ಬುಧವಾರ, ಆಗಸ್ಟ್ 17, 2022
25 °C
ಕೊಲೆ ಆರೋಪಿಗಳ ಬಂಧನ

ಕಮಲಾಪುರ: ಎರಡು ತಲೆ ಹಾವಿಗಾಗಿ ಹೋಯ್ತು ಜೀವ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ಎರಡು ತಲೆ ಹಾವಿಗಾಗಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆ ಚಿಟಗುಪ್ಪಾ ತಾಲ್ಲೂಕಿನ ಕೊಡಂಬಲ ಗ್ರಾಮದಲ್ಲಿ ನಡೆದಿದ್ದು, ಸಿಪಿಐ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ತನಿಖೆ ನಡೆಸಿದ ಕಮಲಾಪುರ ಠಾಣೆ ಪೊಲೀಸರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.

ಕೊಡಂಬಲ ಗ್ರಾಮದ ಸಂಜೀವಕುಮಾರ ಸಿದ್ರಾಮಪ್ಪ ಸಾಸರವಗ್ಗೆ (30) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ರಾಮಚಂದ್ರ (ರಾಮಣ್ಣ) ನರಸಪ್ಪ ಚಿಲಾನೋರ ಹಾಗೂ ಮಗ ಭರತ (ಭಗವಂತ) ರಾಮಣ್ಣ ಕೊಲೆ ಆರೋಪಿಗಳಾಗಿದ್ದಾರೆ.

ನ.5ರಂದು ಕಮಲಾಪುರ ತಾಲ್ಲೂಕಿನ ಪಟವಾದ ಗ್ರಾಮದ ಹಳ್ಳದ ಸೇತುವೆ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ನವೆಂಬರ್ 4ರಂದು ನಸುಕಿನ ಜಾವ ಕೊಲೆಗೈದು ಬಿಸಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಈ ಶವ ಕೊಂಡಂಬಲ ಗ್ರಾಮದ ಸಂಜಿವಕುಮಾರ ಅವರದ್ದು ಎಂಬುದು ಖಚಿತವಾಯಿತು. ಸಂಜೀವಕುಮಾರ ತಾಯಿ, ಸೋದರಳಿಯನ ಜತೆ ಕೊಲೆಗೈದ ರಾಮಣ್ಣ ಸಹ ಕಲಬುರ್ಗಿ ಜಿಲ್ಲಾ ಆಸ್ಪತ್ರೆಯಲ್ಲಿ ಶವ ಗುರುತು ಪತ್ತೆ ಮಾಡಿ ಗ್ರಾಮಕ್ಕೆ ಕೊಂಡೊಯ್ದಿದ್ದ. ದಾರಿ ತಪ್ಪಿಸಲು ಆರೋಪಿ ರಾಮಣ್ಣ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲೇ ಇದ್ದ.

ಕೊಲೆಯಾದ ಸಂಜೀವಕುಮಾರನ ಮನೆಯಲ್ಲಿ ಕೇಳಿದಾಗ ಎರಡು ತಲೆ ಹಾವಿಗಾಗಿ ಮೊಬೈಲ್‌ನಲ್ಲಿ ಯಾರ ಜತೆಗೆ ವಾದ ವಿವಾದ ಮಾಡುತ್ತ ಹೊರಗೆ ಹೋದವ ಮರಳಿ ಬಂದಿಲ್ಲ ಎಂಬುದು ತಿಳಿಯಿತು. ನಂತರ ಸಂಜೀವಕುಮಾರನ ಮೊಬೈಲ್ ಕಾಲ್ ಸಿಡಿಆರ್ ಪರಿಶೀಲಿಸಿದಾಗ ಕೆಲವರು ಈ ಹಾವಿನ ವ್ಯವಹಾರ ಕುರಿತು ಜಗಳವಾಡಿರುವುದು ಪತ್ತೆಯಾಯಿತು. ಎಲ್ಲರನ್ನು ಕರೆದು ತನಿಖೆ ನಡೆಸಿದೆವು ಎಂದು ಸಿಪಿಐ ಶಂಕರಗೌಡ ಪಾಟೀಲ ತಿಳಿಸಿದರು.

ಕೊಲೆಯಾದ ಸಂಜೀವಕುಮಾರ ಹಾಗೂ ಕೊಲೆ ಮಾಡಿರುವ ರಾಮಣ್ಣ ಸೇರಿ ಎರಡು ತಲೆ ಹಾವೊಂದನ್ನು ತಂದಿದ್ದು, ಅದನ್ನು ರಾಮಣ್ಣನ ಮನೆಯಲ್ಲೇ ಇಟ್ಟಿದ್ದ. ಆ ಹಾವನ್ನು ರಾಮಣ್ಣನ ಬಳಿಯಿಂದ ಇವರಿಗೆ ಕೊಟ್ಟ ಶ್ರೀಮಂತ ಎಂಬ ವ್ಯಕ್ತಿ ಕೊಂಡು ಒಯ್ದಿದ್ದ. ಇದು ಸಂಜೀವಕುಮಾರಗೆ ತಿಳಿದಿರಲಿಲ್ಲ. ಹಾವು ರಾಮಣ್ಣನ ಬಳಿ ಇದೆ, ಕೊಡುತ್ತಿಲ್ಲ ಎಂದು ತಿಳಿದ ಸಂಜೀವಕುಮಾರ ನವೆಂಬರ್ 4ರಂದು ರಾಮಣ್ಣನ ಮನೆಗೆ ತೆರಳಿ ತಗಾದೆ ತೆಗೆದಿದ್ದ. ಆವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ರಾಮಣ್ಣನ ಮಗ ಬಲವಂತ ಮನೆಯಲ್ಲಿದ್ದ ಚಾಕುವಿನಿಂದ ಸಂಜೀವಕುಮಾರನ ಕತ್ತಿಗೆ ಇರಿದಿದ್ದಾನೆ. ನಂತರ ರಾಮಣ್ಣ ಸಹ ಮಚ್ಚಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸಂಜೀವಕುಮಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ರಾಮಣ್ಣ ಹಾಗೂ ಈತನ ಮಗ ಬಲವಂತ ಸೇರಿ ಕೌದಿಯಲ್ಲಿ ಶವ ಕಟ್ಟಿ ತಮ್ಮದೇ ಟಿವಿಎಸ್ ಬೈಕ್ ಮೇಲೆ ತಂದು ಪಟವಾದ ಹಳ್ಳದ ಸೇತುವೆ ಬಳಿ ಬಿಸಾಕಿದ್ದರು. ಕೊಲೆಯಾದ ಸಂಜೀವಕುಮಾರನ ಮೊಬೈಲ್ ರಾಮಣ್ಣನ ಬಳಿಯೇ ಇತ್ತು. ರಾಮನಣ್ಣನನ್ನು ಕರೆತಂದು ತನಿಖೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಅವರು ತಿಳಿಸಿದರು.

ಅಪರಾಧ ವಿಭಾಗದ ಪಿಎಸ್‍ಐ ಭೀಮರಾಯ ಪಾಟೀಲ, ಪಿಎಸ್‍ಐ ಪರಶುರಾಮ, ಸಿಬ್ಬಂದಿ ಕಿಶನ್ ಜಾಧವ, ರಾಜೇಂದ್ರ ರೆಡ್ಡಿ, ಕುಪೇಂದ್ರ, ಎಎಸ್‍ಐ ಸಲೀಮೊದ್ದೀನ್, ಸಯ್ಯದ್ ಈಸಾ, ಶ್ರೀಮಂತ ಜಮಾದಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು