ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಜಿಲ್ಲೆಯಲ್ಲಿ ಮೂರು ದಿನ ಪ್ರಖರ ಬಿಸಿಲು, ಜೂನ್ 12ಕ್ಕೆ ಮುಂಗಾರು ಪ್ರವೇಶ

Last Updated 22 ಮೇ 2020, 19:45 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಇನ್ನೂ 20 ದಿನ ಸುಡು ಬಿಸಿಲು ಇರಲಿದೆ. ಬರುವ ಮೂರು ದಿನ ಪ್ರಖರ ಬಿಸಿಲು ಬೀಳಲಿದ್ದು, ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 3.30 ರ ವರೆಗೆ ಸಾರ್ವಜನಿಕರು ಮನೆಗಳಿಂದ ಹೊರಗೆ ಬರುವುದನ್ನು ಕಡಿಮೆ ಮಾಡಬೇಕು ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಶನಿವಾರ 41 ಡಿಗ್ರಿ ಸೆಲ್ಸಿಯಸ್, ಭಾನುವಾರ ಹಾಗೂ ಸೋಮವಾರ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ನಿರೀಕ್ಷೆ ಇದೆ. ಕನಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಬೆಳಗಾಗುತ್ತಲೇ 30 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲಿನ ಪ್ರಖರತೆ ಇರುತ್ತಿದೆ. ಮಧ್ಯಾಹ್ನದ ವೇಳೆಗೆ ಇನ್ನಷ್ಟು ಹೆಚ್ಚಾಗುತ್ತಿದೆ. ನೆತ್ತಿ ಸುಡುವ ಬಿಸಿಲು ಈಗಾಗಲೇ ಜನರನ್ನು ಕಂಗೆಡಿಸಿದೆ.

‘ಅಂಪನ್ ಚಂಡ ಮಾರುತದ ಪ್ರಭಾವ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಮಳೆ ಸುರಿಯುವುದಿರಲಿ, ಆಕಾಶದಲ್ಲಿ ಮೋಡಗಳು ಸಹ ಕಾಣಿಸಿಕೊಳ್ಳಲಿಲ್ಲ. ಆದರೆ ಬಿಸಿ ಗಾಳಿ ಬೀಸಿದೆ. ಇನ್ನು ಮೂರು ದಿನ 8 ಕಿ.ಮೀ ವೇಗದಲ್ಲಿ ಬಿಸಿಗಾಳಿ ಬೀಸಲಿದೆ. ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 3.30ರ ವರೆಗೆ ಮನೆಯಿಂದ ಹೊರಗಡೆ ಓಡಾಡುವುದು ಮಾಡಬಾರದು’ ಎಂದು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ತಜ್ಞ ಬಸವರಾಜ ಬಿರಾದಾರ ತಿಳಿಸಿದ್ದಾರೆ.

‘ಕೇರಳದಲ್ಲಿ 1ನೇ ತಾರಿಖಿಗೆ ಮುಂಗಾರು ಪ್ರವೇಶ ಮಾಡಿದರೆ ಬೀದರ್‌ ಜಿಲ್ಲೆಗೆ 7ರಂದ ಮಳೆ ಶುರುವಾಗುತ್ತದೆ. ಆದರೆ ಈ ಬಾರಿ ಮುಂಗಾರು ಕೇರಳದಲ್ಲೇ ಜೂನ್ 7ಕ್ಕೆ ಪ್ರವೇಶಿಸುತ್ತಿರುವ ಕಾರಣ ಬೀದರ್‌ ಜಿಲ್ಲೆಗೆ 12ಕ್ಕೆ ಬರಲಿದೆ. ಮಧ್ಯಪ್ರದೇಶ, ಉತ್ತರಪ್ರದೇಶ, ಜಾರ್ಖಂಡದಲ್ಲಿ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್ ಮೇಲೆ ಹೋದರೆ ಹೆಚ್ಚು ಆವಿಯಾಗಿ ಈ ಪ್ರದೇಶದಲ್ಲಿ ಚೆನ್ನಾಗಿ ಮಳೆ ಬರಲಿದೆ’ ಎಂದು ಹೇಳಿದ್ದಾರೆ.

‘ಜಿಲ್ಲೆಯಾದ್ಯಂತ ಒಂದು ತಿಂಗಳಿಂದ ಧಗೆಯಲ್ಲಿ ಬಳಲಿರುವ ಜನರು ನಾಲ್ಕು ದಿನಗಳಿಂದ ಮತ್ತಷ್ಟು ಬಿಸಿಲಿನ ತಾಪ ಅನುಭವಿಸುತ್ತಿದ್ದಾರೆ. ಆ್ಯಸಿಟಿಡಿ, ಗ್ಯಾಸ್ಟ್ರಿಕ್‌ ಹಾಗೂ ಅಸ್ತಮಾ ರೋಗಿಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಅಂಥವರು ಮನೆಯಲ್ಲಿ ಇರುವುದೇ ಲೇಸು. ಸಾಧಾರಣ ತಣ್ಣನೆಯ ನೀರು ಸೇವಿಸಬೇಕು’ ಎಂದು ಆಯುರ್ವೇದ ವೈದ್ಯ ಡಾ.ಶಿವಕುಮಾರ ನೇಳಗೆ ಸಲಹೆ ನೀಡಿದ್ದಾರೆ.

‘ಬಿಸಿಲಿಗೆ ಶರೀರದಲ್ಲಿನ ಸೋಡಿಯಂ ಮತ್ತು ಪೊಟ್ಯಾಶಿಯಂ ಅಂಶ ಕಡಿಮೆ ಆಗಿ ದೇಹ ನಿತ್ರಾಣದ ಸ್ಥಿತಿಗೆ ತಲುಪುವ ಸಾಧ್ಯತೆ ಇರುತ್ತದೆ. ಪ್ರತಿಯೊಬ್ಬರು ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಹೆಚ್ಚು ನೀರು ಕುಡಿಯಬೇಕು. ಹಣ್ಣಿನ ರಸ, ಮಜ್ಜಿಗೆ, ದ್ರವ ಆಹಾರ ಸೇವಿಸುವುದು ಉತ್ತಮ. ಮನೆಯಿಂದ ಹೊರಗಡೆ ಹೋಗಬೇಕಾದ ಸಂದರ್ಭ ಬಂದರೆ ತಲೆ ಮೇಲೆ ಟೊಪ್ಪಿಗೆ ಧರಿಸಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೋಗಬೇಕು. ಮಹಿಳೆಯರು ಕೊಡೆ ಬಳಸುವುದು ಒಳ್ಳೆಯದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT