ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲೂ ಮಸೀದಿ ವಿವಾದ: ಅನುಭವ ಮಂಟಪದ ಕುರುಹು ಪತ್ತೆ

Last Updated 28 ಮೇ 2022, 7:11 IST
ಅಕ್ಷರ ಗಾತ್ರ

ಬೀದರ್‌: ಬಸವಕಲ್ಯಾಣದ ಪೀರ್‌ಪಾಷಾದರ್ಗಾದಲ್ಲಿ ಅನುಭವ ಮಂಟಪದ ಕುರುಹುಗಳು ಲಭ್ಯವಾಗಿರುವುದಾಗಿ ಕೆಲವು ಮಠಾಧೀಶರು ಹೇಳಿದ್ದಾರೆ. ಅಗತ್ಯ ದಾಖಲೆಗಳನ್ನು ಒದಗಿಸಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಹಿಂದೆ ಮುಸಲ್ಮಾನರು ಆಡಳಿತ ನಡೆಸಿದ ಅವಧಿಯಲ್ಲಿ ಕೆಲ ಹಿಂದೂ ದೇವಾಲಯಗಳನ್ನು ಕೆಡವಿ ಹಾಕಿದರು. ಆದರೆ, ನಾವು ಹಾಗೆ ಮಾಡುವುದಿಲ್ಲ. ಕಾನೂನು ಚೌಕಟ್ಟಿನಲ್ಲೇ ಕ್ರಮ ಕೈಗೊಳ್ಳುತ್ತೇವೆ ಎಂದು ಔರಾದ್‌ ತಾಲ್ಲೂಕಿನ ವಡಗಾಂವ(ಡಿ) ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಮಠಾಧೀಶರು ಸಮಪರ್ಕ ದಾಖಲೆಗಳನ್ನು ಒದಗಿಸಿದರೆ ಮುಂದೆ ಏನು ಮಾಡಬೇಕೋ ಅದನ್ನು ಮಾಡಲಾಗುವುದು. ಅಯೋಧ್ಯೆಯಲ್ಲಿ ಭೂಮಿ ಉತ್ಖನನ ಸಂದರ್ಭದಲ್ಲಿ ಹಿಂದೂ ಮಂಟಪಗಳು ದೊರಕಿದವು ಎಂದು ಹೇಳಿದರು.

ದೇಶದಲ್ಲಿ ಜಾತ್ಯತೀತರು ಹೇಳಿಕೊಳ್ಳುವ ಕೆಲ ಸಾಹಿತಿಗಳು ಹಾಗೂ ರಾಜಕಾರಣಿಗಳು ಢೋಂಗಿ ಜಾತ್ಯತೀತವಾದಿಗಳಾಗಿದ್ದಾರೆ ಎಂದು ಚುಚ್ಚಿದರು.

ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್‌ ಬಗ್ಗೆ ಮಾಡಿರುವ ಟೀಕೆಯನ್ನು ಖಂಡಿಸುತ್ತೇನೆ. ಕಾಂಗ್ರೆಸ್‌ನವರು ಹಿಂದೆ ಶ್ರೀರಾಮ ಅಯೋಧ್ಯೆಯಲ್ಲಿ ಜನಿಸಿರುವ ಬಗ್ಗೆ ಪ್ರಶ್ನೆ ಮಾಡಿದ್ದರು. ಆದರೆ, ಕೋರ್ಟ್ ತೀರ್ಪು ಏನಾಯಿತು ಎನ್ನುವುದು ಎಲ್ಲರಿಗೂ ತಿಳಿದಿದೆ. ಸಿದ್ದರಾಮಯ್ಯ ಅವರು ಆರ್‌ಎಸ್ಎಸ್‌ ಬಗ್ಗೆ ಟೀಕೆ ಮಾಡಿದರೆ ಮುಸ್ಲಿಂ ಮತಗಳು ಬರುತ್ತಿವೆ ಎನ್ನುವ ಭ್ರಮೆಯಲ್ಲಿ ಇದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನ ಜಿ23ಯಲ್ಲಿ ಎರಡು ಮೂರು ಜನ ಬಿಟ್ಟು ಹೋಗಿದ್ದಾರೆ. ಮುಂದೆ ಕಾಂಗ್ರೆಸ್‌ನಲ್ಲಿ ಯಾರೂ ಉಳಿಯುವುದಿಲ್ಲ. ಆರ್‌ಎಸ್‌ಎಸ್‌ ಟೀಕೆ ಮಾಡಿದರೆ ನನ್ನ ಟೀಕೆ ಮಾಡಿದಂತೆ. ನನ್ನ ಅಸ್ತಿತ್ವ ಟೀಕೆ ಮಾಡಿದರೆ ನಾವೂ ಕಾಂಗ್ರೆಸ್‌ ಟೀಕೆ ಮಾಡಬೇಕಾಗುತ್ತದೆ. ಕಾಂಗ್ರೆಸ್‌ನ ಮೂಲ ಇಂಗ್ಲೆಂಡ್‌ ಹಾಗೂ ಇಟಲಿಯಲ್ಲಿ ಇದೆ. ಸಿದ್ದರಾಮಯ್ಯ ಆರ್‌ಎಸ್‌ಎಸ್‌ಗೆ ಕ್ಷಮಾಪಣೆ ಕೇಳಬೇಕು ಎಂದು ಆಹ್ರಹಿಸಿದರು.

ಜವಾಹರಲಾಲ ನೆಹರು ಹಾಗೂ ನರೇಂದ್ರ ಮೋದಿ ಈ ದೇಶಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಲ್ಲರಿಗೂ ಗೊತ್ತಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್‌ ಪ್ರಧಾನಮಂತ್ರಿ ಆಗಬೇಕಿತ್ತು. ಆದರೆ ನೆಹರು ಅವರು ಹಿಂದಿನ ಬಾಗಿಲಿನಿಂದ ಬಂದು ಪ್ರಧಾನಿಯಾದರು. ಕಾಂಗ್ರೆಸ್‌ ಯಾವಾಗಲೂ ಹಿಂಬಾಗಿಲು ಹಾಗೂ ವಂಶ ಪರಂಪರೆ ರಾಜಕಾರಣ ಮಾಡುತ್ತ ಬಂದಿದೆ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT