಕಾಏಕಿ ಹೆಚ್ಚಲು ಕಾರಣಗಳೇನು?

ಏಕಾಏಕಿ ಏರಿಕೆಗೆ ಕಾರಣಗಳೇನು?

ಒಂದು ವಾರದ ಹಿಂದೆ ಸರ್ಕಾರದ ಕೈಗೊಂಡ ನಿರ್ಧಾರಗಳ ಪರಿಣಾಮ ಈಗ ವ್ಯಕ್ತವಾಗುತ್ತಿದೆ. ಲಾಕ್‍ಡೌನ್‍ ನಿರ್ಬಂಧಗಳ ಸಡಿಲಿಕೆ ಹಾಗೂ ಆಂತರಿಕವಾಗಿ ಪ್ರಕರಣಗಳ ಕಣ್ಗಾವಲಿಗೆ ಇದ್ದ ಕ್ರಮಗಳನ್ನು ಉತ್ತಮಪಡಿಸದೇ ಇರುವುದು ಕಾರಣ. ರಾಜ್ಯ ತಜ್ಞರ ತಂಡದ ಸದಸ್ಯ ಡಾ. ಗಿರಿಧರ್ ಬಾಬು ಅವರು, `ಲಾಕ್‍ಡೌನ್‍ನಿಂದ ಮಾತ್ರವೇ ಸೋಂಕು ಹರಡುವಿಕೆಯನ್ನು ತಡೆಯಲಾಗದು. ಜೊತೆಗೆ ಸೋಂಕು ಹರಡದಂತೆ ಬಿಗಿ ಕಣ್ಗಾವಲು ಹಾಗೂ ಚಿಕಿತ್ಸಾ ಸೌಲಭ್ಯವನ್ನು ಇನ್ನಷ್ಟು ಬಲಪಡಿಸಬೇಕು. ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಜನರು ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವ ಕನಿಷ್ಠ ನಿಬಂಧನೆಗಳನ್ನು ಉಲ್ಲಂಘಿಸುತ್ತಿದ್ದಾರೆ' ಎಂದು ಹೇಳುತ್ತಾರೆ.

ಹಲವು ವಾರಗಳು ಲಾಕ್‍ಡೌನ್‍ ಇತ್ತು. ಸೋಂಕು ಪತ್ತೆ ಕಾರ್ಯ ಏಕೆ ಆಗಲಿಲ್ಲ?

ಮೊದಲಿಗೆ ಸರ್ಕಾರ ಮೊದಲು ಲಾಕ್‍ಢೌನ್‍ ಜಾರಿಗೊಳಿಸಿದಾಗ ರಾಜ್ಯದಲ್ಲಿ 100 ಪ್ರಕರಣಗಳಷ್ಟೇ ದಾಖಲಾಗಿದ್ದವು. ಲಾಕ್‍ಡೌನ್‍ನ 19 ದಿನಗಳ ನಂತರ ಸರ್ಕಾರ ಕೆಲವೊಂದು ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲಾಗುವುದು ಎಂದು ಪ್ರಕಟಿಸಿತು. ಇದಕ್ಕೆ ಪರಿಣತರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು 20 ದಿನಗಳ ನಂತರ ಮತ್ತೊಂದು ಪ್ರಮಾದ ನಡೆಯಿತು. ಅಂತರ ಜಿಲ್ಲಾ ಮತ್ತು ರಾಜ್ಯಗಳ ನಡುವೆ ಪ್ರಯಾಣ ಸೇವೆಗೆ ಅನುಮತಿ ನೀಡಲಾಯಿತು. ಇದು, ಸೋಂಕು ಹರಡಲು ಹೆಬ್ಬಾಗಿಲನ್ನೇ ತೆರೆದಂತಾಯಿತು. ಈ ಹಂತದಲ್ಲಿ ರಾಜ್ಯದಲ್ಲಿ ಕೇವಲ 615 ಪ್ರಕರಣಗಳು ಇದ್ದು, 28 ಜನರು ಸತ್ತಿದ್ದರು. ನಂತರದ ಒಂದು ತಿಂಗಳಲ್ಲಿ ಪ್ರಕರಣಗಳ ಸಂಖ್ಯೆ 4,064ಕ್ಕೆ ಏರಿದರೆ, ಮೃತರ ಸಂಖ್ಯೆ 59ಕ್ಕೆ ಏರಿತು.

ಬಿಬಿಎಂಪಿ ಹೊಸದಾಗಿ ರಾಂಡಮ್ ಪರೀಕ್ಷೆ ಚುರುಕುಗೊಳಿಸಿದ್ದೇ ಸಂಖ್ಯೆಯು ಹೆಚ್ಚು ಬೆಳಕಿಗೆ ಬರಲು ಕಾರಣವಾಯಿತೇ?

ಇಲ್ಲ. ಬಿಬಿಎಂಪಿಯು ಜೂನ್‍ 22ರಿಂದ ಆರಂಭವಾದಂತೆ ನಿತ್ಯ 7,500 ರಾಂಡಮ್‍ ಪರೀಕ್ಷೆ ನಡೆಸಲಾಗುವುದು ಎಂದು ಪ್ರಕಟಿಸಿತ್ತು. ಆದರೆ, ಜೂನ್‍ 22 ರಿಂದ 28ರವರೆಗೂ ಕೇವಲ 23,578 ಪರೀಕ್ಷೆಗಳನ್ನಷ್ಟೇ ನಡೆಸಿತು. (ಸರಾಸರಿ ನಿತ್ಯ 3,368 ಪ್ರಕರಣ). ಜೂನ್‍ 29ರಂದು 7,910 ತಪಾಸಣೆಗಳನ್ನು ನಡೆಸಿ ಪರಿಸ್ಥಿತಿಯನ್ನು ಉತ್ತಮಪಡಿಸಿತು. ಆದರೆ, ಜೂನ್‍ 30ರಂದು ಒಂದೂ ತಪಾಸಣೆ ಆಗಲಿಲ್ಲ. ಜುಲೈ 1ರಂದು 934 ಮತ್ತು ಜುಲೈ 2ರಂದು 4,370 ತಪಾಸಣೆಗಳನ್ನು ನಡೆಸಲಾಗಿದೆ.

ಡಾಟಾ ಸಂಗ್ರಹಣೆ ವ್ಯವಸ್ಥೆಯೂ ಕಾರಣವೇ?

ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲಕುಮಾರ್ ಅವರ ಪ್ರಕಾರ ಹೌದು. ಹೊಸ ಪ್ರಕರಣಗಳ ಅಂಕಿ ಅಂಶಗಳನ್ನು ದಾಖಲಿಸುವಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಆದ ಬದಲಾವಣೆಯು ತಾಂತ್ರಿಕ ಸಮಸ್ಯೆಗಳಿಗೂ ಕಾರಣವಾಯಿತು. ಐಸಿಎಂಆರ್ ತನ್ನ ಅಂಕಿ ಅಂಶಗಳನ್ನು ಸಂಜೆ 5ರಿಂದ ಮಾರನೇ ದಿನ ಸಂಜೆ 5ರವರೆಗಿನ ಅಂಕಿ ಅಂಶಗಳನ್ನು ದಾಖಲಿಸಲು ಆರಂಭಿಸಿತು. ಜೂನ್‍ 27ರಂದು ಈ ಹಂತದಲ್ಲಿ ಕೆಲ ತೊಂದರೆಯಾಯಿತು.ಐಸಿಎಂಆರ್ ನ ನೂತನ ನೀತಿಗೆ ಅನುಗುಣವಾಗಿ ಡಾಟಾಬೇಸ್ ಹೊಂದಿಸಲು ಬಿಬಿಎಂಪಿ ಒತ್ತು ನೀಡಿತು. ಈ ಹಂತದಲ್ಲಿ ಹಲವು ಕೋವಿಡ್‍ ಪಾಸಿಟಿವ್‍ ರೋಗಿಗಳು ಆಸ್ಪತ್ರೆಗೂ ದಾಖಲಾಗದಂತೆ ಹೊರಗುಳಿದರು ಎಂದು ಸರ್ಕಾರದ ಮೂಲಗಳು ಹೇಳುತ್ತವೆ.

ತಪಾಸಣಾ ಸೌಲಭ್ಯ ಹೇಗಿದೆ?

ಸಿಬ್ಬಂದಿಗೇ ಕೋವಿಡ್‍-19 ಇರುವುದು ದೃಢವಾದ  ಬಳಿಕ ನಿಮ್ಹಾನ್ಸ್ ಮತ್ತು ಬಿ.ಎಂ.ಸಿ.ಆರ್.ಐನಲ್ಲಿನ ಪ್ರಯೋಗಾಲಯಗಳನ್ನು ಮುಚ್ಚಲಾಗಿತ್ತು. ಈ ಬೆಳವಣಿಗೆಯಿಂದಾಗಿ ಗಂಟಲು ದ್ರವ ಪರೀಕ್ಷೆಗೆ ಹಿನ್ನಡೆಯಾಗಿದೆ. ಬಿ.ಎಂ.ಸಿ.ಆರ್.ಐ ಪ್ರಯೋಗಾಲಯವನ್ನು ನಂತರದ ದಿನಗಳಲ್ಲಿ ಪುನರಾರಂಭಿಸಲಾಯಿತು. ದೊಡ್ಡ ಸಂಖ್ಯೆಯಲ್ಲಿ ತಪಾಸಣೆ ಪುನರಾರಂಭವಾದ ಹಿಂದೆಯೇ ಹೆಚ್ಚಿನ ಸಂಖ್ಯೆಗಳಲ್ಲಿ ಪ್ರಕರಣಗಳೂ ಬೆಳಕಿಗೆ ಬರಲು ಆರಂಭಿಸಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು