ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಗ್ರಾಹಕರು ಕಂಗಾಲು, ಸಂಕಷ್ಟದಲ್ಲಿ ಹೋಟೆಲ್‌ ಉದ್ಯಮ

ಉಪಾಹಾರ, ಊಟದ ಬೆಲೆಯಲ್ಲಿ ಹೆಚ್ಚಳ
Last Updated 7 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೀದರ್‌: ಪೆಟ್ರೋಲ್‌, ಡಿಸೇಲ್‌ ಹಾಗೂ ಅಡುಗೆ ಅನಿಲ ಬೆಲೆ ಹೆಚ್ಚಳ ಹೋಟೆಲ್‌ ಉದ್ಯಮವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹೋಟೆಲ್‌ ಮಾಲೀಕರು ಆದಾಯ ಹಾಗೂ ವೆಚ್ಚ ಸರಿದೂಗಿಸಲು ಸಾಧ್ಯವಾಗದೆ ಚಿಂತೆಗೀಡಾದರೆ, ಉಪಾಹಾರಗಳ ಬೆಲೆ ಹೆಚ್ಚಳದಿಂದಾಗಿ ಗ್ರಾಹಕರು ಹೋಟೆಲ್‌ಗಳಿಗೆ ಬಂದು ಉಪಾಹಾರ ಸೇವಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.

ಸಾಮಾನ್ಯವಾಗಿ ದೀಪಾವಳಿಯ ಸಂದರ್ಭದಲ್ಲಿ ದಿನಸಿ ಬೆಲೆ ಹೆಚ್ಚಳವಾಗಿ ನಂತರ ಇಳಿಕೆಯಾಗುತ್ತದೆ. ಆದರೆ, ಈ ಬಾರಿ ದೀಪಾವಳಿಯಲ್ಲಿ ಏರುಮುಖ ಮಾಡಿರುವ ಅಗತ್ಯವಸ್ತುಗಳ ಬೆಲೆ ಈವರೆಗೂ ಕಡಿಮೆಯಾಗಿಲ್ಲ. ಉಪಾಹಾರ ಬೆಲೆ ಹೆಚ್ಚಿಸಿದರೆ ತಮ್ಮ ಹೋಟೆಲ್‌ಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಲಿದೆ ಎನ್ನುವ ಒಂದೇ ಕಾರಣಕ್ಕೆ ಕೆಲ ಹೋಟೆಲ್‌ಗಳು ನಷ್ಟ ಅನುಭವಿಸಿದರೂ ಮೊದಲಿನ ದರದಲ್ಲಿ ಉಪಾಹಾರ ಪೂರೈಸುತ್ತಿವೆ. ಇನ್ನು ಕೆಲ ಹೋಟೆಲ್‌ಗಳು ನಷ್ಟ ಭರಿಸಿಕೊಳ್ಳಲಾಗದೆ ₹ 5 ರಿಂದ ₹10 ಹೆಚ್ಚಳ ಮಾಡಿವೆ.

ಬೀದರ್‌ ನಗರದಲ್ಲಿರುವ ಹೋಟೆಲ್ ಮಾಲೀಕರು ಈಗಾಗಲೇ ಸಭೆ ಸೇರಿ ಊಟ, ಉಪಾಹಾರದ ಬೆಲೆ ಹೆಚ್ಚಿಸುವ ಪ್ರಸ್ತಾಪ ಮಾಡಿದ್ದಾರೆ. ನಗರದಲ್ಲಿ ಒಂದೊಂದು ಬಡಾವಣೆಯಲ್ಲಿ ಒಂದೊಂದು ರೀತಿಯ ಬೆಲೆ ಇದೆ. ಯಾರೂ ಒಮ್ಮತದ ನಿರ್ಧಾರಕ್ಕೆ ಬಂದಿಲ್ಲ. ಆದರೆ, ರಾಜ್ಯ ಬಜೆಟ್‌ ನಂತರ ಎಲ್ಲರೂ ಉಪಾಹಾರಗಳ ಬೆಲೆ ಹೆಚ್ಚಿಸಲಿದ್ದಾರೆ ಎಂದು ಹೋಟೆಲ್‌ ಮಾಲೀಕರು ಮುನ್ಸೂಚನೆ ನೀಡಿದ್ದಾರೆ.

ಕಾಫಿ- ಟೀಗೆ ₹ 2, ತಿಂಡಿ ತಿನಿಸುಗಳ ಬೆಲೆಯನ್ನು ₹ 2ರಿಂದ ₹5 ಹಾಗೂ ಊಟಕ್ಕೆ ₹ 10 ಹೆಚ್ಚಳ ಮಾಡಲು ನಿರ್ಧರಿಸಿದ್ದಾರೆ. ಹಾಲು ಹಾಗೂ ಮೊಸರು ಬೆಲೆ ₹ 2 ಏರಿಕೆಯಾಗಿದೆ. ಅಡುಗೆ ಅನಿಲದ ಬೆಲೆ ಇತ್ತೀಚಿನ ದಿನಗಳಲ್ಲಿ ಪ್ರತಿ ಸಿಲಿಂಡರ್‌ಗೆ ₹70 ಹೆಚ್ಚಳವಾಗಿದೆ. ಕಾಫಿ, ಟೀ, ಉಪಾಹಾರ, ಊಟದ ಬೆಲೆಯನ್ನು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಮೈಲೂರ ಕ್ರಾಸ್‌ನಲ್ಲಿರುವ ಕೃಷ್ಣದರ್ಶಿನಿ ಹೋಟೆಲ್‌ ಮಾಲೀಕ ಸತ್ಯಮೂರ್ತಿ ಹೇಳುತ್ತಾರೆ.

‘ಬೆಲೆ ನಿಯಂತ್ರಣ ಮಾಡಲಿದೆ ಎನ್ನುವ ಭರವಸೆಯಿಂದ ಕೇಂದ್ರ, ರಾಜ್ಯದಲ್ಲಿ ಬಿಜೆಪಿಗೆ ಬೆಂಬಲಿಸಿದ್ದೇವೆ. ಇದೀಗ ನಮ್ಮ ಸರ್ಕಾರವೇ ಬೆಲೆ ಹೆಚ್ಚಳ ಮಾಡುತ್ತಿರುವುದು ಬೇಸರ ಉಂಟು ಮಾಡಿದೆ’ ಎನ್ನುತ್ತಾರೆ.

ಬೀದರ್‌ನ ಕೆಇಬಿ ರಸ್ತೆಯಲ್ಲಿ ಉಪಾಹಾರ ಸೇವಿಸುತ್ತಿರುವ ವಿದ್ಯಾರ್ಥಿಗಳು

ಬೀದರ್‌ನ ಕೆಇಬಿ ರಸ್ತೆಯಲ್ಲಿ ಉಪಾಹಾರ ಸೇವಿಸುತ್ತಿರುವ ವಿದ್ಯಾರ್ಥಿಗಳು

ರಸ್ತೆ ಬದಿಯಲ್ಲಿ ಇಡ್ಲಿ, ದೋಸೆ ಬೆಲೆ ₹ 30ಕ್ಕೆ ಏರಿದರೆ, ಚಿಕ್ಕ ಹೋಟೆಲ್‌ಗಳಲ್ಲಿ ₹ 35ಕ್ಕೆ ಹೆಚ್ಚಳ ಮಾಡಲಾಗಿದೆ. ದೊಡ್ಡ ಹೋಟೆಲ್‌ಗಳು ಬೆಲೆಯಲ್ಲಿ ₹ 10 ಹೆಚ್ಚಿಸಿವೆ. ಊಟದ ಬೆಲೆ ₹80 ರಿಂದ ₹90ಕ್ಕೆ ಏರಿದೆ. ದೊಡ್ಡ ಹೋಟೆಲ್‌ಗಳಲ್ಲಿ ನೂರು ರೂಪಾಯಿ ದಾಟಿದೆ. ಇದರಿಂದಾಗಿ ನೌಕರಸ್ಥರು ಹಾಗೂ ಕೂಲಿ ಕಾರ್ಮಿಕರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.

ಜನ ಸಾಮಾನ್ಯರ ಬದುಕು ದುಸ್ತರ
ಔರಾದ್:
ಲಾಕ್‌ಡೌನ್ ನಂತರ ದಿನ ಬಳಕೆ ವಸ್ತುಗಳು ದುಬಾರಿಯಾಗಿ ಗ್ರಾಮೀಣ ಜನರ ಮೇಲೂ ಪರಿಣಾಮ ಆಗಿದೆ.

ನಾಲ್ಕು ತಿಂಗಳ ಹಿಂದೆ ₹ 60-70 ಇದ್ದ ಅಡಿಗೆ ಎಣ್ಣೆ ಈಗ ₹ 110 ರಿಂದ 140 ಆಗಿದೆ. ಬೇಳೆ ಕಾಳು, ಜೋಳ ಸೇರಿದಂತೆ ದಿನ ನಿತ್ಯ ಉಪಯೋಗಿಸುವ ಧಾನ್ಯಗಳ ಬೆಲೆಯೂ ಹೆಚ್ಚಾಗಿದೆ. ಮೊದಲಿನಂತೆ ಗ್ರಾಹಕರು ಖರೀದಿಗೆ ಉತ್ಸಾಹ ತೋರುತ್ತಿಲ್ಲ ಎಂದು ಕಿರಾಣಿ ವ್ಯಾಪಾರಿ ಸಂತೋಷ ಹೇಳುತ್ತಾರೆ.

ಮೊದಲು ₹ 50 ಕೊಟ್ಟರೆ ಖಾನಾವಳಿಯಲ್ಲಿ ಹೊಟ್ಟೆ ತುಂಬ ಊಟ ಕೊಡುತ್ತಿದ್ದರು. ಈಗ ಅದಕ್ಕೆ ₹ 80 ಕೊಡಬೇಕಾಗಿದೆ ಎಂದು ಬೇಸರದಿಂದ ನುಡಿಯುತ್ತಾರೆ ಇಲ್ಲಿಯ ಜಾನುವಾರು ಮಾರುಕಟ್ಟೆಗೆ ಬಂದಿದ್ದ ರೈತ ದಯಾನಂದ.

ಬೀದರ್‌ನ ಖಾನಾವಳಿಯಲ್ಲಿ ಊಟ ಮಾಡುತ್ತಿರುವಗ್ರಾಹಕರು
ಬೀದರ್‌ನ ಖಾನಾವಳಿಯಲ್ಲಿ ಊಟ ಮಾಡುತ್ತಿರುವಗ್ರಾಹಕರು

ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆಯಿಂದ ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಾಗಿ ಜನಸಾಮಾನ್ಯರು‌ ಹಾಗೂ ಮಧ್ಯಮ ವರ್ಗದ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅನಿಲ್ ಜಿರೋಬೆ ತಿಳಿಸಿದ್ದಾರೆ.

ಹೋಟೆಲ್‌ ಮಾಲೀಕರು ಆತಂಕದಲ್ಲಿ
ಭಾಲ್ಕಿ:
ಅಡುಗೆ ಎಣ್ಣೆ, ತರಕಾರಿ ಹಾಗೂ ಇತರೆ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದರಿಂದ ಹೋಟೆಲ್‌ ಸೇರಿದಂತೆ ರಸ್ತೆ ಬದಿಯಲ್ಲಿ ಕೈಗಾಡಿ ಇಟ್ಟುಕೊಂಡವರೂ ನಷ್ಟ ಅನುಭವಿಸುತ್ತಿದ್ದಾರೆ. ತೈಲ ಬೆಲೆ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆಯಲ್ಲೂ ಏರುಪೇರು ಆಗುತ್ತಿದೆ.

‘ಎಣ್ಣೆ, ತರಕಾರಿ ಇತರೆ ವಸ್ತುಗಳ ಬೆಲೆ ಏರಿಕೆ ಆಗಿದ್ದರೂ, ತಿಂಡಿಗಳ ಬೆಲೆ ಹೆಚ್ಚಿಸಿಲ್ಲ. ದರ ಹೆಚ್ಚಳ ಮಾಡಿದರೆ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗುತ್ತದೆ. ಪ್ರಸ್ತುತ ಹೋಟೆಲ್‌ ಕಾರ್ಮಿಕರು ಹಾಗೂ ದಿನಸಿ ವಸ್ತುಗಳ ಖರೀದಿಗೆ ಹೆಚ್ಚು ಹಣ ಖರ್ಚಾಗುತ್ತಿದೆ. ನಿತ್ಯ ₹400 ರಿಂದ ₹500 ನಷ್ಟ ಅನುಭವಿಸುತ್ತಿದ್ದೇವೆ’ ಎಂದು ಸದ್ಗುರು ಸ್ವೀಟ್‌ ಮಾಟ್‌೯ ಮಾಲೀಕ ಮಹ್ಮದ್‌ ಯಾಸಿನ್‌ ಹೇಳುತ್ತಾರೆ.

ಬೀದರ್ ಔರಾದ್ ಹೆದ್ದಾರಿ ಮೇಲೆ ಸಂತಪುರ ಬಳಿ ಇರುವಹೋಟೆಲ್‌ನಲ್ಲಿಗ್ರಾಹಕರುತಿಂಡಿ ತಿನ್ನುತ್ತಿರುವುದು
ಬೀದರ್ ಔರಾದ್ ಹೆದ್ದಾರಿ ಮೇಲೆ ಸಂತಪುರ ಬಳಿ ಇರುವಹೋಟೆಲ್‌ನಲ್ಲಿಗ್ರಾಹಕರುತಿಂಡಿ ತಿನ್ನುತ್ತಿರುವುದು

ಹುಮನಾಬಾದ್, ಹುಲಸೂರಲ್ಲಿ ಗ್ರಾಹಕರಿಗೆ ಬೆಲೆ ಹೆಚ್ಚಳದ ಬಿಸಿ ತಟ್ಟಿದೆ. ಲಾಕ್‌ಡೌನ್‌ ನಂತರ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಪ್ರವಾಸಿಗರು ಬರುತ್ತಿಲ್ಲ. ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಹೀಗಾಗಿ ಗ್ರಾಹಕರ ಕೊರತೆ ಹೆಚ್ಚಾಗಿದೆ.

ಹೋಟೆಲ್‌ ಮುಚ್ಚಿದರೆ ಹಲವು ಕುಟುಂಬಗಳು ಬೀದಿಗೆ ಬರಲಿವೆ. ಮುಂದುವರಿಸಿದರೆ ಹೋಟೆಲ್‌ ಮಾಲೀಕರು ದಿವಾಳಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಪ್‌ ಚಹಾಗೆ ₹ 7 ಬೆಲೆ
ಬಸವಕಲ್ಯಾಣದ ಚಹಾ ಹೋಟೆಲ್ ಗಳಲ್ಲಿ ಒಂದು ಕಪ್ ಚಹಾಗೆ ₹7 ಪಡೆಯುತ್ತಿದ್ದಾರೆ. ಸಣ್ಣ ಪ್ಲಾಸ್ಟಿಕ್ ಕಪ್ ಗಳಲ್ಲಿ ಚಹಾ ಕೊಟ್ಟರೂ ಇಷ್ಟೇ ಹಣ ಪಡೆಯಲಾಗುತ್ತಿದೆ. ಖಾನಾವಳಿಗಳ ಊಟದ ದರ ₹40 ಇದ್ದದ್ದು ಕೆಲವೆಡೆ ₹50 ಕೆಲವೆಡೆ, ಇನ್ನು ಕೆಲವೆಡೆ ₹55 ಆಗಿದೆ.

ದಿನಸಿ, ತರಕಾರಿ ಬೆಲೆಯಲ್ಲಿ ಏರಿಕೆ ಆಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಗಾಯದ ಮೇಲೆ ಬರೆ ಎಳೆದಿದೆ.

ಸಣ್ಣಪುಟ್ಟ ಅಂಗಡಿ ಇಟ್ಟುಕೊಂಡವರ ಜೀವನ ನಿರ್ವಹಣೆ ಕಷ್ಟವಾಗಿದ್ದು ಸರ್ಕಾರ ಬೆಲೆ ಏರಿಕೆ ತಡೆಯಬೇಕಾಗಿದೆ ಎಂದು ಗ್ರಾಹಕ ವಿಜಯಕುಮಾರ ಪಾಟೀಲ ಹೇಳುತ್ತಾರೆ.

ಭಾಲ್ಕಿಯ ಸದ್ಗುರು ಸ್ವೀಟ್‌ ಮಾರ್ಟ್‌ನಲ್ಲಿ ಉಪಹಾರ ಸೇವಿಸುತ್ತಿರುವಗ್ರಾಹಕರು
ಭಾಲ್ಕಿಯ ಸದ್ಗುರು ಸ್ವೀಟ್‌ ಮಾರ್ಟ್‌ನಲ್ಲಿ ಉಪಹಾರ ಸೇವಿಸುತ್ತಿರುವಗ್ರಾಹಕರು

ಪೂರಕ ಮಾಹಿತಿ:
ಮನ್ಮಥಪ್ಪ ಸ್ವಾಮಿ, ಬಸವರಾಜ ಪ್ರಭಾ, ಮನೋಜಕುಮಾರ ಹಿರೇಮಠ, ವೀರೇಶ ಮಠಪತಿ, ಮಾಣಿಕ ಭುರೆ, ನಾಗೇಶ ಪ್ರಭಾ, ಗುಂಡು ಅತಿವಾಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT