ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ ಕಾಂಗ್ರೆಸ್ ಟಿಕೆಟ್‌ ನಿರಾಕರಿಸಿದ ಅಶೋಕ ಖೇಣಿ

Last Updated 23 ಜನವರಿ 2021, 8:44 IST
ಅಕ್ಷರ ಗಾತ್ರ

ಬೀದರ್‌: ‘ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸುವಂತೆ ಕಾಂಗ್ರೆಸ್‌ ವರಿಷ್ಠರು ಮನವಿ ಮಾಡಿಕೊಂಡರೂ ಸ್ವಕ್ಷೇತ್ರ ಬೀದರ್‌ ದಕ್ಷಿಣ ಬಿಟ್ಟು ಬೇರೆ ಕಡೆಯಿಂದ ಸ್ಪರ್ಧಿಸಲಾರೆ ಎಂದು ನಯವಾಗಿಯೇ ನಿರಾಕರಿಸಿದ್ದೇನೆ’ ಎಂದು ಮಾಜಿ ಶಾಸಕ ಅಶೋಕ ಖೇಣಿ ಹೇಳಿದರು.

‘ಬಸವಕಲ್ಯಾಣದಲ್ಲಿ ಅದೇ ಕ್ಷೇತ್ರದವರು ಸ್ಪರ್ಧಿಸಬೇಕು. ಹೊರಗಿನವರು ಸ್ಪರ್ಧಿಸಿದರೆ ಆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಆಗುವುದಿಲ್ಲ. ಮತದಾರರು ಚುನಾಯಿತ ಪ್ರತಿನಿಧಿಯನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವೂ ಆಗುವುದಿಲ್ಲ. ಸ್ಥಳೀಯರಿಗೆ ಟಿಕೆಟ್‌ ಕೊಡುವುದು ಒಳ್ಳೆಯದು’ ಎಂದು ನಗರದ ತಮ್ಮ ನಿವಾಸದಲ್ಲಿ ಶನಿವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

‘ಶಾಸಕರಾಗಿದ್ದ ಬಿ.ನಾರಾಯಣರಾವ್‌ ಅವರ ಪತ್ನಿ ಅಥವಾ ಪುತ್ರನಿಗೆ ಟಿಕೆಟ್ ಕೊಡುವುದು ಪಕ್ಷದ ವರಿಷ್ಠರಿಗೆ ಹಾಗೂ ಸ್ಪರ್ಧಿಸಲು ಇಚ್ಛಿಸುವವರಿಗೆ ಬಿಟ್ಟ ವಿಚಾರ. ಈ ವಿಷಯದಲ್ಲಿ ನಾನು ಮಾತನಾಡಲು ಇಷ್ಟಪಡುವುದಿಲ್ಲ’ ಎಂದರು.

‘ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸೋತರೂ ಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ನನ್ನ ಅವಧಿಯಲ್ಲಿ ₹ 2,250 ಕೋಟಿ ಅನುದಾನ ತಂದು ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಪಡಿಸಿದ್ದೇನೆ. ಪ್ರಸ್ತುತ ಎಲ್ಲ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಕ್ಷೇತ್ರದ ಜನರಿಗೆ ಉದ್ಯೋಗ ಕಲ್ಪಿಸುವ ದಿಸೆಯಲ್ಲಿ 500 ಎಕರೆ ಪ್ರದೇಶದಲ್ಲಿ ₹ 100 ಕೋಟಿ ವೆಚ್ಚದಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸುವ ಉದ್ದೇಶ ಹೊಂದಿದ್ದೇನೆ’ ಎಂದು ತಿಳಿಸಿದರು.

‘ಉದ್ಯಮಿಗಳು, ರೈತರು ಹಾಗೂ ಗ್ರಾಮದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT