ಶನಿವಾರ, ಫೆಬ್ರವರಿ 29, 2020
19 °C

ಬೀದರ್‌: ಪಶು ಮೇಳಕ್ಕೆ ಹರಿದು ಬಂದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ಬೀದರ್ ತಾಲ್ಲೂಕಿನ ಕಮಠಾಣ ಬಳಿ ಇರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಆರಂಭವಾದ ರಾಜ್ಯ ಮಟ್ಟದ ಮೂರನೇಯ ಪಶು ಮೇಳಕ್ಕೆ ಜನರ ದಂಡೇ ಹರಿದು ಬಂದಿತು.

ರೈತರು, ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಮೇಳಕ್ಕೆ ಭೇಟಿ ಕೊಟ್ಟು ಪಶು ಪಾಲನೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದರು.

ಪ್ರದರ್ಶನಕ್ಕೆ ಇಟ್ಟಿರುವ ವಿವಿಧ ಜಾತಿಗಳ ಆಕಳು, ಎಮ್ಮೆ, ಹೋರಿ, ಎತ್ತು, ಮೀನು, ಕೋಳಿ, ಕುರಿಗಳನ್ನು ಜನ ಆಸಕ್ತಿಯಿಂದ ವೀಕ್ಷಿಸಿದರು. ಜಾನುವಾರುಗಳ ಮಾಲೀಕರು ವಿವಿಧ ತಳಿಗಳ ಮಾಹಿತಿ ಒದಗಿಸಿದರು.

ದೇವಣಿ ತಳಿ ಆಕಳು, ಹೋರಿ, ಎತ್ತು, ಕಿಲ್ಲಾರಿ ತಳಿ ಆಕಳು, ಲಾಲ್ ಕಂಧಾರಿ ಎತ್ತು, ಆಕಳು, ಗಿರ್‌ ತಳಿ ಆಕಳು, ಮುರ್ರಾ ಎಮ್ಮೆ, ಹಳ್ಳಿಕಾರ್ ತಳಿ ಎತ್ತು, ಜಾಫ್ರಾಬಾದಿ ಗಿರ್ ಕೋಣ, ಕೃಷ್ಣವಲ್ಲಿ ಹಾಗೂ ಒಂಗೋಲ್ ಮಿಶ್ರಿತ ಹೋರಿ, ಪುಂಗನೂರು ಆಕಳು, ಹೋರಿ, ಲವ್ ಬರ್ಡ್, ಕೆಂಗುರಿ ತಳಿ ಕುರಿ, ಶಿರೋಹಿ ತಳಿ ಮೇಕೆ, ಡೆಕ್ಕನಿ ಕುರಿ, ನಾರಿ ಸುವರ್ಣ ತಳಿ ಕುರಿ, ಕಶ್ಮೀರಿ ಕುರಿ, ಯಳಗಾ ಕುರಿ, ಜಮುನಾಪುರಿ ತಳಿ ಮೇಕೆ, ತೋತಾಪುರಿ ತಳಿ ಮೇಕೆ, ಗಿಣಿ ಕೋಳಿ, ಟರ್ಕಿ ಕೋಳಿ, ಕಡಕನಾಥ್ ಕೋಳಿ, ಬಿವಿ-380 ಕೋಳಿ, ನಾಟಿ ಕೋಳಿ, ಗಿರಿರಾಜ ಕೋಳಿ, ಲಾರ್ಜ್ ವೈಟ್ ಯಾರ್ಕಶೈರ್ ಹಂದಿ, ಮುಧೋಳ ನಾಯಿ, ಮೊಲ, ಮೀನು ಮೊದಲಾದವು ಪ್ರದರ್ಶನದಲ್ಲಿ ಇವೆ.

ಮೇಳದಲ್ಲಿ ಸರ್ಕಾರದ ವಿವಿಧ ಇಲಾಖೆ ಹಾಗೂ ಖಾಸಗಿ ಸಂಘ, ಸಂಸ್ಥೆ, ಕಂಪನಿಗಳ ಮಳಿಗೆಗಳನ್ನು ತೆರೆಯಲಾಗಿದೆ. ಸರ್ಕಾರಿ ಇಲಾಖೆ ಮಳಿಗೆಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಇದೆ. ಖಾಸಗಿ ಮಳಿಗೆಗಳಲ್ಲಿ ಆಹಾರ ಉತ್ಪನ್ನ, ಕೃಷಿ ಪರಿಕರ, ಯಂತ್ರೋಪಕರಣ ಮತ್ತಿತರ ಸಾಮಗ್ರಿಗಳು ಇವೆ.

ಐಸ್‍ಕ್ರೀಂ, ಕಬ್ಬಿನ ರಸ, ಪಾನಿ ಪುರಿ, ಕೂಲ್‌ಡ್ರಿಂಕ್ಸ್, ಊಪಾಹಾರ ಮಳಿಗೆಗಳು ಕೂಡ ಇವೆ. ಪಶು ಮೇಳ ವೀಕ್ಷಣೆಗೆ ಬರುತ್ತಿರುವ ಜನ ತಿಂಡಿ ತಿನಿಸುಗಳನ್ನು ಸವಿಯುತ್ತಿದ್ದಾರೆ.

ತೋಟಗಾರಿಕೆ ಇಲಾಖೆಯು ಫಲಪುಷ್ಪಗಳ ಪ್ರದರ್ಶನ ಏರ್ಪಡಿಸಿದ್ದರೆ, ಕೃಷಿ ಇಲಾಖೆಯು ಕೃಷಿಗೆ ಸಂಬಂಧಿಸಿದ ಉತ್ಪನ್ನ, ಬೀಜ ತಳಿಗಳು ಹಾಗೂ ಯಂತ್ರೋಪಕರಣಗಳನ್ನು ತನ್ನ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು