ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗದರ್ಶನ ಕಾರ್ಯಾಗಾರ: ಸ್ಪರ್ಧಾ ಕೌಶಲ ಬೆಳೆಸಿಕೊಳ್ಳಲು ಸಲಹೆ

ಪಿಎಸ್‌ಐ, ಕಾನ್‌ಸ್ಟೆಬಲ್‌, ಟಿಇಟಿ
Last Updated 1 ಫೆಬ್ರುವರಿ 2021, 15:16 IST
ಅಕ್ಷರ ಗಾತ್ರ

ಬೀದರ್: ಪದವೀಧರ ಅಭ್ಯರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಸ್ಪರ್ಧಾ ಕೌಶಲ ಬೆಳೆಸಿಕೊಳ್ಳಬೇಕು ಎಂದು ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಶಿವಕುಮಾರ ಉಪ್ಪೆ ಸಲಹೆ ಮಾಡಿದರು.

ನಗರದ ಶ್ರೀ ಸಾಯಿ ಆದರ್ಶ ಶಾಲೆಯಲ್ಲಿ ಸ್ಪರ್ಧಾ ಸಂಕಲ್ಪ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಪೊಲೀಸ್ ಸಬ್ ಇನ್‍ಸ್ಪೆಕ್ಟರ್, ಪೊಲೀಸ್ ಕಾನ್‍ಸ್ಟೆಬಲ್ ಹಾಗೂ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕುರಿತ ಉಚಿತ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಕೇವಲ ಅರ್ಜಿ ಸಲ್ಲಿಸಿದರೆ ಸಾಲದು. ಅದಕ್ಕೆ ಪೂರಕವಾಗಿ ತಯಾರಿ ನಡೆಸಬೇಕು. ಸಂಬಂಧಿಸಿದ ಪಠ್ಯಕ್ರಮದ ಅಧ್ಯಯನಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಕಿವಿಮಾತು ಹೇಳಿದರು.

ಒಂದೇ ಬಾರಿಗೆ ಅನೇಕ ಹುದ್ದೆಗಳ ಪರೀಕ್ಷೆ ಬರೆಯುವುದರಿಂದ ಯಶ ಪಡೆಯಲು ಸಾಧ್ಯವಿಲ್ಲ. ಯಾವ ಪರೀಕ್ಷೆ ಎದುರಿಸಬೇಕು ಎನ್ನುವುದನ್ನು ಮುಂಚಿತವಾಗಿಯೇ ನಿರ್ಧರಿಸಬೇಕು. ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಾಗಾರ ಉದ್ಘಾಟಿಸಿದ ಕೊಳಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವಪ್ಪ ಅವರು, ನಿರ್ದಿಷ್ಟ ಗುರಿ, ಛಲದೊಂದಿಗೆ ಕಠಿಣ ಪರಿಶ್ರಮ ವಹಿಸಿದರೆ ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸಬಹುದು ಎಂದು ಹೇಳಿದರು.

ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ವಿಜಯಪುರ, ಧಾರವಾಡ ಮತ್ತಿತರ ಕಡೆ ಹೋಗಬೇಕಾದ ಸ್ಥಿತಿ ಇತ್ತು. ಸ್ಪರ್ಧಾ ಸಂಕಲ್ಪ ಅಕಾಡೆಮಿಯು ನುರಿತ, ಅನುಭವಿ ಉಪನ್ಯಾಸಕರು ಹಾಗೂ ವಿಷಯ ತಜ್ಞರೊಂದಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಜಿಲ್ಲೆಯ ಅಭ್ಯರ್ಥಿಗಳು ಅಕಾಡೆಮಿಯ ಪ್ರಯೋಜನ ಪಡೆಯಬೇಕು ಎಂದರು.

ಸ್ಪರ್ಧಾ ಸಂಕಲ್ಪ ಅಕಾಡೆಮಿಯ ನಿರ್ದೇಶಕ ನಾಗೇಶ ಸ್ವಾಮಿ ಮಾತನಾಡಿ, ಜಿಲ್ಲೆಯ ಪದವೀಧರ ಅಭ್ಯರ್ಥಿಗಳಿಗೆ ನೆರವಾಗಲು ಅಕಾಡೆಮಿ ಶುರು ಮಾಡಲಾಗಿದೆ. ಸದ್ಯ ಪೊಲೀಸ್ ಸಬ್ ಇನ್‍ಸ್ಪೆಕ್ಟರ್, ಪೊಲೀಸ್ ಕಾನ್‍ಸ್ಟೆಬಲ್, ಎಸ್‍ಡಿಎ, ಎಫ್‍ಡಿಎ ಹಾಗೂ ಶಿಕ್ಷಕರ ಅರ್ಹತಾ ಪರೀಕ್ಷೆ ತರಬೇತಿ ಕೊಡಲಾಗುತ್ತಿದೆ. ಬರುವ ದಿನಗಳಲ್ಲಿ ಸಿಇಟಿ ಹಾಗೂ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡುವ ಉದ್ದೇಶ ಇದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ಹಣಮಂತರಾವ್ ಪಾಟೀಲ (ಸಾಮಾನ್ಯ ಜ್ಞಾನ), ಸಂಜಯ ಮಾನೂರೆ (ಅರ್ಥಶಾಸ್ತ್ರ), ಮಲ್ಲಿಕಾರ್ಜುನ ಸಿಂಧಗೇರಾ (ಇತಿಹಾಸ), ಸುರೇಶ (ಮನೋವಿಜ್ಞಾನ), ರಾಮಣ್ಣ ಕುಂಬಾರ (ವಿಜ್ಞಾನ), ದಯಾನಂದ (ಬೌದ್ಧಿಕ ಸಾಮರ್ಥ್ಯ), ಬಶೀರ್ (ಹಿಂದಿ), ಅನಿಲ್ ಮಚಕೂರೆ (ರಾಜ್ಯಶಾಸ್ತ್ರ) ಹಾಗೂ ಅನಿಲ್ ಬೆಳಗಾವಿ (ಇಂಗ್ಲಿಷ್) ಉಪನ್ಯಾಸ ನೀಡಿದರು.

ಅಕಾಡೆಮಿಯ ನಿರ್ದೇಶಕ ಮನೋಜಕುಮಾರ ಬುಕ್ಕಾ ಉಪಸ್ಥಿತ ರಿದ್ದರು. ಪೂಜಾ ಸ್ವಾಗತಿಸಿದರು. ಮಹಾದೇವಿ ಬುಕ್ಕಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT