ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ- ಮುಸ್ಲಿಂ ಭಾವೈಕ್ಯದ ಸ್ಮಾರಕ: 'ಸಂಜೀವಿನಿ' ಸಮಾಧಿ

ಹೊಳಸಮುದ್ರದ ಸಂತ ಹರಿನಾಥ ಮಹಾರಾಜರ
Last Updated 12 ಜನವರಿ 2020, 19:30 IST
ಅಕ್ಷರ ಗಾತ್ರ

ಕಮಲನಗರ: ಕಲ್ಯಾಣ ಕರ್ನಾಟಕದ ಬೀದರ್ ಜಿಲ್ಲೆಯ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಹೊಳಸಮುದ್ರ ಗ್ರಾಮದಲ್ಲಿ ಒಂದು ಐತಿಹಾಸಿಕ ಸ್ಮಾರಕವಿದೆ.

17ನೇ ಶತಮಾನದಲ್ಲಿ ಸಮಾಜ ಸುಧಾರಕ, ಪವಾಡ ಪುರುಷ, ಸಂತ ಹರಿನಾಥ ಕೇಶವನಾಥ ಮಹಾರಾಜರು ಜೀವಂತ ಸಮಾಧಿಯಾಗಿದ್ದರು. ಇವರ ಸಮಾಧಿ ಈಗ ಸ್ಮಾರಕವಾಗಿದ್ದು, ಅನೇಕ ಐತಿಹಾಸಿಕ ವಿಷಯಗಳನ್ನು ಒಳಗೊಂಡಿದೆ.

ಹೈದರಾಬಾದ್ ನಿಜಾಮರ ಆಡಳಿತದಲ್ಲಿ ಕಂದಾಯ ಸಂಗ್ರಹಿಸುವ ಸುಂಕಿಗರು ಹೊಳಸಮುದ್ರ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಂತ ಹರಿನಾಥ ಮಹಾರಾಜರ ಸಮಾಜ ಸೇವೆ, ಪವಾಡಗಳನ್ನು ಕಂಡು ಮಹಾ ರಾಜರ ಶಿಷ್ಯರಾಗುತ್ತಾರೆ. ಈ ವಿಷಯ ತಿಳಿದು ನಿಜಾಮನೂ ಹರಿನಾಥರ ಪ್ರಭಾವಕ್ಕೆ ಒಳಗಾಗಿದ್ದನು ಎಂಬ ಮಾಹಿತಿ ಇಂದಿಗೂ ಗ್ರಾಮಸ್ಥರಲ್ಲಿ ಜೀವಂತವಾಗಿದೆ.

ಸಂತ ಹರಿನಾಥ ಮಹಾರಾಜರು ಜೀವಂತ ಸಮಾಧಿ ಪಡೆದ ನಂತರ, ನಿಜಾಮನು ತನ್ನ ಕರಕುಶಲ ಕರ್ಮಿಗಳನ್ನು ಹೊಳಸಮುದ್ರಕ್ಕೆ ಕಳುಹಿಸಿ, ಶಿಲ್ಪಕಲೆ ಯಲ್ಲಿಯೇ ಸಮಾಧಿ ನಿರ್ಮಾಣಕ್ಕೆ ಕಾರಣನಾದನು ಎನ್ನಲಾಗಿದೆ. ಇದು ಕೇವಲ ಸಮಾಧಿಯಾಗಿರದೆ, ಹಿಂದೂ-ಮುಸ್ಲಿಂ ಶಿಲ್ಪಕಲೆಯ ಸಂಯೋಜನೆಯನ್ನು ಒಳಗೊಂಡ ಸ್ಮಾರಕವಾಗಿದೆ.

ಭಾವೈಕ್ಯದಲ್ಲಿ ನಂಬಿಕೆಯಿಟ್ಟಿದ್ದ ಹರಿನಾಥ ಮಹಾರಾಜರ ನೆನಪಿಗಾಗಿ ಪ್ರತಿವರ್ಷ ಕಾರ್ತೀಕ ಪೂರ್ಣಿಮೆಯಂದು ಗ್ರಾಮಸ್ಥರು ಜಾತ್ರಾ ಮಹೋತ್ಸವ ಹಮ್ಮಿಕೊಳ್ಳುತ್ತಾರೆ. ಮಹಾರಾಜರ ಸ್ಮಾರಕದ ಮೇಲೆ ಹಿಂದೂಗಳ ಭಗವಾ ಹಾಗೂ ಮುಸ್ಲಿಮರ ಹಸಿರು ಬಣ್ಣದ ಹೊದಿಕೆ (ಗಲಫ್) ಹಾಕಿ ಭಕ್ತಿ ಸಮರ್ಪಿಸುವುದು ಹಲವು ದಶಕಗಳಿಂದ ನಡೆದು ಬಂದಿರುವ ವಿಶೇಷತೆಗಳಲ್ಲಿ ಒಂದಾಗಿದೆ.

ಜಾತ್ರೆಗೆ ಕರ್ನಾಟಕ ಅಲ್ಲದೇ ಮಹಾರಾಷ್ಟ್ರ, ತೆಲಂಗಾಣ ರಾಜ್ಯ ಗಳಿಂದಲೂ ಭಕ್ತರು ಆಗಮಿಸುತ್ತಾರೆ. ಮಹಾರಾಜರು ಜೀವಂತ ಸಮಾಧಿ ಯಾದ ಸಂಜೀವಿನಿ ಸ್ಮಾರಕದ ದರ್ಶನ ಪಡೆಯುತ್ತಾರೆ.

ಇಲ್ಲಿನ ಅನೇಕರು ತಮ್ಮ ಅಂಗಡಿಗಗಳಿಗಷ್ಟೇ ಅಲ್ಲ ಮಕ್ಕಳಿಗೂ ‘ಹರಿನಾಥ’ ಎಂದು ಹೆಸರಿಟ್ಟಿದ್ದು, ಗ್ರಾಮಸ್ಥರರು ಹರಿನಾಥ ಮಹಾರಾಜರ ಬಗ್ಗೆ ಹೊಂದಿರುವ ಗೌರವಕ್ಕೆ ಸಾಕ್ಷಿಯಾಗಿದೆ.

ಗ್ರಾಮಸ್ಥರು ಈ ಐತಿಹಾಸಿಕ ಸ್ಮಾರಕದ ಜೀರ್ಣೋದ್ಧಾರಕ್ಕೆ ಒತ್ತಾಯಿಸಿ ಪ್ರಾಚ್ಯವಸ್ತು ಇಲಾಖೆ, ಮುಜರಾಯಿ ಇಲಾಖೆಗೆ ₹65 ಲಕ್ಷ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸಿ ಹಲವು ವರ್ಷಗಳೇ ಗತಿಸಿವೆ. ಆದರೆ ಅಧಿಕಾರಿಗಳು ಯಾರೂ ಈ ಕಡೆ ಗಮನ ಹರಿಸದಿರುವುದು ಗ್ರಾಮಸ್ಥರಲ್ಲಿ ನಿರಾಶೆ ಮೂಡಿಸಿದೆ.

*
ಸಂತ ಹರಿನಾಥ ಮಹಾರಾಜರು ಜೀವಂತ ಸಮಾಧಿಯಾಗಿರುವ ಸ್ಥಳಕ್ಕೆ ದಿನಾಲೂ ಹಿಂದೂ-ಮುಸ್ಲಿಂರು ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಕುರಿತು ಇತಿಹಾಸ ತಜ್ಞರು ಅಧ್ಯಯನ ಮಾಡಬೇಕು.
-ಸಂಗಮೇಶ.ಎಸ್. ಮುರ್ಕೆ, ಸಾಹಿತಿ

*
ಸಹೋದರತ್ವ ಸಾರುವ ಸ್ಮಾರಕ ಎಂದು ಖ್ಯಾತಿ ಪಡೆದಿರುವ ಸಂತ ಹರಿನಾಥ ಮಹಾರಾಜರ ಸ್ಮಾರಕ ಹಿಂದೂ-ಮುಸ್ಲಿಂ ಸಮುದಾಯದವರ ಭಾವೈಕ್ಯತೆಗೆ ಸಾಕ್ಷಿಯಾಗಿದೆ.
-ಪ್ರವೀಣ ಮಹಾರಾಜ, ಸ್ಮಾರಕದ ಅರ್ಚಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT