ಗುರುವಾರ , ಜೂನ್ 17, 2021
22 °C
ರಾಜೇಶ್ವರದಲ್ಲೂ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ವ್ಯವಸ್ಥೆ

49 ಸಾವಿರ ಜನರಿಗೆ ಕೋವಿಡ್‌ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ತಾಲ್ಲೂಕಿನಲ್ಲಿ ಇದುವರೆಗೆ 49,000 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರವೀಣ ಹೂಗಾರ ತಿಳಿಸಿದ್ದಾರೆ.

‘ನಗರದಲ್ಲಿ ತಾಲ್ಲೂಕು ಆಸ್ಪತ್ರೆ ಹಾಗೂ ಕೋಟೆ ಹತ್ತಿರದ ಉಪ ಕೇಂದ್ರದಲ್ಲಿ ಲಸಿಕೆ ಹಾಕಲಾಗುತ್ತಿದೆ. ಅಲ್ಲದೆ ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆ ಇದೆ. ಕೋವಿಡ್ ತಪಾಸಣೆ ಕೂಡ ಎಲ್ಲೆಡೆ ನಡೆಯುತ್ತಿದೆ. ಊರು, ಓಣಿಗಳಲ್ಲಿಯೂ ತಪಾಸಣೆಗೆ ವ್ಯವಸ್ಥೆ ಇದೆ. ಆದರೂ, ಅನೇಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದಿದ್ದಾರೆ.

‘ಸೋಂಕಿತರಿಗಾಗಿ ಬಸವಕಲ್ಯಾಣದ ತಾಲ್ಲೂಕು ಆಸ್ಪತ್ರೆಯಲ್ಲಿ 50 ಹಾಸಿಗೆಗಳ ವ್ಯವಸ್ಥೆ ಇದೆ. ಭಾನುವಾರ 21 ಜನರು ಭರ್ತಿ ಆಗಿದ್ದರು. ಇಲ್ಲಿ ಆಕ್ಸಿಜನ್, ಲಸಿಕೆ ಹಾಗೂ ಇತರೆ ಔಷಧಗಳ ಕೊರತೆ ಇಲ್ಲ. ಈ ಬಗ್ಗೆ ಪ್ರತಿದಿನ ಫಲಕದ ಮೇಲೆ ವಿವರ ಬರೆಯಲಾಗುತ್ತಿದೆ. ರಾಜೇಶ್ವರದ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೂ 5 ಹಾಸಿಗೆಗಳ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಆದರೂ, ಅಲ್ಲಿ ಸೋಂಕಿತರು ದಾಖಲಾಗಿಲ್ಲ. ಸಂಸದ ಭಗವಂತ ಖೂಬಾ ಅವರು ಎರಡೂ ಕಡೆ ಭೇಟಿ ನೀಡಿ ಪರಿಶೀಲಿಸಿದ್ದಾರೆ’ ಎಂದು ತಿಳಿಸಿದ್ದಾರೆ.

‘ರಾಷ್ಟ್ರೀಯ ಹೆದ್ದಾರಿಯಲ್ಲಿನ ಚಂಡಿಕಾಪುರ ಹತ್ತಿರ ಹಾಗೂ ಹುಲಸೂರ ಸಮೀಪದ ಹಣಮಂತವಾಡಿ ಬಳಿ ಮಹಾರಾಷ್ಟ್ರದಿಂದ ಬರುವವರ ತಪಾಸಣೆಗೆ ಚೆಕ್‌ಪೋಸ್ಟ್‌ಗಳಿವೆ. ಆದರೂ, ಕಳೆದ ವರ್ಷದಂತೆ ಈ ಸಲ ಹೆಚ್ಚಿನವರು ಅಲ್ಲಿಂದ ಈ ಕಡೆ ಬರುತ್ತಿಲ್ಲ. ಆ ರಾಜ್ಯದಲ್ಲೂ ಲಾಕ್‌ಡೌನ್‌ ಇರುವ ಕಾರಣ ಈ ಕಡೆ ಬರುವ ಜನರು ಹಾಗೂ ವಾಹನಗಳು ತೀರ ಕಡಿಮೆ ಆಗಿವೆ. ಬರೀ ಲಾರಿಗಳು ಮಾತ್ರ ಹೈದರಾಬಾದ್ ಕಡೆಗೆ ಸಂಚರಿಸುತ್ತಿವೆ. ಆದ್ದರಿಂದ ಅವುಗಳ ತಪಾಸಣೆ ನಡೆಸಲಾಗುತ್ತಿಲ್ಲ’ ಎಂದಿದ್ದಾರೆ.

ಅಂಗಡಿ ಮುಂಗಟ್ಟುಗಳು ಬಂದ್

ಬಸವಕಲ್ಯಾಣ: ಕೋವಿಡ್ ಹೆಚ್ಚಳದ ಕಾರಣ ವಾರಾಂತ್ಯ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ್ದರಿಂದ ಭಾನುವಾರ ನಗರದಲ್ಲಿನ ಹಾಗೂ ಗ್ರಾಮೀಣ ಭಾಗದಲ್ಲಿನ ಅಂಗಡಿ ಮುಂಗಟ್ಟುಗಳು ಬಂದ್ ಇದ್ದವು.

ಗ್ರಾಮೀಣ ಭಾಗದಲ್ಲಿ ಕೂಡ ಹೋಬಳಿ ಕೇಂದ್ರ ಹಾಗೂ ದೊಡ್ಡ ಊರುಗಳಲ್ಲಿ ಕೆಲ ದಿನಗಳಿಂದ ಜನರ ಓಡಾಟಕ್ಕೆ ಕಡಿವಾಣ ಹಾಕಲಾಗಿದೆ. ನಾರಾಯಣಪುರ, ಮಂಠಾಳ, ಮುಚಳಂಬ ಗ್ರಾಮ ಪಂಚಾಯಿತಿಗಳ ವತಿಯಿಂದ ಸರ್ಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು