ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಡಿಮೆ ಮಕ್ಕಳಿದ್ದರೂ ಕನ್ನಡ ಶಾಲೆ ಮುಚ್ಚೊಲ್ಲ: ಈಶ್ವರ ಖಂಡ್ರೆ

Published : 30 ಡಿಸೆಂಬರ್ 2023, 14:38 IST
Last Updated : 30 ಡಿಸೆಂಬರ್ 2023, 14:38 IST
ಫಾಲೋ ಮಾಡಿ
Comments

ಬೀದರ್‌ (ಎಂ.ಜಿ. ಗಂಗನಪಳ್ಳಿ ವೇದಿಕೆ): ‘ಮಕ್ಕಳು ಕಡಿಮೆಯಿದ್ದರೂ ಕನ್ನಡ ಶಾಲೆಗಳನ್ನು ಮುಚ್ಚಲು ಬಿಡೊಲ್ಲ. ನಾಡಿನ ನೆಲ–ಜಲ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶನಿವಾರ ನಡೆದ ಬೀದರ್‌ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಡಿ ಭಾಗದಲ್ಲಿ ಕನ್ನಡ ಬೆಳೆಯಬೇಕು. ಈ ಹಿಂದಿನಂತೆ ಗಡಿಭಾಗದಲ್ಲಿ ಈಗ ಸಮಸ್ಯೆಗಳಿಲ್ಲ. ಉತ್ತಮ ಸೌಕರ್ಯಗಳನ್ನು ಒದಗಿಸಿರುವ ಕಾರಣ ಗಡಿಭಾಗದವರು ಕನ್ನಡ ಕಲಿಯಲು ಉತ್ಸುಕರಾಗಿದ್ದಾರೆ ಎಂದರು.

ಮಾತೃ ಭಾಷೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾಹಿತ್ಯವು ಭೂಮಿಯನ್ನು ಸ್ವರ್ಗ ಮಾಡುವ ಸರಕಾಗಿದೆ. ನಮ್ಮ ಕ್ರೌರ್ಯ, ಹಿಂಸೆಯನ್ನು ನಿರ್ನಾಮ ಮಾಡುವ ಶಕ್ತಿ ಸಾಹಿತ್ಯಕ್ಕಿದೆ. ಎಲ್ಲರಿಗೆ ಹಿತ ಕಾಪಾಡುವ ಶಕ್ತಿ ಸಾಹಿತ್ಯದಲ್ಲಿದೆ. ಕನ್ನಡಕ್ಕೆ ತನ್ನದೆ ಆದ ಇತಿಹಾಸ ಇದೆ. ಪಂಪ, ರನ್ನ, ಪೊನ್ನ ಸೇರಿ ಹಲವು ಮಹನೀಯರು ಕನ್ನಡಕ್ಕೆ ಶ್ರೇಷ್ಠತೆ ತಂದುಕೊಟ್ಟಿದ್ದಾರೆ. ವಚನಕಾರರು, ಸಾಹಿತಿಗಳು ಹಾಗೂ ದಾಸರು ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಡಾ.ಬಿ.ಆರ್‌.ಅಂಬೇಡ್ಕರ್‌ ಕೂಡ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸುವ ಕೆಲಸ ಮಾಡಿದ್ದಾರೆ. ಸಾಮಾಜಿಕ ನ್ಯಾಯದಿಂದ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಹೇಳಿದರು.

ಬೀದರ್‌ನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 2017–18ರಲ್ಲಿ ನಾನು ಸಚಿವನಾಗಿದ್ದಾಗ ಜಿಲ್ಲಾಡಳಿತದಿಂದ ಒಂದು ಎಕರೆ ಜಮೀನು ಕೊಡಿಸಿದ್ದೆ. ನಂತರ ಬಂದ ಸರ್ಕಾರ ಅದಕ್ಕೆ ಅನುದಾನ ಕೊಟ್ಟಿತು. ಈಗ ಕನ್ನಡ ಭವನ ನಿರ್ಮಾಣಗೊಂಡಿದೆ. ಜನವರಿ 30ರೊಳಗೆ ಅದನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ,‘ಬೀದರ್‌ ಜಿಲ್ಲೆ ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ತನ್ನದೆ ಆದ ಇತಿಹಾಸ ಹೊಂದಿದೆ. ಈ ಪರಂಪರೆ ಹೊಸ ತಲೆಮಾರು ಉಳಿಸಿ–ಬೆಳೆಸಬೇಕು’ ಎಂದು ಹೇಳಿದರು.

‘ದಾಸ ಸಂಭ್ರಮ’ ಸ್ಮರಣ ಸಂಚಿಕೆಯನ್ನು ಮಾಜಿ ಸಚಿವ ಎಚ್‌.ಎಂ.ರೇವಣ್ಣ ಬಿಡುಗಡೆಗೊಳಿಸಿ,‘14ನೇ ಶತಮಾನದಲ್ಲಿ ಕೀರ್ತನೆಗಳನ್ನು ಮೊದಲಿಗೆ ರಚಿಸಿದವರು ನರಹರಿ ತೀರ್ಥರು. 16ನೇ ಶತಮಾನದಲ್ಲಿ ಪುರಂದರದಾಸರು, ಕನಕದಾಸರು ಅದನ್ನು ಮುಂದುವರಿಸಿದರು. ಅವರು ತಮ್ಮ ಕೀರ್ತನೆಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ್ದರು’ ಎಂದು ತಿಳಿಸಿದರು.

ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ,‘12ನೇ ಶತಮಾನದಲ್ಲಿ ಬಸವಾದಿ ಶರಣರು ಮಾಡಿದ ಜನಮುಖಿ ಕಾರ್ಯವನ್ನು ದಾಸರು ಮುಂದುವರಿಸಿದರು. ಇಂದಿನ ತಲೆಮಾರಿನ ಜನ ಶರಣರು, ದಾಸರ ವಾಣಿ ಕೇಳಿ ಸಂತಸಪಡಲಷ್ಟೇ ಸೀಮಿತರಾಗಬಾರದು. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್‌ ಮಾತನಾಡಿ,‘ಕನ್ನಡ ಉಳಿಸಿ ಬೆಳೆಸುವುದಕ್ಕೆ ಯಾರಿಗಾದರೂ ಬಹುಮಾನ ಕೊಡಬೇಕಾದರೆ ಅದು ಬೀದರ್‌ ಜನತೆಗೆ. ಏಕೆಂದರೆ ತೆಲಂಗಾಣ, ಮಹಾರಾಷ್ಟ್ರದ ಗಡಿಯಲ್ಲಿದ್ದರೂ ಕನ್ನಡವನ್ನು ಉಳಿಸಿ ಬೆಳೆಸಿದ್ದಾರೆ. ಹಳ್ಳಿಗಳಿಗೆ ಹೋದರೆ ಕನ್ನಡ ಸಾಹಿತ್ಯ ಎಷ್ಟು ವಿಶಿಷ್ಟ ಎನ್ನುವುದು ಗೊತ್ತಾಗುತ್ತದೆ. ನಾನು ಸಚಿವನಿದ್ದಾಗ ಇಬ್ಬರು ಮಕ್ಕಳಿದ್ದರೂ ಕನ್ನಡ ಶಾಲೆಗಳನ್ನು ಮುಚ್ಚದಂತೆ ಸೂಚನೆ ಕೊಟ್ಟಿದ್ದೆ. ಈಗಿನ ಸರ್ಕಾರ ಕೂಡ ಆ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ,‘ಶೇ 60ರಷ್ಟು ನಾಮಫಲಕಗಳು ಕನ್ನಡದಲ್ಲಿಯೇ ಹಾಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ಹ. ಇನ್ನು, ಕನ್ನಡ ಶಾಲೆ ಆರಂಭಿಸಲು ಇರುವ ಷರತ್ತುಗಳನ್ನು ಸಡಿಲಗೊಳಿಸಬೇಕು’ ಎಂದು ಒತ್ತಾಯಿಸಿದರು.

ಹುಲಸೂರಿನ ಶಿವಾನಂದ ಸ್ವಾಮೀಜಿ, ತಿಂಥಣಿ ಬ್ರಿಜ್‌ ಕನಕ ಗುರುಪೀಠದ ಸಿದ್ದರಾಮನಂದಪುರಿ ಸ್ವಾಮೀಜಿ, ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ.ಬೆಲ್ದಾಳೆ, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ ಮಲ್ಕಾಪುರೆ, ನಗರಸಭೆ ಅಧ್ಯಕ್ಷ ಮಹಮ್ಮದ್‌ ಗೌಸ್‌, ಪ್ರಮುಖರಾದ ಪಂಡಿತರಾವ ಚಿದ್ರಿ, ಮಾಳಪ್ಪ ಅಡಸಾರೆ, ಗೀತಾ ಪಂಡಿತ ಚಿದ್ರಿ, ಅಮೃತರಾವ ಚಿಮಕೋಡೆ, ಪೀರಪ್ಪಾ ಔರಾದೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರರೆಡ್ಡಿ ಮಾಲಿಪಾಟೀಲ, ಪರಿಷತ್ತಿನ ಟಿ.ಎಂ.ಮಚ್ಚೆ, ಶಿವಶಂಕರ ಟೋಕರೆ, ವಿಜಯಕುಮಾರ ಡುಮ್ಮೆ, ಸಂಜುಕುಮಾರ ಅಲ್ಲೂರೆ ಇತರರು ಹಾಜರಿದ್ದರು.

ಶಿವಾನಿ ಶಿವದಾಸ ಸ್ವಾಮಿ, ನುಪೂರ ನೃತ್ಯ ಅಕಾಡೆಮಿಯ ಉಷಾ ಪ್ರಭಾಕರ ಹಾಗೂ ಸಂಗಡಿಗರು ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ರಥದಲ್ಲಿ ಸರ್ವಾಧ್ಯಕ್ಷರ ಮೆರವಣಿಗೆ

ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಬಿ.ಎಂ. ಅಮರವಾಡಿ ಹಾಗೂ ಭುವನೇಶ್ವರಿ ತಾಯಿ ಭಾವಚಿತ್ರದ ಮೆರವಣಿಗೆಯನ್ನು ಪುಷ್ಪಾಲಂಕೃತ ಅಶ್ವಾರೂಢ ಬೆಳ್ಳಿ ರಥದಲ್ಲಿ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ‌ಕನ್ನಡ ಧ್ವಜಗಳು ರಾರಾಜಿಸಿದವು. ಧ್ವನಿವರ್ಧಕದಲ್ಲಿ ಕನ್ನಡ ಗೀತೆಗಳು ಹಾಗೂ ಜಯ ಘೋಷಗಳು ಮೊಳಗಿದವು. ಸಂಗೀತಕ್ಕೆ ಕನ್ನಡಾಭಿಮಾನಿಗಳು ಹುಚ್ಚೆದ್ದು ಕುಣಿದರು. ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಬಿ.ಎಂ.ಅಮರವಾಡಿ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ನೃತ್ಯ ಮಾಡಿದರು. ಇಲ್ಲಿನ ವಿದ್ಯಾನಗರದಿಂದ ಪ್ರಮುಖ ಮಾರ್ಗಗಳ ಮೂಲಕ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದವರೆಗೆ ಮೆರವಣಿಗೆ ನಡೆಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ ವಿ.ಕೆ.ಇಂಟರ್‌ನ್ಯಾಷನಲ್‍ನ ದಿಲೀಪ್ ಕಮಠಾಣೆ ಸೇರಿ ಇತರರಿದ್ದರು.

‘ದಾಸ ಸಾಹಿತ್ಯ ಎಲ್ಲ ಭಾಷೆಗಳಿಗೂ ತರ್ಜುಮೆಯಾಗಲಿ’

‘ಒಂದು ಭಾಷೆ ಸಾಹಿತ್ಯ ಬೆಳೆಯಬೇಕಾದರೆ ಅದರ ವ್ಯಾಪ್ತಿ ವಿಸ್ತಾರವಾಗಬೇಕು. ದಾಸ ಸಾಹಿತ್ಯ ಇಂಗ್ಲಿಷ್‌ ಸೇರಿದಂತೆ ದೇಶದ ಎಲ್ಲ ಭಾಷೆಗಳಿಗೂ ತರ್ಜುಮೆಗೊಳಿಸಲು ಸರ್ಕಾರ ಕ್ರಮ ಜರುಗಿಸಬೇಕು’ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಬಿ.ಎಂ. ಅಮರವಾಡಿ ಆಗ್ರಹಿಸಿದರು. ದಾಸ ಸಾಹಿತ್ಯವನ್ನು ಒಂದು ನಿರ್ದಿಷ್ಟ ಜಾತಿ ಗುಂಪು ಅಥವಾ ವರ್ಗದಿಂದ ಹೊರತಂದು ವಿವಿಧ ಆಯಾಮಗಳ ಮೂಲಕ ನೋಡುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಬೇಕು. ದಾಸರ ಜನ್ಮಸ್ಥಳಗಳಲ್ಲಿ ಕೀರ್ತನೆಕಾರರ ಸ್ಮಾರಕಗಳನ್ನು ನಿರ್ಮಿಸಬೇಕು. ದಾಸ ಸಾಹಿತ್ಯದ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯಲು ಸರ್ಕಾರ ಪ್ರೋತ್ಸಾಹದಾಯಕ ಕ್ರಮ ಕೈಗೊಳ್ಳಬೇಕು. ದಾಸ ಸಾಹಿತ್ಯದ ಎಲ್ಲ ಸಂಪುಟಗಳನ್ನು ಮರು ಮುದ್ರಣ ಮಾಡಬೇಕು. ಪಠ್ಯದಲ್ಲಿ ದಾಸ ಸಾಹಿತ್ಯ ಸೇರಿಸಬೇಕು. ದಾಸ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸುತ್ತಿರುವವರಿಗೆ ಸರ್ಕಾರ ಪ್ರೋತ್ಸಾಹ ಕೊಡಬೇಕು ಎಂದು ಒತ್ತಾಯಿಸಿದರು.

ಸಮ್ಮೇಳನದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಸಾಹಿತ್ಯಾಭಿಮಾನಿಗಳು ಸಮ್ಮೇಳನದ ಸರ್ವಾಧ್ಯಕ್ಷ ಬಿ.ಎಂ.ಅಮರವಾಡಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಕಟದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿದರು
ಸಮ್ಮೇಳನದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಸಾಹಿತ್ಯಾಭಿಮಾನಿಗಳು ಸಮ್ಮೇಳನದ ಸರ್ವಾಧ್ಯಕ್ಷ ಬಿ.ಎಂ.ಅಮರವಾಡಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಕಟದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT