ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ ರಂಗಿನಾಟದಲ್ಲಿ ಸಂಭ್ರಮಿಸಿದ ಬೀದರ್‌ ಜನ

Published 25 ಮಾರ್ಚ್ 2024, 11:32 IST
Last Updated 25 ಮಾರ್ಚ್ 2024, 11:32 IST
ಅಕ್ಷರ ಗಾತ್ರ

ಬೀದರ್‌: ‘ಹೋಳಿ ಹೈ...’ ಸೋಮವಾರ ಬೆಳಕು ಹರಿಯುತ್ತಿದ್ದಂತೆ ಎಲ್ಲೆಡೆ ಕೇಳಿ ಬಂದ ಘೋಷವಾಕ್ಯವಿದು.

ಚಿಣ್ಣರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರು ‘ಹೋಳಿ ಹೈ’ ಎಂದು ಹೇಳುತ್ತ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಬಗೆಬಗೆಯ ಬಣ್ಣಗಳಲ್ಲಿ ಮಿಂದೆದ್ದು ಗುರುತು ಸಿಗಲಾರದಂತೆ ಆಗಿದ್ದರು. ಇನ್ನು, ಈ ಸಂಭ್ರಮಕ್ಕೆ ಸಂಗೀತ ಮತ್ತಷ್ಟು ಜೋಶ್‌ ತುಂಬಿತ್ತು.

ಒಂದೆಡೆ ಗುಲಾಲ್‌ ಎರಚುತ್ತಿದ್ದರೆ, ಮತ್ತೊಂದೆಡೆ ಬಣ್ಣದೋಕುಳಿಯಲ್ಲಿ ಮಿಂದೆದಿದ್ದ ಯುವಕರು, ಚಿಣ್ಣರು ಕಿವಿಗಡಚ್ಚಿಕ್ಕುವ ಸಂಗೀತಕ್ಕೆ ಮೈಮರೆತು ಹೆಜ್ಜೆ ಹಾಕಿದರು.

ನಗರದ ಶಹಾಗಂಜ್‌, ಕ್ರಾಂತಿ ಗಣೇಶ, ನಾವದಗೇರಿ, ಮೋಹನ್‌ ಮಾರುಕಟ್ಟೆ, ಕೆಎಚ್‌ಬಿ ಕಾಲೊನಿ, ನ್ಯೂ ಆದರ್ಶ ಕಾಲೊನಿ, ವಿದ್ಯಾನಗರ, ಮೈಲೂರ, ಗುಂಪಾ ಹೀಗೆ ದಶ ದಿಕ್ಕುಗಳಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಚಿಣ್ಣರು, ಮಹಿಳೆಯರು ತಮ್ಮ ತಮ್ಮ ಓಣಿಗಳಲ್ಲಿ ಓಡಾಡಿ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಇನ್ನು, ಯುವಕರು ಪ್ರಮುಖ ರಸ್ತೆಗಳಲ್ಲಿ ಬಣ್ಣ ಹಾಗೂ ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆಗೆ ವ್ಯವಸ್ಥೆ ಮಾಡಿದ್ದರು.

ಜೋರಾದ ಸಂಗೀತದ ನಡುವೆ ನಡೆದ ಸ್ಪರ್ಧೆ ಎಲ್ಲರ ಮನಸೂರೆಗೊಳಿಸಿತು. ಮತ್ತೆ ಕೆಲ ಯುವಕರು ಸ್ನೇಹಿತರೊಂದಿಗೆ ಗುಂಪು ಗುಂಪಾಗಿ ಬೈಕ್‌ಗಳಲ್ಲಿ ನಗರದ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ಹೋಳಿ ಆಚರಿಸಿದರು. ಹಿರಿಯರು ಕೂಡ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು. ನೆರೆ ಮನೆಯವರೊಂದಿಗೆ ಹಿರಿಯರು ಹೋಳಿ ಬಣ್ಣದಲ್ಲಿ ಮಿಂದೆದ್ದರು. ನಗರದಂತೆ ಗ್ರಾಮೀಣ ಭಾಗಗಳಲ್ಲೂ ಹಬ್ಬದ ಸಂಭ್ರಮದ ಮೇರೆ ಮೀರಿತ್ತು.

ಭಾನುವಾರ ರಾತ್ರಿ ಆಯಾ ಬಡಾವಣೆಗಳಲ್ಲಿ ಕಾಮ ದಹನ ಮಾಡಲಾಯಿತು. ಅದಕ್ಕೆ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಸಾಕ್ಷಿಯಾದರು. ತಡರಾತ್ರಿ ವರೆಗೆ ಸಂಗೀತಕ್ಕೆ ಹೆಜ್ಜೆ ಹಾಕಿದರು.

ಪರೀಕ್ಷೆ ಕಸಿದ ಸಂಭ್ರಮ

ಸೋಮವಾರ ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಪರೀಕ್ಷೆ ಇದ್ದದ್ದರಿಂದ ಹುಡುಗ/ಹುಡುಗಿಯರಿಗೆ ಹೋಳಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

ಜಿಲ್ಲೆಯ 90 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದವು. 29,645 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಣಿ ಮಾಡಿಸಿದ್ದರು. ಭಾನುವಾರ ರಾತ್ರಿ ನಡೆದ ಕಾಮದಹನ, ಮರುದಿನ ನಡೆದ ರಂಗಿನಾಟದಲ್ಲೂ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಕೆಲವೆಡೆ ಆ ಸಂಭ್ರಮವೇ ಕಂಡು ಬರಲಿಲ್ಲ. ಚಿಣ್ಣರು, ಮಧ್ಯ ವಯಸ್ಕರು, ಮಹಿಳೆಯರೇ ಹೆಚ್ಚಾಗಿ ರಂಗಿನಾಟದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT