ಮಂಗಳವಾರ, ಸೆಪ್ಟೆಂಬರ್ 27, 2022
27 °C

ರಾಷ್ಟ್ರಮಟ್ಟದ ಮಹಿಳಾ ಅಂಚೆ ನೌಕರರ ಸಮಾವೇಶ ಸೆ.11ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಅಖಿಲ ಭಾರತ ಅಂಚೆ ನೌಕರರ ಸಂಘಟನೆ ವತಿಯಿಂದ ಸೆ. 10 ಮತ್ತು 11 ರಂದು ಬೀದರ್‌ನಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಮಹಿಳಾ ಅಂಚೆ ನೌಕರರ ಸಮಾವೇಶಕ್ಕೆ ಸಿದ್ಧತೆ ಆರಂಭಿಸಲಾಗಿದೆ ಎಂದು ಸಂಘಟನೆಯ ಬೀದರ್ ವಿಭಾಗದ ಅಧ್ಯಕ್ಷೆ ಮಂಗಲಾ ಭಾಗವತ್ ತಿಳಿಸಿದರು.

ಇಲ್ಲಿಯ ಹೊಟೇಲ್ ಕನಕಾದ್ರಿಯಲ್ಲಿ ನಡೆದ ಸಮಾವೇಶದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ವಿವಿಧೆಡೆಯ ಮಹಿಳಾ ಅಂಚೆ ನೌಕರರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅತಿಥಿ ಸತ್ಕಾರ ಸೇರಿದಂತೆ ಸರ್ವ ರೀತಿಯಿಂದಲೂ ಸಮಾವೇಶವನ್ನು ಯಶಸ್ವಿಗೊಳಿಸಲು ಸಂಘಟನೆ ಪದಾಧಿಕಾರಿಗಳು ಈಗಾಗಲೇ ವಿವಿಧ ಸಿದ್ಧತಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಕೆಲಸದ ಸ್ಥಳಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದು, ಮಹಿಳೆಯರನ್ನು ಇಲಾಖೆಯ ಮುಖ್ಯ ವಾಹಿನಿಗೆ ತರುವುದು ಹಾಗೂ ಅವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುವುದು ಸಮಾವೇಶದ ಉದ್ದೇಶವಾಗಿದೆ ಎಂದು ತಿಳಿಸಿದರು.

ಸಂಘಟನೆಯ ನವದೆಹಲಿಯ ಶ್ರೀನಿವಾಸ್ ಮಾತನಾಡಿ, ಕರ್ನಾಟಕದಲ್ಲೇ ಬೀದರ್‌ನಲ್ಲಿ ಮೊದಲ ಬಾರಿಗೆ ರಾಷ್ಟ್ರಮಟ್ಟದ ಮಹಿಳಾ ಅಂಚೆ ನೌಕರರ ಸಮಾವೇಶ ನಡೆಯಲಿದೆ. ಸಮಾವೇಶದ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಬೀದರ್‌ಲ್ಲಿ ಸಮಾವೇಶ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಸಮಾವೇಶದ ಯಶಸ್ವಿಗೆ ಎಲ್ಲ ಸಹಕಾರ ನೀಡಲಾಗುವುದು ಎಂದು ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದರು.

ಸಂಘಟನೆಯ ಕರ್ನಾಟಕ ವಲಯದ ಕಾರ್ಯದರ್ಶಿ ಜಾನಕಿರಾಂ, ಬೆಂಗಳೂರಿನ ಕೃಷ್ಣಮೂರ್ತಿ ಮಾತನಾಡಿದರು. ಗುಂಡಪ್ಪ ಕನಕ, ಚಿದಾನಂದ ಕಟ್ಟಿ, ಸುಧಾಕರ, ಭರತ, ಗುರುರಾಜ, ಅಭಿನವ, ವೀಣಾ ಕೆ.ವಿ ಇದ್ದರು.
ಸುಭಾಷ್ ದೊಡ್ಡಿ ಸ್ವಾಗತಿಸಿದರು. ಬೀದರ್ ವಿಭಾಗದ ಕಾರ್ಯದರ್ಶಿ ಕಲ್ಲಪ್ಪ ಕೋನಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.