ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಮತಗಟ್ಟೆಗಳಲ್ಲಿ ಮೂಲಸೌಕರ್ಯಕ್ಕೆ ಸೂಚನೆ

ಚುನಾವಣಾ ಸಿಬ್ಬಂದಿಗೆ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ನಿರ್ದೇಶನ
Published 30 ಏಪ್ರಿಲ್ 2024, 15:49 IST
Last Updated 30 ಏಪ್ರಿಲ್ 2024, 15:49 IST
ಅಕ್ಷರ ಗಾತ್ರ

ಬೀದರ್‌: ‘ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಎಲ್ಲ ಮತಗಟ್ಟೆಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ಅವರು ಚುನಾವಣಾ ಸಿಬ್ಬಂದಿಗೆ ನಿರ್ದೇಶನ ನೀಡಿದರು.

ನಗರದಲ್ಲಿ ನಡೆದ ಎಆರ್‌ಒ ತಹಶೀಲ್ದಾರ್‌, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಧ್ಯಾಹ್ನದ ಬಿಸಿಯೂಟ ಅಧಿಕಾರಿಗಳು, ಪಿಡಿಒ, ಗ್ರಾಮ ಸೇವಕರೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ ಮಾತನಾಡಿದರು.

ಮತಗಟ್ಟೆಗಳಲ್ಲಿ ಟೇಬಲ್‌, ಕುರ್ಚಿ, ಕರೆಂಟ್‌ ಹಾಗೂ ಶೌಚಾಲಯಗಳ ವ್ಯವಸ್ಥೆ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ಪ್ರತಿ ಮತಗಟ್ಟೆಗಳಲ್ಲಿ ಒಂದು ವೀಲ್‌ ಚೇರ್ ವ್ಯವಸ್ಥೆ ಮಾಡಬೇಕು. ವಯಸ್ಸಾದವರು, ಅಂಗವಿಕಲರಿಗೆ ಸಹಾಯವಾಗಲಿದೆ. ಬಿಸಿಲು ಹೆಚ್ಚಾಗಿರುವುದರಿಂದ ಜನರು ಸರತಿ ಸಾಲಿನಲ್ಲಿ ನಿಲ್ಲುವುದಕ್ಕೆ ತೊಂದರೆಯಾಗದಂತೆ ಅವರಿಗೆ ಮತಗಟ್ಟೆ ಪಕ್ಕದಲ್ಲಿ ಒಂದು ವೇಟಿಂಗ್ ಹಾಲ್‌ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರಗಳು ಐದು ‘ಸಖಿ’ ಮತಗಟ್ಟೆಗಳನ್ನು ಒಳಗೊಂಡಿವೆ. ಒಂದು ಯುವ ಮತಗಟ್ಟೆ ಹಾಗೂ ಒಂದು ವಿಶೇಷ ಚೇತನರ ಮತಗಟ್ಟೆಗಳಿವೆ. ಇವುಗಳನ್ನು ವಿಶೇಷ ರೀತಿಯಲ್ಲಿ ಅಲಂಕರಿಸಬೇಕು. ವಿಶೇಷ ಮತಗಟ್ಟೆ ಎಂದರೆ ವಿಶೇಷ ರೀತಿಯಲ್ಲಿ ಕಾಣಬೇಕು. ಎಲ್ಲ ಮತಗಟ್ಟೆಗಳ ಮುಂಭಾಗದಲ್ಲಿ ರಂಗೋಲಿ ಹಾಕಿ ಅವುಗಳಿಗೆ ತಳಿರು ತೋರಣ ಕಟ್ಟಿ ಅಲಂಕಾರ ಮಾಡಬೇಕು. ವಿಶೇಷ ಮತಗಟ್ಟೆಗಳನ್ನು ಹೊರತುಪಡಿಸಿ ಇತರೆ ಮತಗಟ್ಟೆಗಳನ್ನು ಉತ್ತಮ ರೀತಿಯಲ್ಲಿ ಅಲಂಕರಿಸಬೇಕು. ಮತಗಟ್ಟೆಗಳಿಗೆ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.

ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ಉಪಾಹಾರ, ಊಟ, ನೀರಿನ ವ್ಯವಸ್ಥೆಯನ್ನು ಸರಿಯಾಗಿ ಮಾಡಬೇಕು. ಯಾವುದೇ ಮತಗಟ್ಟೆಗಳಿಂದ ಅಸ್ತವ್ಯಸ್ತವಾಗಿದೆ ಎಂದು ದೂರು ಬರದಂತೆ ಎಚ್ಚರಿಕೆ ವಹಿಸಬೇಕು. ಮತಗಟ್ಟೆಗಳಲ್ಲಿ ಮತದಾನವಾದ ಪ್ರತಿ ಎರಡು ತಾಸಿನ ಮಾಹಿತಿಯನ್ನು ಬಿ.ಎಲ್.ಒ. ಗಳಿಗೆ ನೀಡಬೇಕು. ಮತದಾನ ಮಾಡಲು ಬರುವವರಿಗೆ ಸ್ವಾಗತಿಸಲು ಎನ್.ಎಸ್.ಎಸ್., ಎನ್.ಸಿ.ಸಿ. ಹಾಗೂ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳನ್ನು ನಗರ ಪ್ರದೇಶಗಳ ಮತಗಟ್ಟೆಗಳಲ್ಲಿ ನಿಯೋಜಿಸಬಹುದು ಎಂದರು.

ವಿಶೇಷ ಮತಗಟ್ಟೆಗಳಲ್ಲಿ ಬಣ್ಣ ಹಚ್ಚಬೇಕು. ಬಲೂನ್ ಹಾಗೂ ತಳಿರು ತೋರಣಗಳಿಂದ ಸಿಂಗಾರ ಮಾಡಬೇಕು. ಪೇಂಟಿಂಗ್‌ ಬೇಕಾದರೆ ಮಾಡಬಹುದು. ಮತಗಟ್ಟೆ ಎದುರು ಚಿತ್ರಗಳನ್ನು ಬಿಡಿಸಿದರೆ ಅದು ಸ್ವೀಪ್‌ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಇರಬೇಕು. ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಹಾಗೂ ಸುವ್ಯವಸ್ಥಿತವಾಗಿ ಮತದಾನ ನಡೆಯುವಂತೆ ಚುನಾವಣೆಗೆ ನಿಯೋಜಿತರಾದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಮಾತನಾಡಿ, ಶೇ 50ಕ್ಕಿಂತ ಕಡಿಮೆ ಮತದಾನವಾದ ಮತಗಟ್ಟೆಗಳ ವ್ಯಾಪ್ತಿಗಳಲ್ಲಿ ಇನ್ನೂ 5-6 ದಿನ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಮಾಡಬೇಕು. ಈ ಮತಗಟ್ಟೆಗಳಲ್ಲಿ ಮತದಾನ ಹೆಚ್ಚಾದರೆ ಇಡೀ ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಹೆಚ್ಚಾಗುತ್ತದೆ ಎಂದರು.

ಒಂದೇ ಕಡೆ ಎರಡು– ಮೂರು ಮತಗಟ್ಟೆಗಳು ಇರುವಲ್ಲಿ ಒಬ್ಬ ಬೂತ್‌ ಮತದಾರ ಸಹಾಯಕರನ್ನು ನಿಯೋಜಿಸಬೇಕು. ಮತದಾನ ಮಾಡಲು ಬರುವ ಜನರಿಗೆ ಯಾವ ಮತಗಟ್ಟೆಯಲ್ಲಿ ಅವರು ಮತ ಚಲಾಯಿಸಬೇಕು ಎಂಬ ಮಾಹಿತಿ ಪಡೆಯಲು ಸಹಾಯವಾಗುತ್ತದೆ. ಬಿಸಿಲು ಹೆಚ್ಚಾಗಿ ಇರುವುದರಿಂದ ಮತದಾನದ ಸಮಯದಲ್ಲಿ ಜನರಿಗೆ ಏನಾದರೂ ಆದರೆ ಅವರಿಗೆ ತಕ್ಷಣ ಸ್ಪಂದಿಸಲು ವೈದ್ಯರು ತಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಜರಿರಬೇಕು ಎಂದು ಹೇಳಿದರು.

ಬೀದರ್‌ ಉಪವಿಭಾಗಾಧಿಕಾರಿ ಲವೀಶ್ ಒರ್ಡಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಚುನಾವಣಾ ತಹಶೀಲ್ದಾರ್‌ ಅಣ್ಣಾರಾವ್ ಪಾಟೀಲ, ಎನ್.ಐ.ಸಿ ಅಧಿಕಾರಿ ಶ್ರೀನಿವಾಸ, ಶಾಲಾ- ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸಲೀಂ ಪಾಶಾ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣ, ಎ.ಆರ್.ಒ. ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಿಡಿಒಗಳು, ಗ್ರಾಮ ಸೇವಕರು ಪಾಲ್ಗೊಂಡಿದ್ದರು.

1329 ಅಗತ್ಯ ಸೇವೆಗಳ ಮತದಾರರು

‘ಚುನಾವಣಾ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಮತದಾರರು ಕ್ಷೇತ್ರದಲ್ಲಿ 1329 ಜನರಿದ್ದಾರೆ. ಇವರ ಅನುಕೂಲಕ್ಕಾಗಿ ಮೇ 1 2 ಹಾಗೂ 3ರಂದು ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ಬೀದರ್‌ನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅಂಚೆ ಮತದಾನ ಕೇಂದ್ರಕ್ಕೆ ವ್ಯವಸ್ಥೆ ಮಾಡಲಾಗಿದ್ದು ಅಲ್ಲಿ ಹಕ್ಕು ಚಲಾಯಿಸಬಹುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು. 11 ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಮತದಾರರು ಅಂಚೆ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಬಹುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT