ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | 'ಎಲ್ಲರ ಒಟ್ಟಿಗೆ ಕರೆದೊಯ್ಯುವ ನಾಯಕ ಬೇಕು'

ಸಂಭ್ರಮದಿಂದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ; ಭಾವಚಿತ್ರದ ಮೆರವಣಿಗೆ
Published 22 ಜನವರಿ 2024, 7:53 IST
Last Updated 22 ಜನವರಿ 2024, 7:53 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ‌ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ನಗರದ ಪ್ರಮುಖ ಮಾರ್ಗಗಳ ಮೂಲಕ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದ ವರೆಗೆ ಮೆರವಣಿಗೆ ಜರುಗಿತು.

ಕಾಳಗಿ ಸರ್ಕಾರಿ ಪ್ರಥಮ ದರ್ಜೆ ‌ಕಾಲೇಜಿನ ಪ್ರಾಧ್ಯಾಪಕ ಬಿ.ಆರ್. ಅಣ್ಣಾಸಾಗರ ಮಾತನಾಡಿ, ಇಂದು ನಮಗೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಬಸವಣ್ಣನವರಂತಹ ನಾಯಕರು ಬೇಕಾಗಿದ್ದಾರೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಎಲ್ಲ ಸಮಾಜದ ಶರಣರಿದ್ದರು. ಅಂಬಿಗರ ಚೌಡಯ್ಯನವರ ಕಾಯಕ ನೋಡಿ ಅವರಿಗೆ ನಿಜಶರಣ ಎಂದು ಬಸವಣ್ಣನವರು ಕರೆದಿದ್ದರು. ಅಂದಿನಿಂದ ಆ ಹೆಸರು ಪ್ರಚಲಿತದಲ್ಲಿದೆ ಎಂದರು.

ಸಮಾಜ ಸುಧಾರಣೆಗೆ ಬುದ್ಧ, ಮಹಾವೀರ, ಬಸವಾದಿ ಶರಣರು, ಡಾ.ಬಿ.ಆರ್‌. ಅಂಬೇಡ್ಕರ್‌ ಶ್ರಮಿಸಿದರು. ಅಂಬಿಗರ ಚೌಡಯ್ಯನವರು 300 ವಚನಗಳನ್ನು ರಚಿಸಿದ್ದಾರೆ. ಜಾತಿ ವ್ಯವಸ್ಥೆ ಬಗ್ಗೆ ಅವರು ತೀಕ್ಷ್ಣವಾದ ವಚನಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್‌, ಚೌಡಯ್ಯನವರ ತತ್ವ ಮತ್ತು ‌ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದ ಸಮುದಾಯ ಭವನಕ್ಕೆ ಜಾಗವಿದೆ. ಆದರೆ, ಕಟ್ಟಡ ನಿರ್ಮಾಣಕ್ಕೆ ಅನುದಾನ ಇಲ್ಲ ಎಂದು ನನ್ನ ಗಮನಕ್ಕೆ ತಂದಿದ್ದೀರಿ. ಬರುವ ಬಜೆಟ್‌ನಲ್ಲಿ ಸಂಬಂಧಿಸಿದ ಸಚಿವರ ಗಮನಕ್ಕೆ ತಂದು ಅನುದಾನ ಬಿಡುಗಡೆಗೆ ಶ್ರಮಿಸುವೆ ಎಂದು ಭರವಸೆ ನೀಡಿದರು.

ಹಿಂದೆ ಈ ಸಮುದಾಯದವರು ಮಾಡುತ್ತಿದ್ದ ಕೆಲಸ ಇಂದಿನ ಮಕ್ಕಳು ಮಾಡಲು ಆಗುವುದಿಲ್ಲ. ತಂತ್ರಜ್ಞಾನದಿಂದ ಸಾಕಷ್ಟು ಬದಲಾವಣೆಗಳಾಗಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಯಾವುದೇ ಸಮಸ್ಯೆಗಳಿದ್ದರೆ ಗಮನಕ್ಕೆ ತಂದರೆ ಪರಿಹರಿಸಲಾಗುವುದು ಎಂದು ತಿಳಿಸಿದರು.

ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿ, ಬಸವಣ್ಣನವರ 770 ಅಮರಂಗಣಗಳಲ್ಲಿ ಅಂಬಿಗರ ಚೌಡಯ್ಯನವರು ನಿಜ ಶರಣ ಎಂದು ಕರೆಸಿಕೊಂಡಿದ್ದರು. ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ಚಾಚೂತಪ್ಪದೇ ಅನುಸರಿಸುತ್ತಿದ್ದರು ಎಂದರು.

ಸ್ಕೇಟಿಂಗನಲ್ಲಿ ರಾಷ್ಟ್ರಮಟ್ಟದ ವರೆಗೆ ಹೆಸರು ಮಾಡಿದ ಕೃಷ್ಣವಿ ಜಾಧವ್ ಹಾಗೂ ಸಾಹ್ನವಿ ಜಾಧವ್ ಅವರಿಗೆ ಸನ್ಮಾನಿಸಲಾಯಿತು. ಟೋಕರೆ ಕೋಲಿ ಸಮಾಜದ ನೌಕರ ಸಂಘದ ‌ಹೊಸ ವರ್ಷದ ಕ್ಯಾಲೆಂಡರ್ ‌ಬಿಡುಗಡೆಗೊಳಿಸಲಾಯಿತು.

ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್, ಹೆಚ್ಚುವರಿ ‌ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಜಿಲ್ಲಾ ಟೋಕರೆ ಕೋಲಿ ಸಮಾಜದ ಅಧ್ಯಕ್ಷ ಜಗನ್ನಾಥ ಜಮಾದಾರ, ಅಂಬಿಗರ ಯುವ ಸೇನೆ ಅಧ್ಯಕ್ಷ ಸುನೀಲ್‌ ಭಾವಿಕಟ್ಟಿ, ಸಮಾಜದ ಮುಖಂಡರಾದ ವೈಜನಾಥ ಹೆಡಗಾಪೂರ, ಸುನೀಲ್‌ ಕಾಶೆಂಪುರ್‌, ಧನರಾಜ ಹಂಗರಗಿ, ಅಶೋಕ ವಕ್ರಾಣಿ, ಮಾರುತಿ ಮಾಸ್ಟರ್ ‌ ಇತರರಿದ್ದರು.

Cut-off box - ಬಸವೇಶ್ವರ ವೃತ್ತದಲ್ಲೂ ಆಚರಣೆ ಬೀದರ್‌ನ ಬಸವ ಮಂಟಪದ ಮಾತೆ ಸತ್ಯಾದೇವಿ ನೇತೃತ್ವದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಭಾನುವಾರ ಆಚರಿಸಲಾಯಿತು. ಅಂಬಿಗರ ಚೌಡಯ್ಯನವರು ಬಸವಣ್ಣನವರ ಅನುಭವ ಮಂಟಪದ ಅತಿ ಶ್ರೇಷ್ಠ ನಿಷ್ಠುರ ಶರಣರು. ಲಿಂಗಾಯತ ಧರ್ಮ ಸ್ಥಾಪನೆಯಲ್ಲಿ ಅತಿ ಮುಖ್ಯ ವ್ಯಕ್ತಿ ಆಗಿದ್ದರು. ಇಷ್ಟಲಿಂಗ ಪೂಜೆ ಬಗ್ಗೆ ಬಲವಾಗಿ ಹೇಳಿ ಮೂರ್ತಿ ಪೂಜೆ ಮೌಢ್ಯಾಚರಣೆ ಮೂಢ ನಂಬಿಕೆ ಮೌಢ್ಯಗಳನ್ನು ಬಲವಾಗಿ ಖಂಡಿಸಿದ್ದರು ಎಂದು ಮಾತೆ ಸತ್ಯಾದೇವಿ ಹೇಳಿದರು. ಶಿವಶರಣಪ್ಪ ಪಾಟೀಲ ಹಾರೂರಗೇರಿ ಶ್ರೀಕಾಂತ ಸ್ವಾಮಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT