ಶನಿವಾರ, ಮಾರ್ಚ್ 25, 2023
29 °C
3 ಎಕರೆಯಲ್ಲಿ ₹ 5 ಲಕ್ಷ ಗಳಿಕೆ!

ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ: ರೈತನ ಕೈಹಿಡಿದ ಚೆಂಡು ಹೂ

ಗಿರಿರಾಜ ಎಸ್.ವಾಲೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ಸಮೀಪದ ಕಟ್ಟಿ ತುಗಾಂವ್ ಗ್ರಾಮದ ಯುವ ರೈತ ನೀಲಕಂಠ ಭಂಡೆ ಅವರು ತಮ್ಮ ಒಂದುವರೆ ಎಕರೆ ಜಮೀನಿನಲ್ಲಿ ಚೆಂಡು ಹೂ ಬೆಳೆದು ಕಡಿಮೆ ಅವಧಿಯಲ್ಲಿ ₹5 ಲಕ್ಷದಷ್ಟು ಆದಾಯ ಜೇಬಿಗೆ ಇಳಿಸಿಕೊಂಡಿದ್ದಾರೆ.

ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡ ನೀಲಕಂಠ ಅವರು, ಉತ್ತಮ ಆದಾಯ ಪಡೆಯುತ್ತಿದ್ದಾರೆ. ಆಗಸ್ಟ್‌ನಲ್ಲಿ ಚೆಂಡು ಹೂವಿನ ಸಸಿ ನಾಟಿ ಮಾಡಿದ್ದು, ದಸರಾ ಹಬ್ಬದ ವೇಳೆ ₹2 ಲಕ್ಷ ಆದಾಯ ಬಂದಿತ್ತು. ದೀಪಾವಳಿಯಲ್ಲಿ ಪ್ರತಿ ಕ್ವಿಂಟಾಲ್‌ಗೆ ₹8 ಸಾವಿರಕ್ಕೂ ಅಧಿಕ ದರದಲ್ಲಿ ಮಾರಾಟ ಆಯಿತು. ಹೀಗಾಗಿ, ₹3 ಲಕ್ಷದಷ್ಟು ಆದಾಯ ಪಡೆದಿದ್ದಾರೆ ಪುಷ್ಪ ಕೃಷಿಕ ನೀಲಕಂಠ.

ಒಂದೂವರೆ ಎಕರೆಯಲ್ಲಿ ನಾಟಿ ಮಾಡಿದ ಚೆಂಡು ಹೂ ಬೆಳೆಗೆ 2 ತಿಂಗಳಲ್ಲಿ ಬೀಜ, ರಸಗೊಬ್ಬರ, ಇತರೆ ವೆಚ್ಚ ಸೇರಿ ₹2 ಲಕ್ಷ ಖರ್ಚಾಗಿದೆ. ಕೇವಲ 3 ತಿಂಗಳಲ್ಲಿ ₹5 ಲಕ್ಷದಷ್ಟು ಆದಾಯ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

‘ರೋಗ ನಿಯಂತ್ರಣಕ್ಕೆ ಗುಣಮಟ್ಟದ ಔಷಧ ಸಿಂಪರಣೆ, ಕಳೆ ಕಿಳುವುದು, ಗೊಬ್ಬರ ಹಾಕಲು ಕೂಲಿಗಳ ಮೊರೆ ಹೊಗಲಿಲ್ಲ. ನಾನೇ ಈ ಕೆಲಸಗಳನ್ನು ಮಾಡಿದ್ದೇನೆ. ಇದರಿಂದ ಕೂಲಿ ವೆಚ್ಚದ ತಗ್ಗಿದೆ. ಇಳುವರಿ ಪ್ರಮಾಣ ಏರಿಕೆಯಾಗಿದ್ದು, ಉತ್ತಮ ಬೆಲೆ ಸಿಕ್ಕರೆ ವರ್ಷದ ಗಳಿಕೆಯನ್ನು ಚೆಂಡು ಹೂ ಕೃಷಿ ಮೂಲಕ 4 ತಿಂಗಳಲ್ಲೇ ಸಂಪಾದಿಸಬಹುದು’ ಎನ್ನುತ್ತಾರೆ ರೈತ ಪರಮೇಶ್ವರ ಚಟ್ನಾಳ.

ಪೂರ್ಣವಾಗಿ ಬೆಳೆದು, ಅರಳಿದ ಚೆಂಡು ಹೂವನ್ನು ನೆರೆಯ ಆಂಧ್ರಪ್ರದೇಶ ಹಾಗೂ ಕಲಬುರಗಿಯ ಮಾರುಕಟ್ಟೆಗೆ ರವಾನಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ₹80ಕ್ಕೆ ಮಾರಾಟವಾಗುತ್ತಿದೆ. ದಸರಾ ಹಬ್ಬಕ್ಕಿಂತಲೂ ಈಗ ಬೇಡಿಕೆ
ಹೆಚ್ಚಾಗಿದೆ.

ಕೃಷಿ ಉತ್ಪನ್ನಗಳ ಬೆಲೆ ಏರಿಳಿತ, ಪ್ರಕೃತಿ ವಿಕೋಪ, ರೋಗಗಳ ಕಾಟ, ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಕೃಷಿಯಿಂದ ಬಹಳಷ್ಟು ಜನ ವಿಮುಖರಾಗುತ್ತಿದ್ದಾರೆ. ಆದರೆ, ಯೋಜನಾಬದ್ಧ ಹಾಗೂ ಆಧುನಿಕ ಪದ್ಧತಿ ಅಳವಡಿಸಿಕೊಂಡ ಕೃಷಿ ಯಿಂದಲೂ ಅಧಿಕ ಲಾಭ ಗಳಿಸಬಹುದು ಎಂಬುದನ್ನು ಯುವ ರೈತ ನೀಲಕಂಠ ಸಾಧಿಸಿ ತೋರಿಸಿದ್ದಾರೆ ಎಂದು ಗ್ರಾಮಸ್ಥರು ಪ್ರಶಂಸಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು