ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಗೃಹಜ್ಯೋತಿ ಬಳಕೆದಾರರಿಗೆ ತಟ್ಟಿದ ಬಿಸಿ

ಹೆಚ್ಚಿದ ಬಿಸಿಲಿನಿಂದ ಮಿತಿಗಿಂತ ಹೆಚ್ಚು ವಿದ್ಯುತ್‌ ಬಳಕೆ; ಸಿಗದ ಉಚಿತ ಯೋಜನೆಯ ಲಾಭ
Published 14 ಮೇ 2024, 5:03 IST
Last Updated 14 ಮೇ 2024, 5:03 IST
ಅಕ್ಷರ ಗಾತ್ರ

ಬೀದರ್‌: ಮಿತಿ ಮೀರಿದ ತಾಪಮಾನದ ಶಾಖ ಈ ಸಲ ‘ಗೃಹಜ್ಯೋತಿ’ ಬಳಕೆದಾರರಿಗೂ ತಟ್ಟಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ‘ಗ್ಯಾರಂಟಿ’ ಯೋಜನೆಗಳಲ್ಲಿ ‘ಗೃಹಜ್ಯೋತಿ’ ಕೂಡ ಒಂದು. ಈ ಯೋಜನೆ ಹೋದ ವರ್ಷ ಜಾರಿಗೆ ಬಂದಿದೆ. ಆದರೆ, ಮಾರ್ಚ್‌ನಿಂದ ಸತತವಾಗಿ ಬಿಸಿಲು ಏರುಮುಖವಾಗಿದ್ದರಿಂದ ಹೆಚ್ಚಿನವರು ನಿಗದಿತ ಮಿತಿಗಿಂತ ಹೆಚ್ಚುವರಿ ಯೂನಿಟ್‌ ವಿದ್ಯುತ್‌ ಬಳಸಿ ಯೋಜನೆಯ ಲಾಭ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಯೋಜನೆ ಪ್ರಕಾರ, ಗ್ರಾಹಕರೊಬ್ಬರು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ ಬಳಸಲು ಅವಕಾಶ ಇದೆ. ಈ ಹಿಂದಿನ ವರ್ಷಗಳಲ್ಲಿ ಬಳಸಿದ ಸರಾಸರಿ ಆಧರಿಸಿ ಕೆಲವರಿಗೆ ಇಂತಿಷ್ಟು ಯೂನಿಟ್‌ಗಳನ್ನು ನಿಗದಿಪಡಿಸಿ, ಅದರ ಮೇಲೆ 10 ಯೂನಿಟ್‌ ಹೆಚ್ಚಿಗೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ಹೀಗಿದ್ದರೂ ಕೆಂಡದಂತಹ ಬಿಸಿಲಿನಿಂದ ಅನೇಕರಿಗೆ ಇದರ ಲಾಭ ಸಿಕ್ಕಿಲ್ಲ.

ಜೆಸ್ಕಾಂನ ಬೀದರ್‌ ವಿಭಾಗ ವ್ಯಾಪ್ತಿಯೊಂದರಲ್ಲೇ ಒಟ್ಟು 2,35,156 ವಿದ್ಯುತ್‌ ಗ್ರಾಹಕರು ಇದ್ದಾರೆ. ಈ ಪೈಕಿ 2,13,096 ಜನ ಗೃಹಜ್ಯೋತಿ ಯೋಜನೆಯಡಿ ಹೆಸರು ನೋಂದಣಿ ಮಾಡಿಸಿದ್ದಾರೆ. ಆದರೆ, ಬಿಸಿಲು ಹೆಚ್ಚಾಗಿರುವ ಕಾರಣ ಹಗಲು–ರಾತ್ರಿ ಫ್ಯಾನ್‌, ಕೂಲರ್‌ಗಳ ಬಳಕೆಯಿಂದ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಿಗೆ ವಿದ್ಯುತ್‌ ಅನ್ನು 15,041 ಗ್ರಾಹಕರು ಬಳಸಿದ್ದಾರೆ. ಇದರಿಂದಾಗಿ ಅವರು ಏಪ್ರಿಲ್‌ ತಿಂಗಳ ಬಿಲ್‌ ಪೂರ್ಣ ಪ್ರಮಾಣದಲ್ಲಿ ಭರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಬೀದರ್‌ ಜಿಲ್ಲೆಯಾದ್ಯಂತ ಮಾರ್ಚ್‌ನಿಂದ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದು ಸಹಜವಾಗಿಯೇ ವಿದ್ಯುತ್‌ ಬಳಕೆ ಹೆಚ್ಚಾಗಿ ಅನೇಕರು 200 ಯೂನಿಟ್‌ಗಳಿಗಿಂತ ಜಾಸ್ತಿ ಬಳಸಿರುವುದರಿಂದ ಉಚಿತ ಯೋಜನೆಯ ಲಾಭ ಸಿಕ್ಕಿಲ್ಲ
ರಮೇಶ ಕೆ.ಪಾಟೀಲ, ಕಾರ್ಯನಿರ್ವಾಹಕ ಎಂಜಿನಿಯರ್‌, ಜೆಸ್ಕಾಂ ಬೀದರ್‌ ವಿಭಾಗ

ಇನ್ನು, ಏಪ್ರಿಲ್‌ಗಿಂತ ಮೇ ತಿಂಗಳ ಮೊದಲ ವಾರದಲ್ಲಿ ಬಿಸಿಲಿನ ಪ್ರಮಾಣ ಜಾಸ್ತಿ ಇತ್ತು. ಕೆಲವು ದಿನಗಳಂತೂ 42ರಿಂದ 44 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ದಾಖಲಾಗಿತ್ತು. ಬಹುತೇಕರ ಮನೆಗಳಲ್ಲಿ ಫ್ಯಾನ್‌ಗಳು ಹಗಲು–ರಾತ್ರಿ ತಿರುಗಿವೆ. ಫ್ಯಾನ್‌ ಇಲ್ಲದೆ ಮನೆಗಳಲ್ಲಿ ಕ್ಷಣಕಾಲವೂ ಕೂರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡನೇ ವಾರ ಅಲ್ಪ ಮಳೆಯಾಗಿದ್ದರೂ ತಾಪಮಾನ ಹೇಳಿಕೊಳ್ಳುವಂತಹ ರೀತಿಯಲ್ಲಿ ತಗ್ಗಿಲ್ಲ. ಅದರಲ್ಲೂ ಸೆಕೆಯ ಪ್ರಮಾಣ ಕುಸಿದಿಲ್ಲ. ಈಗಲೂ ವಿದ್ಯುತ್‌ ಬಳಕೆಯ ಪ್ರಮಾಣ ಹೆಚ್ಚಾಗಿಯೇ ಇದೆ. ಹೀಗಾಗಿ ಜೂನ್‌ನಲ್ಲಿ ‘ಗೃಹಜ್ಯೋತಿ’ ಯೋಜನೆಯ ಉಚಿತ ಲಾಭ ಇನ್ನಷ್ಟು ಜನರಿಗೆ ಕೈತಪ್ಪಿದರೂ ಅಚ್ಚರಿ ಪಡಬೇಕಿಲ್ಲ.

‘ಗೃಹಜ್ಯೋತಿ ಯೋಜನೆ ಆರಂಭಗೊಂಡ ನಂತರ ನಮಗೆ ಬಹಳ ಅನುಕೂಲವಾಗಿದೆ. ನಮಗೆ ಸರಾಸರಿ 140 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್‌ ಬಳಸಲು ಅವಕಾಶ ಇದೆ. ಈ ವರ್ಷದ ಫೆಬ್ರುವರಿಯೊಳಗೆ 140 ಯೂನಿಟ್‌ಗಳ ಒಳಗೆ ಬಳಸಿರುವುದರಿಂದ ಬಿಲ್‌ ತುಂಬುವ ಪ್ರಮೇಯವೇ ಬಂದಿರಲಿಲ್ಲ. ಆದರೆ, ಮಾರ್ಚ್‌, ಏಪ್ರಿಲ್‌ನಲ್ಲಿ ಮಿತಿಗಿಂತ ಹೆಚ್ಚು ಬಳಸಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಬಿಲ್‌ ತುಂಬಿದ್ದೇವೆ. ಇದರಲ್ಲಿ ಸರ್ಕಾರದ ತಪ್ಪಿಲ್ಲ. ಬಿಸಿಲು ಹೆಚ್ಚಿರುವುದರಿಂದ ಹಗಲು–ರಾತ್ರಿ ಎನ್ನದೆ ಫ್ಯಾನ್‌, ಕೂಲರ್‌ಗಳನ್ನು ಬಳಸಿದ್ದೇವೆ. ಮೇ ತಿಂಗಳು ಇದೇ ರೀತಿ ಆಗಬಹುದು. ಆದರೆ, ಜೂನ್‌ ನಂತರ ಮತ್ತೆ ಯೋಜನೆಯ ಲಾಭ ಸಿಗುತ್ತದೆ’ ಎಂದು ಮೈಲೂರಿನ ನಿವಾಸಿ ಮನೋಹರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ವರ್ಷ ಮಾರ್ಚ್‌ನಿಂದ ಮೇ ವರೆಗೆ ಹೆಚ್ಚಿಗೆ ಬಿಲ್‌ ಬರುತ್ತದೆ. ಫ್ಯಾನ್‌, ಕೂಲರ್‌ ಜಾಸ್ತಿ ಬಳಸುವುದರಿಂದ ಹೀಗಾಗುತ್ತದೆ. ಈ ಸಲ ಗೃಹಜ್ಯೋತಿ ಬಂದದ್ದರಿಂದ ಸಾಕಷ್ಟು ಅನುಕೂಲವಾಗಿದೆ. ಈ ಮೂರು ತಿಂಗಳು ಬಿಲ್‌ ತುಂಬುತ್ತೇವೆ. ಮಿಕ್ಕುಳಿದ ತಿಂಗಳು ನಿಶ್ಚಿಂತೆಯಿಂದ ಇರಬಹುದು’ ಎಂದು ಕುಂಬಾರವಾಡ ನಿವಾಸಿ ರಾಜೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT