ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಾಧೀಶರು ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡಲಿ

ಔರಾದ್: ಬಸವ ಜಯಂತಿ ಉತ್ಸವದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿಕೆ
Last Updated 30 ಮೇ 2022, 4:06 IST
ಅಕ್ಷರ ಗಾತ್ರ

ಔರಾದ್: ಸರ್ಕಾರದ ದುರಾಡಳಿತ ಮುಚ್ಚಿ ಹಾಕಲು ಜಾತಿ ಮತ್ತು ಧರ್ಮಗಳ ನಡುವೆ ಜಗಳ ಹಚ್ಚಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಾಗಿರಬೇಕು. ಮಠಾಧೀಶರು ಅನ್ಯಾಯ ಖಂಡಿಸಿ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಇಲ್ಲಿಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶನಿವಾರ ಸಂಜೆ ಆಯೋಜಿಸಿದ ಬಸವ ಜಯಂತಿ ಉತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಔರಾದ್ ತಾಲ್ಲೂಕು ಸೇರಿದಂತೆ ಈ ಗಡಿ ಭಾಗ ಕರ್ನಾಟಕದಲ್ಲಿ ಉಳಿಯಲು ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರು ಹಾಗೂ ಮಾಜಿ ಸಚಿವ ಭೀಮಣ್ಣ ಖಂಡ್ರೆ ಶ್ರಮ ಬಹಳಷ್ಟಿದೆ. ಅಂದು ಸಾವಿರಾರು ಜನ ಕನ್ನಡಿಗರಿಂದ ಸಹಿ ಸಂಗ್ರಹ ಅಭಿಯಾನ ಮಾಡಿ ಇದು ಕರ್ನಾಟದಲ್ಲೇ ಉಳಿಯಬೇಕು ಎಂದು ಮಹಾಜನ್ ಆಯೋಗದ ಮುಂದೆ ಸಮರ್ಥವಾಗಿ ವಾದ ಮಂಡಿಸಿದ ಕಾರಣ ಇಂದು ನಾವು ಕರ್ನಾಟದಲ್ಲಿ ಉಳಿದಿದ್ದೇವೆ’ ಎಂದು ತಿಳಿಸಿದರು.

‘ಇಲ್ಲಿ ಕನ್ನಡ ಶಾಲೆಗಳು ಉಳಿದಿವೆ. ಲಿಂಗೈಕ್ಯ ಪಟ್ಟದ್ದೇವರು ಹಾಗೂ ಭೀಮಣ್ಣ ಖಂಡ್ರೆ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಸ್ವತಃ ಕಲ್ಲು, ಮಣ್ಣು ಎತ್ತಿ ಬಸವಕಲ್ಯಾಣ ಅನುಭವ ಮಂಟಪ ಕಟ್ಟಿದ್ದಾರೆ. ಶಾಂತಿ ವರ್ಧಕ ಶಿಕ್ಷಣ ಸಂಸ್ಥೆ ಕಟ್ಟಿ ಈ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ. ಇಂದು ರೈತರಿಗೆ ಉಚಿತ ಬೀಜ ಹಾಗೂ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ಸಿಗಲು ಅಂದು ಭೀಮಣ್ಣ ಖಂಡ್ರೆ ನಡೆಸಿದ ಹೋರಾಟದ ಪ್ರತಿಫಲ’ ಎಂದು ಅವರು ತಿಳಿಸಿದರು.

‘ಬಸವಾದಿ ಶರಣರು ಸತ್ಯ, ಶುದ್ಧ ಕಾಯಕ ಮಾಡಿ ಜಗತ್ತಿಗೆ ಉತ್ತಮ ಸಂದೇಶ ನೀಡಿದ್ದಾರೆ. ಆದರೆ ಈ ಸರ್ಕಾರ 40 ಪರ್ಸೆಂಟೆಜ್ ಲೂಟಿ ಮಾಡುವಲ್ಲಿ ತೊಡಗಿ ಬಸವತತ್ವಕ್ಕೆ ಚ್ಯುತಿ ತರುತ್ತಿದೆ. ಈ ಸರ್ಕಾರದ ಬಳಿ ಬದ್ಧತೆ ಇಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯುವಕರು ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಕೋವಿಡ್‍ನಲ್ಲಿ ಸಾವಿರಾರು ಜನ ಮೃತಪಟ್ಟಿದ್ದಾರೆ. ಈ ಬಗ್ಗೆಯೂ ಜನರಿಗೆ ತಪ್ಪು ಮಾಹಿತಿ ಕೊಡಲಾಗುತ್ತಿದೆ’ ಎಂದರು.

ಬಸವತತ್ವಕ್ಕೆ ವಿರುದ್ಧವಾಗಿ ಭ್ರಷ್ಟಾಚರದಲ್ಲಿ ತೊಡಗಿದ ಬಿಜೆಪಿ ಸರ್ಕಾರ ಬಸವಣ್ಣ ಹಾಗೂ ಬಸವತತ್ವದ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದೆ ಎಂದು ದೂರಿದರು.

ಭಾಲ್ಕಿ ಮಠದ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸಿ ‘ಶರಣತತ್ವದಲ್ಲಿ ಮನುಷ್ಯರ ಪ್ರತಿ ಸಮಸ್ಯೆಗೂ ಪರಿಹಾರವಿದೆ ಎಂದರು.

ಮಾಜಿ ಶಾಸಕ ಗುಂಡಪ್ಪ ವಕೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೆಡಗಾಪುರ ಶಿವಲಿಂಗ ಶಿವಾ ಚಾರ್ಯರು, ಜೊನ್ನೆಕೇರಿ ಚಿದಾನಂದ ಶ್ರೀಗಳು, ಗಣೆಗಾಂವ್ ಶಂಕರಲಿಂಗ ಶಿವಾಚಾರ್ಯರು ಉಪಸ್ಥಿತರಿದ್ದರು. ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ, ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಬಸವರಾಜ ದೇಶಮುಖ, ಕಾಂಗ್ರೆಸ್ ಮುಖಂಡ ಲಕ್ಷ್ಮಣ ಸೋರಳಿಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಆನಂದ ಚವಾಣ್, ವಿಶ್ವನಾಥ ದೀನೆ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯರ್ಶಿ ಶರಣಪ್ಪ ಪಾಟೀಲ, ರಾಮಣ್ಣ ವಡೆಯರ್, ಬಾಬು ತಾರೆ, ಶಂಕು ನಿಸ್ಪತೆ, ಅನೀಲ ಹೇಡೆ, ರಮೇಶ ಮುಳೆ, ರತ್ನದೀಪ ಕಸ್ತೂರೆ, ದತ್ತಾತ್ರಿ ಬಾಪುರೆ, ಸಂದೀಪ ಮಾನೆ, ವಿವೇಕ ನಿರ್ಮಳೆ, ಚಂದು ಡಿಕೆ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಕನ್ನಡಾಂಬೆ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT