ಬೀದರ್: ಲೇಔಟ್‌ಗಳಲ್ಲಿ ಮಾರ್ಪಾಡು ಮಾಡಿ ಹೆಚ್ಚುವರಿ ನಿವೇಶನಗಳನ್ನು ಸೃಷ್ಟಿಸಿ ಸರ್ಕಾರದ ಅನುಮೋದನೆ ಪಡೆಯಲಾರದೆ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನೇಮಕಗೊಂಡಿರುವ ತನಿಖಾ ತಂಡವು ಕಳೆದ ಮೂರು ದಿನಗಳಿಂದ ಇಲ್ಲಿನ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಕಚೇರಿಯಲ್ಲಿ ಕಡತಗಳನ್ನು ಜಾಲಾಡುತ್ತಿದೆ.
ಕಲಬುರಗಿಯ ಭೂ ನಿರ್ವಹಣೆ, ಯೋಜನೆಯ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಪ್ರಕಾಶ ರಜಪೂತ್, ಕಲಬುರಗಿ ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಎಸ್. ಪಾಟೀಲ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕ ಸಂಗಪ್ಪ ಗಾರಂಪಳ್ಳಿ, ಕಲಬುರಗಿ ಪ್ರಾದೇಶಿಕ ಆಯುಕ್ತರ ಕಚೇರಿಯ ತಹಶೀಲ್ದಾರ್ ಶಿವಪುತ್ರ, ಶಿರಸ್ತೇದಾರ ಸಂಜೀವಕುಮಾರ ಅವರನ್ನು ಒಳಗೊಂಡ ತಂಡವು ಸೆಪ್ಟೆಂಬರ್ 11ರಿಂದ ಸತತ ಮೂರು ದಿನಗಳಿಂದ ನಗರದ ಬುಡಾ ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸುತ್ತಿದೆ. ಗುರುವಾರವೂ (ಸೆ.14) ಪರಿಶೀಲನಾ ಕಾರ್ಯ ಮುಂದುವರೆಯಲಿದೆ ಎಂದು ಗೊತ್ತಾಗಿದೆ.
ಬುಡಾ ಈ ಹಿಂದಿನ ಅಧ್ಯಕ್ಷ ಬಾಬುವಾಲಿ, ಆಯುಕ್ತ ಅಭಯಕುಮಾರ ಅವರು ಲೇಔಟ್‌ಗಳಲ್ಲಿ ಮಾರ್ಪಾಡು ಮಾಡಿ ಹೆಚ್ಚುವರಿ ನಿವೇಶನಗಳನ್ನು ಸೃಷ್ಟಿಸಿ ಸರ್ಕಾರದ ಅನುಮೋದನೆ ಪಡೆಯಲಾರದೆ ಮಾರಾಟ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಆ ದೂರಿನ ಅನ್ವಯ ಕಲಬುರಗಿ ಪ್ರಾದೇಶಿಕ ಆಯುಕ್ತರು ತನಿಖಾ ತಂಡ ನೇಮಕ ಮಾಡಿ, ತನಿಖೆಗೆ ಕ್ರಮ ಕೈಗೊಂಡಿದ್ದಾರೆ.
‘ಕಡತಗಳನ್ನು ಪರಿಶೀಲಿಸಿ, ಕಾಮಗಾರಿಗಳ ಸ್ಥಳಕ್ಕೆ ಭೇಟಿ ಕೊಟ್ಟು, ಲಿಖಿತ ರೂಪದ ಜಂಟಿ ತನಿಖಾ ವರದಿ ಸಲ್ಲಿಸಬೇಕೆಂದು ಆದೇಶ ಮಾಡಿದ್ದರು. ಈ ಸಂಬಂಧ ತನಿಖಾ ತಂಡದವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ತನಿಖೆ ಪ್ರಗತಿಯಲ್ಲಿದ್ದು, ಈ ಸಂದರ್ಭದಲ್ಲಿ ಮಾಹಿತಿ ಹಂಚಿಕೊಳ್ಳಲು ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಬುಡಾ ಆಯುಕ್ತ ಶ್ರೀಕಾಂತ ಚಿಮಕೋಡೆ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ತನಿಖಾ ತಂಡ ಕೇಳುತ್ತಿರುವ ಅಗತ್ಯ ಮಾಹಿತಿ ನೀಡಲಾಗುತ್ತಿದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.