ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯದ್ದೇ ಕೂಗು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿಯವರೊಂದಿಗೆ ಪೋನ್‌ಇನ್‌ ಕಾರ್ಯಕ್ರಮ
Last Updated 17 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿಯ ‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮೂಲಸೌಕರ್ಯದ ಕೊರತೆ ಇರುವ ಹಾಗೂ ಕೇಂದ್ರಗಳನ್ನು ಸ್ವಂತ ಕಟ್ಟಡದಲ್ಲೇ ನಡೆಸಬೇಕು ಎನ್ನುವ ಬೇಡಿಕೆಯ ಕರೆಗಳು ಜಿಲ್ಲೆಯ ವಿವಿಧೆಡೆಯಿಂದ ಬಂದವು. ಚಿಣ್ಣರ ಆರೋಗ್ಯದ ದೃಷ್ಟಿಯಿಂದಾದರೂ ಗುಣಮಟ್ಟದ ಆಹಾರ ಒದಗಿಸಬೇಕು ಎಂದು ಬಹಳಷ್ಟು ಜನರು ಮನವಿ ಮಾಡಿಕೊಂಡರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ ಅವರು ಕ್ಲಿಷ್ಟಕರ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸುವ ಮೂಲಕ ಕೇಳುಗರ ವಿಶ್ವಾಸ ಗಳಿಸಿದರು. ಕೆಲವು ನಿರ್ಧಾರಗಳನ್ನು ಸರ್ಕಾರದ ಮಟ್ಟದಲ್ಲೇ ತೆಗೆದುಕೊಳ್ಳಲಾಗುತ್ತದೆ. ಆದರೂ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಉತ್ತರಿಸಿದರು.
ಮಕ್ಕಳಲ್ಲಿನ ಅಪೌಷ್ಟಿಕತೆ ಹಾಗೂ ಮಹಿಳೆಯರಲ್ಲಿನ ರಕ್ತಹೀನತೆ ಕಡಿಮೆ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯ. ಸಾಮಾಜಿಕ ಸಂಘ ಸಂಸ್ಥೆಗಳು ಮುಂದೆ ಬಂದರೆ ಬಡ ಕುಟುಂಬಗಳ ಮಕ್ಕಳಿಗೆ ಇನ್ನೂ ಉತ್ತಮ ಸೇವೆ ಕೊಡಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

* ಅನೇಕ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುತ್ತಿಲ್ಲ. ಈ ಕುರಿತು ಏನು ಕ್ರಮ ಕೈಗೊಳ್ಳುವಿರಿ?
- ಮಲ್ಲಪ್ಪ ಮುದಾಳೆ, ಚಿಕ್ಕಪೇಟೆ, ಸಿದ್ದಪ್ಪ ಬೀದರ್

ಉತ್ತರ: ನ್ಯಾಯಮೂರ್ತಿ ಎನ್.ಕೆ. ಪಾಟೀಲ ಅವರ ವರದಿ ಪ್ರಕಾರ ಮಕ್ಕಳಿಗೆ ಪೌಷ್ಟಿಕಯುಕ್ತ ಆಹಾರ, ಹಾಲು, ಮೊಟ್ಟೆಗಳನ್ನು ಕೊಡಬೇಕು. ಯಾವುದೇ ಕೇಂದ್ರದಲ್ಲಿ ಕೊಡದಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

* ಜಿಲ್ಲೆಯಲ್ಲಿ ಹೆಚ್ಚಿನ ಅಂಗನವಾಡಿಗಳಿಗೆ ಸ್ವಂತ ಕಟ್ಟಡ, ಕುಡಿಯುವ ನೀರು, ಶೌಚಾಲಯ, ಫ್ಯಾನ್, ನಾಮಫಲಕ ಇಲ್ಲದಿರುವುದು ಗಮನಕ್ಕೆ ಬಂದಿದೆಯಾ?

-ವೀರಭದ್ರಪ್ಪ ಉಪ್ಪಿನ್, ಅರವಿಂದ ಕುಲಕರ್ಣಿ ಬೀದರ್, ಓಂಕಾರ ಪಾಟೀಲ ಕಂಗನಕೋಟ, ವಿಜಯಕುಮಾರ ಶಹಾಪುರಕರ್, ಹಳ್ಳಿಖೇಡ(ಬಿ)

ಉತ್ತರ: ಹೌದು ಗಮನಕ್ಕೆ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರಗಳಿಗೆ ನಿವೇಶನದ ಕೊರತೆ ಇಲ್ಲ. ಆದರೆ, ನಗರ ಪ್ರದೇಶದಲ್ಲಿ ಸಮಸ್ಯೆ ಇದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಿಎ ನಿವೇಶನ ಒದಗಿಸಿದರೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಟ್ಟಡ ನಿರ್ಮಾಣಕ್ಕೆ ₹15 ಲಕ್ಷದಿಂದ ₹18 ಲಕ್ಷ ಅನುದಾನ ಒದಗಿಸಲಿದೆ. ನಿವೇಶನ ಲಭ್ಯ ಇರುವ ಕಡೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗುವುದು. ಕೇಂದ್ರಗಳಿಗೆ ಅಗತ್ಯ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.

* ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸೇವೆ ಕಾಯಂಗೊಳಿಸಿದರೆ ಒಳ್ಳೆಯದು. ಇದರಿಂದ ಅವರು ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗಲಿದೆ.
–ನಾಗರಾಜ ಹಿಬಾರೆ, ಹಳ್ಳಿಖೇಡ(ಬಿ).

ಉತ್ತರ: ಇದು, ನನ್ನ ವ್ಯಾಪ್ತಿ ಮೀರಿದ್ದು. ಸರ್ಕಾರಕ್ಕೆ ಸಂಬಂಧಿಸಿದ ವಿಷಯ.

* ಹೊಳಸಮುದ್ರದಲ್ಲಿ ಮೂರು ಅಂಗನವಾಡಿಗಳಿವೆ. ಕೇಂದ್ರಕ್ಕೆ ಸರ್ಕಾರದಿಂದ ಬರುವ ಹಾಗೂ ಖರ್ಚಾದ ಆಹಾರಧಾನ್ಯದ ಮಾಹಿತಿ ಇಟ್ಟಿಲ್ಲ. ಐದು ಮಕ್ಕಳಿದ್ದರೆ 25 ಮಕ್ಕಳ ಹಾಜರಾತಿ ತೋರಿಸಲಾಗುತ್ತಿದೆ.
- ಪ್ರದೀಪ ಪಾಟೀಲ, ಹೊಳಸಮುದ್ರ, ತಾ. ಔರಾದ್

ಉತ್ತರ: ಕೇಂದ್ರಗಳಲ್ಲಿ ದಾಖಲೆ ಇಡುವುದು ಕಡ್ಡಾಯ. ದಾಖಲೆ ಇಡದಿದ್ದರೆ, ಮಕ್ಕಳ ಸಂಖ್ಯೆ ಅಧಿಕ ತೋರಿಸುತ್ತಿದ್ದರೆ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು.

* ಹುಣಜಿ(ಕೆ) ಗ್ರಾಮದಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಲು ಅಂಗನವಾಡಿ ಕಾರ್ಯಕರ್ತೆಯರು ಹಣ ಪಡೆಯುತ್ತಿದ್ದಾರೆ. ಸರ್ಕಾರ ಮಕ್ಕಳಿಗಾಗಿ ಕಳುಹಿಸುವ ಆಹಾರಧಾನ್ಯವನ್ನು ಮಾರಾಟ ಮಾಡಲಾಗುತ್ತಿದೆ. ಸಿಡಿಪಿಒಗೆ ದೂರು ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ.

- ಚಂದ್ರಶೇಖರ, ಹುಣಜಿ(ಕೆ)

ಉತ್ತರ: ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಲು ಯಾರಿಗೂ ಹಣ ಕೊಡಬೇಕಿಲ್ಲ. ಕಾರ್ಯಕರ್ತೆಯರು ಹಣ ಪಡೆದ ಹಾಗೂ ಆಹಾರಧಾನ್ಯ ಮಾರಾಟ ಮಾಡಿದ ಆರೋಪದ ಬಗ್ಗೆ ತನಿಖೆ ನಡೆಸಲಾಗುವುದು. ಆರೋಪ ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು.

* ಅಂಗನವಾಡಿ ಕಾರ್ಯಕರ್ತೆಯರನ್ನು ಬೇರೆ ಇಲಾಖೆ ಕೆಲಸಗಳಿಂದ ಮುಕ್ತಗೊಳಿಸಿ.
- ಜಗದೀಶ, ಸಂಗೋಳಗಿ

ಉತ್ತರ: ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಅನಗತ್ಯ ಕೆಲಸದ ಹೊರೆ ಹೊರೆಸದಂತೆ ಈಗಾಗಲೇ ಬೇರೆ ಇಲಾಖೆಗಳಿಗೆ ಮನವಿ ಮಾಡಲಾಗಿದೆ. ಕಾರ್ಯಕರ್ತೆಯರು ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಜತೆಗೆ ಚುನಾವಣೆ ಕೆಲಸವನ್ನು ನಿರ್ವಹಿಸಬೇಕಾಗಿದೆ.

* ಬಾಲ ವಿಕಾಸ ಸಮಿತಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಸಮಿತಿ ಇದ್ದದ್ದೇ ಬಹುತೇಕ ಜನರಿಗೆ ಗೊತ್ತಿಲ್ಲ.
-ನಿರ್ಮಲಕಾಂತ ಪಾಟೀಲ, ಬ್ಯಾಲಹಳ್ಳಿ

ಉತ್ತರ: ಅಂಗನವಾಡಿಗಳ ಮೇಲುಸ್ತುವಾರಿಗೆ 11 ಜನರನ್ನು ಒಳಗೊಂಡ ಬಾಲ ವಿಕಾಸ ಸಮಿತಿಗಳು ಇವೆ. ಸಮಿತಿಗಳ ಬಗೆಗೆ ಸಾರ್ವಜನಿಕರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು.

* ಕಾರ್ಯಕರ್ತೆಯರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಅಂಗನವಾಡಿ ಕೇಂದ್ರಗಳಿಗೆ ಬಯೋಮೆಟ್ರಿಕ್ ಅಳವಡಿಸಬೇಕು.
- ಸಚಿನ್ ವಿಶ್ವಕರ್ಮ, ಬೀದರ್

ಉತ್ತರ: ಪೋಷಣ್ ಅಭಿಯಾನದಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ ಕೊಡಲಾಗುತ್ತಿದೆ. ಇನ್ನು ಮುಂದೆ ಅದರಲ್ಲಿ ಮಕ್ಕಳ ಫೇಸ್ ರೀಡಿಂಗ್ ಆಗಲಿದೆ. ಅಂಗನವಾಡಿಗಳ ಮಾಹಿತಿಯೂ ಅದರಲ್ಲಿ ಇರಲಿದೆ. ಬಯೋಮೆಟ್ರಿಕ್‌ ಅಳವಡಿಕೆ ಕಾರ್ಯವೂ ಮುಂದಿನ ದಿನಗಳಲ್ಲಿ ಆಗಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT