ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂಗಳಲ್ಲಿ ಸ್ವಚ್ಛತೆಯೂ ಇಲ್ಲ, ಭದ್ರತೆಯೂ ಇಲ್ಲ

Last Updated 3 ಫೆಬ್ರುವರಿ 2020, 9:34 IST
ಅಕ್ಷರ ಗಾತ್ರ

ಬೀದರ್‌: ನಗರದಲ್ಲಿ ಒಂದಲ್ಲ, ಎರಡಲ್ಲ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳ ನೂರಾರು ಎಟಿಎಂಗಳಿವೆ. ಬ್ಯಾಂಕುಗಳಿಗೆ ಹೊಂದಿಕೊಂಡಿರುವ ಕೆಲ ಎಟಿಎಂಗಳಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದನ್ನು ಬಿಟ್ಟರೆ ಬಹುತೇಕ ಎಟಿಎಂಗಳಿಗೆ ಭದ್ರತೆಯೇ ಇಲ್ಲ. ಅನೇಕ ಎಟಿಎಂಗಳಲ್ಲಿ ಸ್ವಚ್ಛತೆ ಕೂಡ ಇಲ್ಲ.

ಕೆಲ ಎಟಿಎಂಗಳ ಗಾಜಿನ ಬಾಗಿಲುಗಳು ಮುರಿದಿವೆ. ಇನ್ನು ಕೆಲ ಎಟಿಎಂಗಳ ಬಾಗಿಲುಗಳನ್ನು ಸರಿಯಾಗಿ ಮುಚ್ಚಲು ತೆರೆಯುಲು ಬರುತ್ತಿಲ್ಲ. ಹಣ ಪಡೆದ ನಂತರ ಗ್ರಾಹಕರು ಸ್ಲೀಪ್‌ಗಳನ್ನು ಅಲ್ಲಿಯೇ ಎಸೆದು ಹೋಗುತ್ತಿರುವ ಕಾರಣ ಒಳಗೆ ಕಸ ತುಂಬಿಕೊಂಡಿದೆ. ಗ್ರಾಹಕರು ನೆಲಕ್ಕೆ ಬಿದ್ದ ಕಸವನ್ನು ಕಾಲಿನಿಂದ ಬದಿಗೆ ಸರಿಸಿ ಹಣ ಪಡೆದುಕೊಳ್ಳುತ್ತಿದ್ದಾರೆ. ನಗರದ ಎಸ್‌ಬಿಐ ಹಾಗೂ ಕೆನರಾ ಬ್ಯಾಂಕ್‌ಗಳ ಎಟಿಎಂಗಳಲ್ಲೇ ಅತಿ ಹೆಚ್ಚು ಕಸ ತುಂಬಿಕೊಂಡಿರುವುದು ಕಾಣ ಸಿಗುತ್ತದೆ.

ರೈಲು ನಿಲ್ದಾಣ ಮಾರ್ಗ ಹಾಗೂ ಜ್ಯೋತಿ ಕಾಲೊನಿಯಲ್ಲಿರುವ ಕೆನರಾ ಬ್ಯಾಂಕ್‌ ಎಟಿಎಂ, ಕೆಇಬಿ ಕಚೇರಿ ಮುಂಭಾಗ ಮತ್ತು ಓಲ್ಡ್‌ಸಿಟಿಯಲ್ಲಿರುವ ಎಸ್‌ಬಿಐ ಎಟಿಎಂಗಳಲ್ಲಿ ಅತಿ ಹೆಚ್ಚು ಕಸ ತುಂಬಿಕೊಂಡಿದೆ. ಎಟಿಎಂಗಳಲ್ಲಿ ಕಾಗದದ ತುಣುಕುಗಳು ತುಂಬಿಕೊಂಡಿದ್ದರೂ ಸ್ವಚ್ಛಗೊಳಿಸಲು ಬ್ಯಾಂಕ್‌ ಅಧಿಕಾರಿಗಳು ಆಸಕ್ತಿ ತೋರಿಸುತ್ತಿಲ್ಲ.

ನಗರದ ಪ್ರಮುಖ ಸ್ಥಳ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಇರುವ ಎಟಿಎಂಗಳಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ವೇಳೆಯಲ್ಲಿ ನಾಯಿಗಳು ಮಲಗುತ್ತಿವೆ. ರಾತ್ರಿ ವೇಳೆ ತುರ್ತು ಸಂದರ್ಭದಲ್ಲಿ ಎಟಿಎಂ ಒಳಗೆ ಹೋಗಲು ಜನರು ಭಯಪಡುತ್ತಿದ್ದಾರೆ. ಓಲ್ಡ್‌ಸಿಟಿಯಲ್ಲಂತೂ ನಾಯಿಗಳು ಜನರ ಮೇಲೆ ದಾಳಿ ಇಡುತ್ತಿವೆ.

ಕೆಲ ಎಟಿಎಂಗಳಲ್ಲಿ ರಾತ್ರಿ ವೇಳೆಯಲ್ಲಿ ವಿದ್ಯುತ್‌ ದೀಪಗಳು ಸರಿಯಾಗಿ ಹೊತ್ತಿಕೊಳ್ಳುತ್ತಿಲ್ಲ. ಗಸ್ತು ತಿರುಗುವ ಪೊಲೀಸರೇ ರಾತ್ರಿ ವೇಳೆಯಲ್ಲಿ ಎಟಿಎಂ ಒಳಗೆ ನೋಡಿಕೊಳ್ಳಬೇಕಾದ ಸ್ಥಿತಿ ಇದೆ. ಎಟಿಎಂಗಳ ಮೇಲೆ ನಿಗಾ ಇಡುವುದು ಪೊಲೀಸರಿಗೂ ತಲೆ ನೋವಾಗಿದೆ.

ಕೆಲ ಎಟಿಎಂಗಳಲ್ಲಿನ ಎ.ಸಿ.ಗಳು ಬಂದ್ ಆಗಿ ಅನೇಕ ವರ್ಷಗಳೇ ಕಳೆದಿವೆ. ಎಟಿಎಂಗಳಲ್ಲಿನ ಗುಂಡಿಗಳು ಸೂಕ್ಷ್ಮವಾಗಿ ಕೆಲಸ ಮಾಡುತ್ತಿಲ್ಲ. ಎರಡು ಮೂರು ಬಾರಿ ಗುಂಡಿ ಒತ್ತಿದ ನಂತರ ಕಾರ್ಯನಿರ್ವಹಿಸುತ್ತಿವೆ. ಕೆಲ ಎಂಟಿಎಂಗಳಲ್ಲಿ ತಾಂತ್ರಿಕ ದೋಷದಿಂದಾಗಿ ಬಹಳ ಹೊತ್ತಿನವರೆಗೂ ಹಣ ಹೊರಗೆ ಬರುತ್ತಿಲ್ಲ. ಒಂದೊಮ್ಮೆ ಹಣ ಬಾರದಿದ್ದರೂ ಹಣ ಪಡೆದಿರುವ ಮೆಸೆಜ್‌ ಮೊಬೈಲ್‌ಗೆ ಬರುತ್ತಿರುವ ಕಾರಣ ಗ್ರಾಹಕರು ಗಾಬರಿಯಿಂದ ಬ್ಯಾಂಕ್‌ ಶಾಖೆಗಳಿಗೆ ಹೋಗಿ ವಿಚಾರಿಸುತ್ತಿದ್ದಾರೆ.

ಬೆಂಗಳೂರಿನ ಎಟಿಎಂನಲ್ಲಿ ಹಣ ಪಡೆಯಲು ಬಂದಿದ್ದ ಮಹಿಳೆಯ ಮೇಲೆ ದುಷ್ಕರ್ಮಿಯೊಬ್ಬ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆಯನ್ನು ಸ್ಮರಿಸಿಕೊಂಡರೆ ಮೈ ಜುಮ್‌ ಎನ್ನುತ್ತದೆ. ಈ ಘಟನೆಯ ನಂತರ ಪೊಲೀಸರು ಎಲ್ಲ ಬ್ಯಾಂಕ್‌ ಅಧಿಕಾರಿಗಳಿಗೆ ಭದ್ರತಾ ಸಿಬ್ಬಂದಿ ನೇಮಕಕ್ಕೆ ಸೂಚನೆ ನೀಡಿದ್ದಾರೆ. ಬ್ಯಾಂಕ್‌ ಅಧಿಕಾರಿಗಳ ಸಭೆಯಲ್ಲೂ ಈ ವಿಷಯ ಪ್ರಸ್ತಾಪ ಮಾಡಿದ್ದಾರೆ.

ಭದ್ರತೆ ಇಲ್ಲದ ಕಾರಣ ಎಟಿಎಂಗಳಲ್ಲಿ ಕಳ್ಳತನ ಹಾಗೂ ಕಳ್ಳತನ ಯತ್ನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹೀಗಾಗಿ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳದ ಬ್ಯಾಂಕ್‌ಗಳು ರಾತ್ರಿ 10 ಗಂಟೆಯ ನಂತರ ಎಟಿಎಂಗಳಿಗೆ ಬೀಗ ಹಾಕಬೇಕು ಎಂದು ಜಿಲ್ಲಾ ಪೊಲೀಸ್‌ ಇಲಾಖೆ ಖಡಕ್‌ ಸೂಚನೆ ನೀಡಿದೆ.

‘ಎಟಿಎಂಗಳಿಗೆ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಒಂದು ತಿಂಗಳ ಹಿಂದೆಯೇ ಬ್ಯಾಂಕ್‌ ಅಧಿಕಾರಿಗಳಿಗೆ ನೋಟಿಸ್‌ ಕಳಿಸಲಾಗಿದೆ. ಸುರಕ್ಷತೆಯ ವಿಷಯದಲ್ಲಿ ಬ್ಯಾಂಕ್‌ ಅಧಿಕಾರಿಗಳು ಗಂಭೀರವಾಗಿಲ್ಲ’ ಎಂದು ಹೇಳುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

‘ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್‌ಗಳ ಒಟ್ಟು 244 ಎಟಿಎಂಗಳಿವೆ. ಅದರಲ್ಲಿ ಕೇವಲ 19 ಎಟಿಎಂಗಳಲ್ಲಿ ಮಾತ್ರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಬ್ಯಾಂಕ್‌ಗಳಿಗೆ ಒಂದು ತಿಂಗಳ ಅವಕಾಶ ನೀಡಲಾಗಿತ್ತು. ಕೆಲ ಬ್ಯಾಂಕ್‌ಗಳಿಂದ ಸ್ಪಂದನೆ ದೊರೆತ್ತಿಲ್ಲ’ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಬಿ.ಎಂ. ಕಮತಗಿ ಹೇಳುತ್ತಾರೆ.

ಎಟಿಎಂಗಳು ತಾಂತ್ರಿಕ ಕಾರಣದಿಂದ ಒಮ್ಮೆ ಬಂದ್ ಆದರೆ ಮತ್ತೆ ಶುರುವಾಗಲು ಒಂದು ವಾರ ಅಥವಾ ಹದಿನೈದು ದಿನ ತಗಲುತ್ತದೆ. ಎಟಿಎಂ ನಂಬಿದವರ ಪರದಾಟ ಶುರುವಾಗುತ್ತದೆ. ಕೆಲವೊಮ್ಮೆ ಬ್ಯಾಂಕಿನ ಸಿಬ್ಬಂದಿ ಗಾಜಿನ ಮೇಲೆ ‘ನೋ ಕ್ಯಾಶ್‌’ ಎಂದು ಬರೆದು ಅಂಟಿಸುತ್ತಾರೆ.

ನಗರದ ಅನೇಕ ಎಟಿಎಂಗಳಲ್ಲಿ ತಿಂಗಳ ಆರಂಭದಲ್ಲಿ ಹಣವೇ ಇರುವುದಿಲ್ಲ. ಎಟಿಎಂನಲ್ಲಿ ಹಣ ಹಾಕಿದ ಒಂದು ಗಂಟೆಯಲ್ಲೇ ಹಣ ಖಾಲಿಯಾಗುತ್ತದೆ. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಮನೆ ಬಾಡಿಗೆ, ವಿದ್ಯುತ್‌ ಬಿಲ್, ಮಕ್ಕಳ ಆಟೊ ಬಾಡಿಗೆ, ಹಾಲಿನ ಹಣ ಪಾವತಿಸಲು ತಿಂಗಳ ಮೊದಲ ವಾರದಲ್ಲಿ ಹಣ ಪಡೆಯಲು ಬಂದರೆ ಹಣವೇ ದೊರಕುವುದಿಲ್ಲ. ಜನ ಸಾಮಾನ್ಯರು ಹಣಕ್ಕಾಗಿ ಬೇರೆ ಬೇರೆ ಎಟಿಎಂಗಳಿಗೆ ಅಲೆಯಬೇಕಾದ ಸ್ಥಿತಿ ಇದೆ ಎಂದು ದೂರುತ್ತಾರೆ ಗ್ರಾಹಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT