ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷವೇ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆರಂಭ

ಎರಡು ಕೋರ್ಸ್‍ಗಳಲ್ಲಿ ಪ್ರವೇಶ: ಪ್ರಯೋಜನಕ್ಕೆ ಮನವಿ
Last Updated 14 ಅಕ್ಟೋಬರ್ 2022, 13:20 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ಜನಪ್ರತಿನಿಧಿಗಳ ಪ್ರಯತ್ನ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಇತರ ಸಂಘ ಸಂಸ್ಥೆಗಳ ಹೋರಾಟದ ಫಲವಾಗಿ ಕೊನೆಗೂ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಪ್ರಸಕ್ತ ಸಾಲಿನಿಂದಲೇ ಆರಂಭವಾಗಲಿದೆ.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪಕ್ಕದಲ್ಲಿ ನಿರ್ಮಿಸಲಾದ ಕಟ್ಟಡದಲ್ಲಿ 2022-23ನೇ ಶೈಕ್ಷಣಿಕ ವರ್ಷದಿಂದ ಕಾಲೇಜು ಪ್ರಾರಂಭವಾಗಲಿದೆ. 2016 ರಲ್ಲಿ ಬೀದರ್‍ಗೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಲಾಗಿತ್ತು. ಆದರೆ, ಕಾರಣಾಂತರದಿಂದ ಕಾಲೇಜು ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿತ್ತು. ಬಳಿಕ ಪರಿಷತ್ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಆಡಳಿತದ ಗಮನ ಸೆಳೆದಿತ್ತು.

ಇದೀಗ ಐದು ಎಕರೆ ಪ್ರದೇಶದಲ್ಲಿ ಕಾಲೇಜು ಹಾಗೂ ಕೆಕೆಆರ್‌ಡಿಬಿ ಅನುದಾನದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಹಾಗೂ ಆರ್ಟಿಫಿಷಿಯಲ್ ಇಂಟಲಜೆನ್ಸಿ ಹಾಗೂ ಡಾಟಾ ಸೈನ್ಸ್ ಕೋರ್ಸ್‍ಗಳಿಗೆ ಅನುಮೋದನೆ ದೊರೆತಿದೆ. ಕಾಲೇಜು ಕೋಡ್ ‘ಇ292’ ಆಗಿದೆ ಎಂದು ಹೇಳಿದ್ದಾರೆ.

ಸಿಇಟಿ ಮೂಲಕ ಕೋರ್ಸ್‍ಗಳಿಗೆ ಕಾಲೇಜು ಆಯ್ಕೆ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಅಕ್ಟೋಬರ್ 22 ಕೊನೆಯ ದಿನಾಂಕವಾಗಿದೆ. ಮೊದಲ ಸುತ್ತಿನಲ್ಲೇ ಬೀದರ್ ಸರ್ಕಾರಿ ಕಾಲೇಜನ್ನು ಮಾಡಿಕೊಳ್ಳಬಹುದು. ಕಾಲೇಜಿನ ಪ್ರವೇಶದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಶೇ 80 ರಷ್ಟು ಮೀಸಲಾತಿ ಇದೆ.

ಜಿಲ್ಲೆಯ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸದ್ಯ ಆರಂಭವಾಗಲಿರುವ ಕೋರ್ಸ್‍ಗಳ ಪ್ರಯೋಜನ ಪಡೆಯಬೇಕು. ಬರುವ ದಿನಗಳಲ್ಲಿ ಕಾಲೇಜಿನಲ್ಲಿ ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ಸ್ ಆ್ಯಂಡ್ ಎಲೆಕ್ಟ್ರಾನಿಕ್ಸ್, ಕಮರ್ಷಿಯಲ್ ಪ್ರಾಕ್ಟಿಸ್ ಸೇರಿದಂತೆ ವಿವಿಧ ಕೋರ್ಸ್‍ಗಳನ್ನು ಆರಂಭಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್ ತಿಳಿಸಿದ್ದಾರೆ. ತಿಳಿಸಿದ್ದಾರೆ.

ಈಗಾಗಲೇ ಅನುಮೋದನೆ ದೊರೆತ ಕಾರಣ ಪ್ರಸಕ್ತ ಸಾಲಿನಲ್ಲಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಹಾಗೂ ಆರ್ಟಿಫಿಷಿಯಲ್ ಇಂಟಲಜೆನ್ಸಿ ಹಾಗೂ ಡಾಟಾ ಸೈನ್ಸ್ ಕೋರ್ಸ್‍ಗಳಲ್ಲಿ ತಲಾ 60 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುವುದು. ನುರಿತ, ಅನುಭವಿ ಉಪನ್ಯಾಸಕರೊಂದಿಗೆ ತರಗತಿಗಳನ್ನು ಪ್ರಾರಂಭಿಸಲಾಗುವುದು. ಹಾಸ್ಟೇಲ್ ಸಹ ಶುರು ಮಾಡಲಾಗುವುದು ಎಂದು ಕಾಲೇಜಿನ ಪ್ರಾಚಾರ್ಯ ದೇವೇಂದ್ರ ಹಂಚೆ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9611894797ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT