ಬೀದರ್: ‘ವಿವಾದಿತ ಸ್ಥಳಗಳಲ್ಲಿ ಯಾರೂ ಕೂಡ ಗಣೇಶ ಮೂರ್ತಿ ಕೂರಿಸಬಾರದು. ಯಾವುದೇ ಜಾತಿ, ಧರ್ಮಕ್ಕೆ ಧಕ್ಕೆಯಾಗುವಂತಹ ಬಂಟಿಂಗ್ಸ್, ಬ್ಯಾನರ್ ಹಾಕುವಂತಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಗಣೇಶ ಉತ್ಸವ ಹಾಗೂ ಈದ್ ಮಿಲಾದ್ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.
‘ಆಯಾ ಗಣೇಶ ಮಂಡಳಿ ಏಕಗವಾಕ್ಷಿ ಮೂಲಕ ಅನುಮತಿ ಪಡೆದುಕೊಳ್ಳಬೇಕು. ಸಾರ್ವಜನಿಕ ಗಣೇಶ ಕೂರಿಸುವವರು ಒಂದು ಸಮಿತಿ ರಚಿಸಿಕೊಳ್ಳಬೇಕು. ತಮ್ಮ ಸ್ವಯಂ ಸೇವಕರಿಗೆ ಗುರುತಿನ ಕಾರ್ಡ್‌ಗಳನ್ನು ಕೊಡಬೇಕು’ ಎಂದು ತಿಳಿಸಿದರು.
‘ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಗಣಪತಿಗಳನ್ನು ಕೂರಿಸುವ ಸ್ಥಳಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಸಾರ್ವಜನಿಕರಿಗೆ ಟ್ರಾಫಿಕ್ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಲೌಡ್ ಸ್ಪೀಕರ್ ಹಚ್ಚಬಾರದು. ಹೆಚ್ಚಿನ ಶಬ್ದವನ್ನು ಇಟ್ಟು ಸಾರ್ವಜನಿಕರಿಗೆ ತೊಂದರೆ ಕೊಡಬಾರದು’ ಎಂದರು.
‘ಡಿಜೆಗಳಿಗೆ ಹೆಚ್ಚು ಸೌಂಡ್ ಇಡಬಾರದು. ಮೆರವಣಿಗೆಯಲ್ಲಿ ಯುವಕರು ಬೈಕ್ ಸೈಲೆನ್ಸರ್ ತೆಗೆದು ಹೆಚ್ಚು ಶಬ್ದ ಮಾಡುತ್ತ ಬೈಕ್‌ಗಳನ್ನು ಓಡಿಸದಂತೆ ನೋಡಿಕೊಳ್ಳಬೇಕು. ಯಾವುದೇ ವಿದ್ಯುತ್ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಜಿಲ್ಲೆಯಲ್ಲಿ ಎಲ್ಲರೂ ಸೇರಿ ಶಾಂತಿಯುತವಾಗಿ ಆಚರಿಸಬೇಕು’ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಮೊಹಮ್ಮದ್ ಗೌಸ್ ಮಾತನಾಡಿ,‘ಬೀದರ್‌ನಲ್ಲಿ ಎಲ್ಲರೂ ಸೇರಿಕೊಂಡು ಕಾರ್ಯಕ್ರಮ ಮಾಡುತ್ತೇವೆ. ನಮ್ಮಲ್ಲಿ ಯಾವುದೇ ಭೇದಭಾವ ಇಲ್ಲ. ಪ್ರತಿವರ್ಷದಂತೆ ಈ ವರ್ಷವೂ ಎರಡೂ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸೋಣ’ ಎಂದು ಹೇಳಿದರು.
‘ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಕೇವಲ ಪೊಲೀಸರದ್ದು ಮಾತ್ರವಲ್ಲ. ಸಾರ್ವಜನಿಕರ ಪಾತ್ರವೂ ಇದೆ. ಗಣೇಶ ಮಂಡಳಿಯವರು ತಮ್ಮ ಸ್ವಯಂಸೇವಕರನ್ನು ನಿಯೋಜಿಸಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಮಾಡಬೇಕು ಎಂದು ಸಲಹೆ ನೀಡಿದರು.
ಗಣೇಶ ಮಹಾಮಂಡಳದ ಮುಖಂಡ ನಂದಕಿಶೋರ ವರ್ಮಾ ಮಾತನಾಡಿ, ‘ಎಲ್ಲ ಗಣೇಶ ಮಹಾಮಂಡಳಗಳ ಪಟ್ಟಿಯನ್ನು ಪೊಲೀಸ್ ಇಲಾಖೆಗೆ ಕೊಡುತ್ತೇವೆ. ಪ್ರತಿ ವರ್ಷದಂತೆ ಈ ವರ್ಷವೂ ಪೊಲೀಸ್ ಇಲಾಖೆಯವರು ನಮಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರ, ಡಿವೈಎಸ್ಪಿ ಶಿವನಗೌಡ ಪಾಟೀಲ, ಪತ್ರಕರ್ತ ಶಿವಶರಣಪ್ಪ ವಾಲಿ, ವಿವಿಧ ಗಣೇಶ ಮಂಡಳಗಳ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.