ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಶಿಕ್ಷಣ ನೀಡಿ ಬೀದರ್ ಜಿಲ್ಲೆಯ ಘನತೆ ಉಳಿಸಿ: ಬಂಡೆಪ್ಪ ಕಾಶೆಂಪೂರ

Last Updated 2 ಜೂನ್ 2019, 13:28 IST
ಅಕ್ಷರ ಗಾತ್ರ

ಬೀದರ್: ‘ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಶೈಕ್ಷಣಿಕ ಪ್ರಗತಿ ಸಾಧಿಸಬೇಕು. ಈ ಮೂಲಕ ಜಿಲ್ಲೆಯ ಐತಿಹಾಸಿಕ ಘನತೆಯನ್ನೂ ಉಳಿಸಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಹಮನಿ ಸುಲ್ತಾನರ ಕಾಲದಲ್ಲಿ ನಿರ್ಮಾಣಗೊಂಡ ಮೆಹಮೂದ್‌ ಗವಾನ್‌ ವಿಶ್ವವಿದ್ಯಾಲಯ ದಕ್ಷಿಣ ಭಾರತದ ಮೊದಲ ವಿಶ್ವವಿದ್ಯಾಲಯವಾಗಿದೆ. 14ನೇ ಶತಮಾನದಿಂದಲೂ ಬೀದರ್‌ ಜಿಲ್ಲೆ ಶೈಕ್ಷಣಿಕ ತಾಣವಾಗಿದೆ. ಅದರ ಹಿರಿಮೆಯನ್ನು ಉಳಿಸಿಕೊಂಡು ಹೋಗಬೇಕಾಗಿದೆ’ ಎಂದು ಹೇಳಿದರು.

‘ಬೀದರ್‌ ಜಿಲ್ಲೆ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯದ ಜಿಲ್ಲೆಗಳ ಸಾಲಿನಲ್ಲಿ ಕೊನೆಯ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿತ್ತು. ಈ ವರ್ಷ ಸ್ವಲ್ಪ ಸುಧಾರಣೆ ಕಂಡಿದೆ. ಫಲಿತಾಂಶದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕು. ಜಿಲ್ಲೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಅನುಕೂಲವಾಗುವಂತೆ ಸರ್ಕಾರದ ಅಗತ್ಯವಿರುವ ನೆರವು ಒದಗಿಸಲಾಗುವುದು. ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುವ ದಿಸೆಯಲ್ಲಿ ಅಧಿಕಾರಿಗಳು ಹಾಗೂ ಶಿಕ್ಷಕರು ಕಾರ್ಯನಿರ್ವಹಿಸಬೇಕು’ ಎಂದರು.

‘ಶಿಕ್ಷಕರು ಮಕ್ಕಳ ಮಾನಸಿಕ ಸಾಮರ್ಥ್ಯವನ್ನು ಅರಿತುಕೊಂಡು ಬೋಧಿಸಿದರೆ ಮಕ್ಕಳು ಯಶಸ್ಸು ಕಾಣುತ್ತಾರೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ನೀಡುವ ಮೂಲಕ ಜೀವನದಲ್ಲಿ ಉನ್ನತ ಸಾಧನೆ ಮಾಡುವಂತೆ ಪ್ರೇರೇಪಿಸಬೇಕು’
ಎಂದರು.

‘ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇಕಡ 90ಕ್ಕಿಂತ ಅಧಿಕ ಅಂಕ ಪಡೆದ ಮಕ್ಕಳು ಆರ್ಥಿಕವಾಗಿ ಹಿಂದುಳಿದಿದ್ದರೆ ಆಯ್ದ ಕಾಲೇಜುಗಳಲ್ಲಿ ಉಚಿತ ಪ್ರವೇಶ ನೀಡುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಸಂಸದ ಭಗವಂತ ಖೂಬಾ ಮಾತನಾಡಿ, ‘ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕಾಗುತ್ತದೆ. ಸತತ ಅಧ್ಯಯನ ಹಾಗೂ ಪರಿಶ್ರಮದಿಂದ ಮಾತ್ರ ಸಾಧನೆಯತ್ತ ಮುಂದುವರಿಸಲು ಸಾಧ್ಯವಿದೆ. ಪ್ರತಿಭಾ ಪುರಸ್ಕಾರದಂತಹ ಸಮಾರಂಭಗಳು ಮುಂದಿನ ಯುವ ಪೀಳಿಗೆಗೆ ಪ್ರೇರಣೆ ನೀಡುತ್ತವೆ. ಸಾಧನೆ ಮಾಡುವ ಛಲಗಾರಿಕೆಯನ್ನು ಜಾಗೃತಗೊಳಿಸುತ್ತದೆ’ ಎಂದು ತಿಳಿಸಿದರು.

‘ಶಿಕ್ಕ್ಷಣ ವ್ಯಕ್ತಿಯ ಬದುವಿನ ಅವಿಭಾಜ್ಯ ಅಂಗವಾಗಿದೆ. ಶಿಕ್ಷಣದ ಮೂಲಕ ಜ್ಞಾನ ವೃದ್ಧಿಸಿಕೊಂಡು ಸಮಾಜೋಪಕಾರಿ ಕಾರ್ಯಗಳನ್ನು ಮಾಡಬೇಕು’ ಎಂದು ಸಲಹೆ ನೀಡಿದರು.

‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೋಷಕರು ಹಾಗೂ ಶಿಕ್ಷಕರ ನಿರಂತರ ಪ್ರಯತ್ನದಿಂದ ಮಕ್ಕಳು ಸಾಧನೆ ಹೆಜ್ಜೆ ಹಾಕುತ್ತಿದ್ದಾರೆ. ಇಂದು ಪಠ್ಯ ವಿಷಯಗಳಿಗೆ ಮಾತ್ರ ಒತ್ತು ಕೊಡಲಾಗುತ್ತಿದೆ. ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು. ಆಗ ಮಾತ್ರ ಮಕ್ಕಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಧೃಡರಾಗಿರುತ್ತಾರೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಂಡಿತ ಚಿದ್ರಿ ಮಾತನಾಡಿ, ‘ಪಾಲಕರು ಹಾಗೂ ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜತೆ ಉತ್ತಮ ಸಂಸ್ಕಾರ ನೀಡಬೇಕು. ಅಂದಾಗ ಮಾತ್ರ ಮಕ್ಕಳು ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯವಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಮಾತನಾಡಿದರು.

ಸ್ವಾಮಿ ವಿವೇಕಾನಂದ ಆಶ್ರಮದ ಜೋತಿರ್ಮಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಎಂ.ಎನ್. ಚಂದ್ರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಎಂ.ಪತ್ತಾರ, ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್, ವೀಣಾ ಶಣೈ , ಚಂದ್ರಕಾಂತ ಪಾಟೀಲ, ವಿಜಯಕುಮಾರ ಪಾಟೀಲ ಯರನಳ್ಳಿ ಇದ್ದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿ ಶಾಲೆಯ ಒಬ್ಬ ವಿದ್ಯಾರ್ಥಿ ಹಾಗೂ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದ ಶಾಲೆಯ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಾಟ್ಯಶ್ರೀ ನೃತ್ಯಾಲಯದ ಮಕ್ಕಳು ಆಕರ್ಷಕ ನೃತ್ಯ ಪ್ರದರ್ಶಿಸಿದರು.

ದೇವಿದಾಸ ಜೋಶಿ ನಿರೂಪಿಸಿದರು. ಪರಮೇಶ್ವರ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT