ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಕನ್ನಡ ಶಾಲೆಗಳ ಉಳಿವಿಗೆ ಹೋರಾಟ ನಡೆಸಲು ನಿರ್ಧಾರ

ಕನ್ನಡ ಶಾಲೆ ಆರಂಭಿಸಲು ಹಲವು ನಿಯಮ
Last Updated 21 ಫೆಬ್ರುವರಿ 2022, 12:11 IST
ಅಕ್ಷರ ಗಾತ್ರ

ಬೀದರ್: ರಾಜ್ಯದಲ್ಲಿ ಕನ್ನಡ ಶಾಲೆಗಳ ಉಳಿವಿಗೆ ಹೋರಾಟ ನಡೆಸಲು ಇಲ್ಲಿಯ ಕರ್ನಾಟಕ ಕಾಲೇಜಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪರ ಸಂಘಟನೆಗಳು, ಸಾಹಿತಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ನಿರ್ಧರಿಸಲಾಯಿತು.

ಹೋರಾಟಕ್ಕಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕನ್ನಡ ಸಂರಕ್ಷಣಾ ಸಮಿತಿ ರಚಿಸಲು ತೀರ್ಮಾನಿಸಲಾಯಿತು.

ಪಾಲಕರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿರುವುದು, ಸರ್ಕಾರದಿಂದಲೇ ಆಂಗ್ಲಮಾಧ್ಯಮ ಶಾಲೆ ಆರಂಭಿಸಿರುವುದು, ಕನ್ನಡ ಶಾಲೆ ಆರಂಭಿಸಲು ಹಾಗೂ ಮಾನ್ಯತೆ ನವೀಕರಿಸಲು ಹತ್ತು ಹಲವು ನಿಯಮಗಳನ್ನು ವಿಧಿಸಿರುವುದು ರಾಜ್ಯದಲ್ಲಿ ಕನ್ನಡ ಶಾಲೆಗಳು ಮುಚ್ಚಲು ಕಾರಣವಾಗಿವೆ ಎಂದು ಅನೇಕ ಪ್ರಮುಖರು ಸಭೆಯ ಗಮನ ಸೆಳೆದರು.

ಕನ್ನಡ ಶಾಲೆಗಳಿಗೆ ಸರಳವಾಗಿ ಅನುಮತಿ ಕೊಡಬೇಕು. 1995-2015 ರ ವರೆಗಿನ ಶಾಲೆಗಳನ್ನು ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಕಾಯ್ದೆಯಡಿ ಅನುದಾನಕ್ಕೆ ಒಳಪಡಿಸಬೇಕು. ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರ್ಕಾರದಿಂದ ಆಂಗ್ಲಮಾಧ್ಯಮ ಶಾಲೆಗಳನ್ನು ತೆರೆಯಬಾರದು. ಅನುದಾನ ರಹಿತ ಶಾಲೆಗಳಿಗೂ ಆರ್‍ಟಿಇ ಜಾರಿಗೊಳಿಸಬೇಕು ಎಂದು ಬೇಡಿಕೆ ಮಂಡಿಸಿದರು.

ಎರಡು ವರ್ಷದಿಂದ ಒಂದೂ ಹೊಸ ಕನ್ನಡ ಶಾಲೆಗೆ ಪರವಾನಗಿ ಕೊಟ್ಟಿಲ್ಲ. ನೂರೆಂಟು ಕಟ್ಟಳೆಗಳು ಹಾಕಿರುವುದರಿಂದ ಶಾಲೆಗಳ ನವೀಕರಣವೂ ಆಗುತ್ತಿಲ್ಲ. ಒಂದನೇ ತರಗತಿಯಿಂದಲೇ ಇಂಗ್ಲಿಷ್ ಬೋಧಿಸುತ್ತಿರುವ ಕಾರಣ ಕನ್ನಡ ಮಾಧ್ಯಮದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಸ್ಥಿತಿ ದಯನೀಯವಾಗಿದೆ ಎಂದು ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ನೋವಿನಿಂದ ನುಡಿದರು.

ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ಹತ್ತು ವರ್ಷಗಳಲ್ಲಿ ಕನ್ನಡ ಶಾಲೆಗಳು ಸಂಪೂರ್ಣ ಮುಚ್ಚಲಿವೆ. ಕನ್ನಡ ಉಳಿದರೆ ಮಾತ್ರ ನಾಡು, ಸಂಸ್ಕೃತಿ, ಪರಿಷತ್ತು ಎಲ್ಲವೂ ಉಳಿಯಲಿವೆ. ಕಾರಣ, ಕನ್ನಡ ಶಾಲೆಗಳ ಉಳಿವಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಮಾತನಾಡಿ, ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಪರಿಷತ್ತಿನಿಂದ ಎಲ್ಲ ಪ್ರಯತ್ನ ಮಾಡಲಾಗುವುದು. ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ಕನ್ನಡಿಗರೊಂದಿಗೆ ಹೋರಾಟ ನಡೆಸಲಾಗುವುದು. ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಭರವಸೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಹಿರಿಯ ಸಾಹಿತಿಗಳಾದ ಪಂಚಾಕ್ಷರಿ ಪುಣ್ಯಶೆಟ್ಟಿ, ಭಾರತಿ ವಸ್ತ್ರದ್, ಬಸವರಾಜ ಬಲ್ಲೂರ, ಸತ್ಯಮೂರ್ತಿ, ರಾಜೇಂದ್ರ ಮಣಗೇರಿ, ಶಾಂತಕುಮಾರ ಬಿರಾದಾರ, ಸಂಗಮೇಶ ಏಣಕೂರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT