ಗುರುವಾರ , ಮೇ 6, 2021
25 °C

ಬೀದರ್: ಸರಿಯಾದ ಪಾರ್ಕಿಂಗ್‌ ವ್ಯವಸ್ಥೆಯೇ ಇಲ್ಲ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಪುರಾತನ ನಗರವಾದರೂ ಬೀದರ್ ಹಲವು ವಿಷಯಗಳಲ್ಲಿ ಹಿಂದುಳಿದಿದೆ. ಅಭಿವೃದ್ಧಿ ಹಾಗೂ ಶಿಕ್ಷಣದಲ್ಲಿ ಹಿಂದುಳಿದಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಸಂಚಾರ ನಿಮಯ ಪಾಲನೆಯಲ್ಲಿ ಸಹ ಹಿಂದುಳಿದಿರುವುದು ಹಲವರ ಬೇಸರಕ್ಕೆ ಕಾರಣವಾಗಿದೆ.

ನಗರದ ಯಾವುದೇ ಮೂಲೆಗೆ ಹೋದರೂ ಅಲ್ಲಿ ಅಚ್ಚುಕಟ್ಟಾಗಿ ವಾಹನ ಪಾರ್ಕಿಂಗ್‌ ಮಾಡಿರುವುದು ಕಾಣಸಿಗುವುದಿಲ್ಲ. ವಾಹನ ನಿಲುಗಡೆಗೆ ಶಿಸ್ತು ಎನ್ನುವುದೇ ಇಲ್ಲ. ಸಂಚಾರ ನಿಯಮ ಉಲ್ಲಂಘನೆಯಲ್ಲಿ ಆಟೊ ಚಾಲಕರು ಮುಂಚೂಣಿಯಲ್ಲಿದ್ದಾರೆ. ಪೊಲೀಸ್‌ ಇಲಾಖೆ ಪ್ರತಿ ವರ್ಷ ಅವರಿಗಾಗಿಯೇ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಿ ತಿಳಿವಳಿಕೆ ನೀಡುತ್ತ ಬಂದಿದೆ. ಇದೀಗ ದುಪ್ಪಟ್ಟು ದಂಡ ವಿಧಿಸುತ್ತಿದ್ದರೂ ಸಂಚಾರ ನಿಯಮ ಪಾಲನೆಯಲ್ಲಿ ಸುಧಾರಣೆ ಕಂಡು ಬರುತ್ತಿಲ್ಲ.

ನಗರ ಪ್ರವೇಶದಲ್ಲಿರುವ ನೌಬಾದ್‌ನ ಬಸವೇಶ್ವರ ವೃತ್ತದಲ್ಲಿ ಅಶಿಸ್ತು ಕಾಣಸಿಗುತ್ತದೆ. ವೃತ್ತದಲ್ಲಿ ಖಾಸಗಿ ವಾಹನಗಳು ಬೇಕಾಬಿಟ್ಟಿಯಾಗಿ ನಿಲುಗಡೆಯಾಗಿರುತ್ತವೆ. ಟ್ರ್ಯಾಕ್ಸ್‌ ಹಾಗೂ ಆಟೊಗಳು ರಸ್ತೆ ಮಧ್ಯದಲ್ಲಿ ನಿಂತುಕೊಂಡರೂ ಕೇಳುವವರು ಇರುವುದಿಲ್ಲ.
ದೊಡ್ಡ ಲಾರಿ ಅಥವಾ ಬಸ್‌ಗಳು ಬಂದಾಗ ಮುಂದೆ ಸಾಗಲು ಸಾಧ್ಯವಾಗದೇ ಸಂಚಾರ ದಟ್ಟಣೆಯಾಗುತ್ತದೆ. ಪೊಲೀಸ್‌ ಕಾನ್‌ಸ್ಟೆಬಲ್‌ ಇದ್ದರೆ ಮಾತ್ರ ಚಾಲಕರು ನಿಯತ್ತಿನಿಂದ ಒಂದು ಬದಿಗೆ ವಾಹನ ನಿಲುಗಡೆ ಮಾಡುತ್ತಾರೆ. ಇಲ್ಲದಿದ್ದರೆ ಅವರದ್ದೇ ಸಾಮ್ರಾಜ್ಯ ನಿರ್ಮಾಣವಾಗುತ್ತದೆ.

ನೌಬಾದ್‌ನಲ್ಲಿ ಪ್ರತಿ ಭಾನುವಾರ ರಸ್ತೆ ಬದಿಯಲ್ಲಿ ಸಂತೆ ನಡೆಯುತ್ತದೆ. ಕೈಗಾಡಿಯವರು ಹಾಗೂ ಆಟೊ ಚಾಲಕರು ರಸ್ತೆ ಮಧ್ಯೆ ಒಂದಿಂಚು ಸಹ ಆಚೆ ಈಚೆ ಅಲುಗಾಡದಂತೆ ವಾಹನ ನಿಲ್ಲಿಸಿ ಬಿಡುತ್ತಾರೆ. ಕೇಂದ್ರ ಬಸ್‌ ನಿಲ್ದಾಣದ ಮುಂಭಾಗದ ರಸ್ತೆಯಿಂದ ಮಡಿವಾಳ ವೃತ್ತದ ರಸ್ತೆಯ ವರೆಗೂ ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ವಾಹನ ಚಾಲಕರು ರಸ್ತೆ ಮೇಲೆಯೇ ವಾಹನ ನಿಲ್ಲಿಸಿ ಖರೀದಿಗಾಗಿ ಅಂಗಡಿಗಳಿಗೆ ಹೋಗಿರುತ್ತಾರೆ. ಕಾಮತ್‌ ಹೋಟೆಲ್, ರಾಯಲ್‌ ಅನಮೋಲ್‌, ಶಿವಾ ಇಂಟರ್‌ನ್ಯಾಷನಲ್‌ ಸೇರಿದಂತೆ ಪ್ರಮುಖ ಹೋಟೆಲ್‌ಗಳ ಮುಂದೆ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ.

ಇಲ್ಲಿನ ಸಂಚಾರ ಅವ್ಯವಸ್ಥೆಯನ್ನು ಕಂಡು ಕಲಬುರ್ಗಿ ವಲಯದ ಐಜಿಪಿ ಆಗಿದ್ದ ಅಲೋಕಕುಮಾರ ಅವರು ವಾಹನ ಸವಾರರಿಗೆ ಗುಲಾಬಿ ಹೂವು ನೀಡಿ ತಿಳಿವಳಿಕೆ ನೀಡಿದ್ದರು. ವಾಹನವನ್ನು ರಸ್ತೆ ಬದಿಗೆ ಅಚ್ಚುಕಟ್ಟಾಗಿ ನಿಲ್ಲಿಸಿ ಬೇರೆ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದರು. ಅದೊಂದು ದಿನ ಮಾತ್ರ ವಾಹನ ಸವಾರರು ವಾಹನಗಳನ್ನು ಸರತಿ ಸಾಲಿನಲ್ಲಿ ನಿಲ್ಲಿಸಿದ್ದರು. ಅವರು ಹೋದ ಮೇಲೆ ಮತ್ತೆ ಅದೇ ಸ್ಥಿತಿ ಮುಂದುವರಿದಿದೆ.

ಅಂಬೇಡ್ಕರ್‌ ವೃತ್ತದಲ್ಲಿ ಅಟೊಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಿದರೂ ಆಟೊಚಾಲಕರು ಅಲ್ಲಿ ಅಟೊಗಳನ್ನು ನಿಲುಗಡೆ ಮಾಡುತ್ತಿಲ್ಲ. ಪ್ರಯಾಣಿಕರನ್ನು ತುಂಬಿಸಿಕೊಳ್ಳುವ ಭರದಲ್ಲಿ ರಸ್ತೆ ಮಧ್ಯೆಯೇ ವಾಹನ ನಿಲ್ಲಿಸುತ್ತಿರುವ ಕಾರಣ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.

ಬಸವೇಶ್ವರ ವೃತ್ತದಲ್ಲೂ ಇಂತಹದ್ದೇ ಸಮಸ್ಯೆ ಇದೆ. ಖಾಸಗಿ ವಾಹನಗಳು, ಆಟೊರಿಕ್ಷಾಗಳು ರೈಲ್ವೆ ಕೆಳ ಸೇತುವೆ ಮಾರ್ಗದಲ್ಲಿ ನಿಂತುಕೊಂಡಿರುತ್ತವೆ. ಬೇರೊಂದು ವಾಹನ ಹೋಗಲು ಅವಕಾಶ ಇರುವುದಿಲ್ಲ. ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಎಷ್ಟೇ ವಿಸಿಲ್‌ ಊದಿದರೂ ಚಾಲಕರು ಕ್ಯಾರೇ ಅನ್ನುವುದಿಲ್ಲ. ಪಿಎಸ್‌ಐ, ಸಿಪಿಐ ಬಂದರೆ ಮಾತ್ರ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ.

ಹೈದರಾಬಾದ್‌ ಕಡೆಗೆ ಹೋಗುವ ಬಸ್‌ಗಳು ಬಸವೇಶ್ವರ ವೃತ್ತದಲ್ಲಿ ನಿಲುಗಡೆಯಾಗುತ್ತದೆ. ಖಾಸಗಿ ವಾಹನ, ಅಟೊರಿಕ್ಷಾಗಳು, ಕೈಗಾಡಿಯವರು ಒಂದೇ ಕಡೆ ನಿಲ್ಲುವುದರಿಂದ ವಾಹನಗಳು ಸುಲಭವಾಗಿ ಮುಂದೆ ಸಾಗಲು ಸಾಧ್ಯವಾಗುತ್ತಿಲ್ಲ. ಸುಲಭ ಶೌಚಾಲಯದ ಬಳಿ ಬಸ್‌ಗಳ ನಿಲುಗಡೆ ಮಾಡಬೇಕು ಎನ್ನುವ ಜನರ ಬೇಡಿಕೆಗೆ ಯಾರೊಬ್ಬರೂ ಬೆಲೆ ಕೊಡುತ್ತಿಲ್ಲ.

ರಸ್ತೆ ಸುರಕ್ಷತಾ ಸಮಿತಿ ಸಭೆಗಳಿಗೆ ಸಾರ್ವಜನಿಕರಿಗೆ ಅವಕಾಶ ಇಲ್ಲ. ಈ ಸಭೆ ಯಾವಾಗ ನಡೆಯುತ್ತದೆ ಎನ್ನುವ ಮಾಹಿತಿಯೂ ಜನರಿಗೆ ಇರುವುದಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ಕಾಟಾಚಾರಕ್ಕೆ ಸಭೆಗಳನ್ನು ನಡೆಸುತ್ತಿದ್ದಾರೆ. ಸಾರ್ವಜನಿಕರ ಮನವಿ ಹಾಗೂ ಅಭಿಪ್ರಾಯಗಳಿಗೆ ಬೆಲೆಯೇ ಇಲ್ಲವಾಗಿದೆ.

ಜನರಲ್‌ ಕಾರ್ಯಾಪ್ಪ ವೃತ್ತ ವೂ ಇಂತಹ ಸಮಸ್ಯೆಗೆ ಹೊರತಾಗಿಲ್ಲ. ಆಟೊಚಾಲಕರು ಇಲ್ಲಿ ಅಡ್ಡಾದಿಡ್ಡಿಯಾಗಿ ಆಟೊಗಳನ್ನು ಚಲಾಯಿಸಿಕೊಂಡು ಹೋಗುತ್ತಾರೆ. ಪೊಲೀಸರು ಕಂಡರೆ ಮಾತ್ರ ನಿಯಮ ಪಾಲಿಸಲು ಮುಂದಾಗುತ್ತಾರೆ. ಇಲ್ಲಿ ಪಾದಚಾರಿಗಳು ಕೈಯಲ್ಲಿ ಜೀವ ಹಿಡಿದುಕೊಂಡು ರಸ್ತೆ ದಾಟಬೇಕಾದ ಸ್ಥಿತಿ ಇದೆ.

ಜನವಾಡ ರಸ್ತೆಯ ಗ್ರಾಮೀಣ ಬಸ್‌ ನಿಲ್ದಾಣದಲ್ಲೂ ಜನ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಖಾಸಗಿ ವಾಹನಗಳ ಪಾರ್ಕಿಂಗ್‌ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಜನನಿಬಿಡ ಪ್ರದೇಶದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಮುಲಾಜಿಲ್ಲದೆ ದಂಡ ವಿಧಿಸಬೇಕು. ಸಂಚಾರ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲನೆಯಾಗುವಂತೆ ಕ್ರಮಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಮನವಿಯಾಗಿದೆ.


ಬೀದರ್‌ನ ಉದಗಿರಿ ರಸ್ತೆಯಲ್ಲಿ ವಾಹನಗಳನ್ನು ರಸ್ತೆ ಮೇಲೆ ನಿಲುಗಡೆ ಮಾಡಿರುವ ಕಾರಣ ಪಾದಚಾರಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು

 

 

ನಗರಸಭೆ, ಪೊಲೀಸರು ಏನು ಮಾಡಬೇಕು

* ಆಯಕಟ್ಟಿನ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಆಳವಡಿಸಬೇಕು.
* ವಾಹನ ನಿಲುಗಡೆಗೆ ಬೇಸ್‌ಮೆಂಟ್‌ನಲ್ಲಿ ವ್ಯವಸ್ಥೆ ಮಾಡಬೇಕು.
* ಬೇಸ್‌ಮೆಂಟ್‌ಗಳಲ್ಲಿ ಆರಂಭಿಸಲಾದ ಅಂಗಡಿಗಳನ್ನು ತೆರವುಗೊಳಿಸಬೇಕು.
* ಕಾರ್‌ ಪಾರ್ಕಿಂಗ್‌ಗೆ ಪ್ರತ್ಯೇಕವಾದ ಸ್ಥಳ ನಿಗದಿಪಡಿಸಬೇಕು.
* ಪಾರ್ಕಿಂಗ್‌ಗೆ ಸಮ, ಬೆಸ ಸಂಖ್ಯೆಯ ವ್ಯವಸ್ಥೆ ರೂಪಿಸಬೇಕು.

ಸಾರ್ವಜನಿಕರು ಏನು ಮಾಡಬೇಕು
* ರಸ್ತೆ ಬದಿಯಲ್ಲಿ ಅಚ್ಚುಕಟ್ಟಾಗಿ ವಾಹನ ಪಾರ್ಕಿಂಗ್‌ ಮಾಡಬೇಕು
* ರಸ್ತೆ ಮಧ್ಯೆ ವಾಹನ ನಿಲುಗಡೆ ಮಾಡುವುದನ್ನು ಕೈಬಿಡಬೇಕು.
* ಸಾಧ್ಯವಾದಷ್ಟು ಬೇಸ್‌ಮೆಂಟ್‌ಗಳಲ್ಲಿ ವಾಹನ ನಿಲುಗಡೆ ಮಾಡಬೇಕು.
* ಜನದಟ್ಟಣೆ ಇರುವ ಪ್ರದೇಶದಲ್ಲಿ ಕಾರುಗಳನ್ನು ಒಯ್ಯಬಾರದು
* ಸಮಸ್ಯೆಗಳಿದ್ದರೆ ಲಿಖಿತವಾಗಿ ನಗರಸಭೆಗೆ ದೂರು ನೀಡಬೇಕು.

*
ಬೀದರ್ ನಗರದ ಆಯಕಟ್ಟಿನ ಪ್ರದೇಶದಲ್ಲಿ ನಗರಸಭೆ ವತಿಯಿಂದ ಪಾರ್ಕಿಂಗ್‌ ಸೆಂಟರ್‌ ನಿರ್ಮಾಣ ಮಾಡಿ, ಶುಲ್ಕ ಆಕರಿಸಬೇಕು.
–ಅಲ್ಲಮಪ್ರಭು ನಾವದಗೇರೆ, ಶಿವಾಜಿನಗರ ನಿವಾಸಿ

*
ದೊಡ್ಡ ನಗರಗಳಲ್ಲಿ ಪಾರ್ಕಿಂಗ್‌ಗೆ ಪ್ರತ್ಯೇಕ ಸ್ಥಳಗಳು ಇವೆ. ಆದರೆ ಬೀದರ್ ನಗರಸಭೆ ಪಾರ್ಕಿಂಗ್‌ಗೆ ಪ್ರತ್ಯೇಕ ಸ್ಥಳಗಳನ್ನೇ ಗುರುತಿಸಿಲ್ಲ. 
–ಸಚಿನ್‌ ವಿಶ್ವಕರ್ಮ, ಉಪನ್ಯಾಸಕ

*
ವ್ಯಾಪಾರಿಗಳಿಗೂ ತೊಂದರೆಯಾಗದ ರೀತಿಯಲ್ಲಿ ರಸ್ತೆ ಒಂದು ಬದಿಗೆ ವಾಹನ ನಿಲುಗಡೆ ಮಾಡಲು ಮಾರ್ಕಿಂಗ್‌ ಮಾಡಬೇಕು.
–ಅಶೋಕ ದಿಡಗೆ, ಹಳ್ಳದಕೇರಿ ನಿವಾಸಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು