ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭು ಚವಾಣ್‌ ಸಂದರ್ಶನ: ಕ್ಲಿನಿಕ್‌ ತೆರೆದು ವೈದ್ಯಕೀಯ ಸೇವೆ ಕೊಡಲು ಸಚಿವರ ಮನವಿ

ಅಧಿಕ ಹಣ ವಸೂಲಿ ಮಾಡುತ್ತಿರುವ ವೈದ್ಯರ ಮೇಲೆ ನಿಗಾ
Last Updated 14 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಲಾಕ್‌ಡೌನ್‌ ಅವಧಿಯಲ್ಲಿ ನಡೆಸಿದ ಅವಲೋಕನವನ್ನು ಪ್ರಧಾನವಾಗಿ ಇಟ್ಟುಕೊಂಡು ಮಂಗಳವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

* ಕೊರೊನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳೇನು?

ಜಿಲ್ಲೆಯಲ್ಲಿ ಮೊದಲ ಹಂತದ ಲಾಕ್‌ಡೌನ್‌ ಅವಧಿ ಮುಗಿದಿದೆ. ಸೋಂಕಿತರು ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡದ ಕಾರಣ ಸೋಮವಾರ ಮತ್ತಿಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ, ಮತ್ತೆ ಬೀದರ್‌ನ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಸೀಲ್‌ಡೌನ್‌ ಮಾಡುವುದು ಅನಿವಾರ್ಯ.

ಬಸವಕಲ್ಯಾಣ ಹಾಗೂ ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೆಳ್ಳಿಯಲ್ಲಿ ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿರುವ ಕಾರಣ ಹದಿನೈದು ದಿನಗಳ ಅವಧಿಯಲ್ಲಿ ಹೊಸ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಬೀದರ್‌ನ ಓಲ್ಡ್‌ಸಿಟಿ ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿದೆ. ಸೋಂಕು ನಿಯಂತ್ರಣಕ್ಕೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಒಟ್ಟಾರೆ ವೈರಾಣು ತೊಲಗಬೇಕು ಎನ್ನುವುದು ನಮ್ಮ ಉದ್ದೇಶ. ಕ್ವಾರಂಟೈನ್‌ ಆಗಿರುವ ವೈದ್ಯಕೀಯ ಸಿಬ್ಬಂದಿಗೂ ಸರಿಯಾದ ವ್ಯವಸ್ಥೆ ಆಗುತ್ತಿಲ್ಲ ಎನ್ನುವ ದೂರುಗಳೂ ಬರುತ್ತಿವೆ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ.

* ಕೆಲ ಖಾಸಗಿ ವೈದ್ಯರು ರೋಗಿಗಳಿಂದ ಅಧಿಕ ಹಣ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆಯಲ್ಲ?

ಹಣ ಗಳಿಸುವ ಆಸೆಗಾಗಿ ಕೆಲ ಖಾಸಗಿ ವೈದ್ಯರು ಮಾಡುತ್ತಿರುವ ತಪ್ಪಿನಿಂದಾಗಿ ಒಳ್ಳೆಯ ಕೆಲಸ ಮಾಡುತ್ತಿರುವ ಬಹಳಷ್ಟು ವೈದ್ಯರಿಗೆ ಕೆಟ್ಟ ಹೆಸರು ಬರುತ್ತಿದೆ. ಕೆಲ ಆಸ್ಪತ್ರೆಗಳ ವಿರುದ್ಧ ಸಾರ್ವಜನಿಕರಿಂದ ದೂರುಗಳು ಬಂದಿವೆ. ಆರೋಗ್ಯ ಇಲಾಖೆಯ ಮೂಲಕ ಅಂತಹ ಆಸ್ಪತ್ರೆಗಳ ಮೇಲೆ ನಿಗಾ ಇಡಲಾಗಿದೆ. ಸರ್ಕಾರ ಎಲ್ಲವನ್ನೂ ಸಂಯಮದಿಂದ ಗಮನಿಸುತ್ತಿದೆ. ಪ್ರತಿ ಜೀವ ಉಳಿಸಲು ಪ್ರಯತ್ನಿಸುತ್ತಿದೆ. ಲಾಕ್‌ಡೌನ್‌ ಅವಧಿ ಮುಗಿದ ಮೇಲೆ ತಪ್ಪು ಮಾಡಿದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಲಿದೆ.

* ನಗರದ ಓಲ್ಡ್‌ಸಿಟಿಯಲ್ಲಿ ಸೀಲ್‌ಡೌನ್‌ ಮಾಡಲಾಗುತ್ತಿದೆಯೇ?

ಸಮುದಾಯದ ಆರೋಗ್ಯದ ದೃಷ್ಟಿಯಿಂದ ಲಾಕ್‌ಡೌನ್‌ ಅವಧಿಯನ್ನು ವಿಸ್ತರಿಸುವಂತೆ ಜನರೇ ಮನವಿ ಮಾಡಿಕೊಂಡಿದ್ದಾರೆ. ಪ್ರಧಾನಿಯವರೂ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಬೀದರ್‌ನ ಓಲ್ಡ್‌ಸಿಟಿಯಲ್ಲಿ ಅತಿಹೆಚ್ಚು ಕೋವಿಡ್‌ –19 ಸೋಂಕಿತರು ಇದ್ದಾರೆ. ಅಲ್ಲಿಯ ಜನರ ಆರೋಗ್ಯದ ದೃಷ್ಟಿಯಿಂದ ಲಾಕ್‌ಡೌನ್‌ ಅನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಜೀವನಾವಶ್ಯಕ ವಸ್ತುಗಳು ದೊರೆಯುವಂತೆ ನೋಡಿಕೊಳ್ಳಲಾಗುತ್ತಿದೆ. ಈ ದಿಸೆಯಲ್ಲಿ ಜಿಲ್ಲಾಡಳಿತ ಸಮರ್ಥವಾಗಿ ಕೆಲಸ ಮಾಡುತ್ತಿದೆ.

*ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಏನೇನು ವ್ಯವಸ್ಥೆ ಮಾಡಿಕೊಂಡಿದ್ದೀರಿ?

ಜಿಲ್ಲೆಯಲ್ಲಿ ಈಗಾಗಲೇ 11 ಫೀವರ್‌ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳನ್ನು ತೆರೆದು ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಒದಗಿಸುವಂತೆ ಮನವಿ ಮಾಡಲಾಗಿದೆ. ಗರ್ಭಿಣಿಯರು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಡಯಾಲಿಸಿಸ್ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಮತ್ತೊಂದು ಸುತ್ತಿನ ಸಭೆ ಕರೆದು ಈ ಕುರಿತು ಕಟ್ಟುನಿಟ್ಟಿನ ಆದೇಶ ನೀಡಲಾಗುವುದು.

* ಜಾನುವಾರುಗಳಿಗೆ ಮೇವು ಪೂರೈಸಲು ಏನು ಕ್ರಮ ಕೈಗೊಂಡಿದ್ದೀರಿ?

ನಗರ ಪ್ರದೇಶದಲ್ಲಿರುವ ಜಾನುವಾರು ಮಾಲೀಕರಿಗೆ ಸ್ವಲ್ಪ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಮಳೆಯಾಗಿದೆ. 25 ವಾರಗಳಿಗೆ ಬೇಕಾಗುವಷ್ಟು ಮೇವು ಲಭ್ಯ ಇದೆ. ಗೋಶಾಲೆ ಹಾಗೂ ಬಿಡಾಡಿ ದನಗಳಿಗೆ ಮೇವು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾವುದು. ಹೆಚ್ಚುವರಿ ಅನುದಾನ ಕೋರಿ ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT