ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಧಿಕೃತ ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಕಡಿವಾಣ ಹಾಕಿ‘

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್.ಸೂಚನೆ
Last Updated 16 ಡಿಸೆಂಬರ್ 2020, 16:15 IST
ಅಕ್ಷರ ಗಾತ್ರ

ಬೀದರ್: ‘ಭ್ರೂಣ ಹತ್ಯೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದನ್ನು ಎಲ್ಲರಿಗೂ ಮನದಟ್ಟು ಮಾಡುವ ಮೂಲಕ ಪ್ರತಿಯೊಂದು ಹೆಣ್ಣು ಮಗುವಿನ ಜೀವ ಉಳಿಸುವ ಕಾರ್ಯ ಮಾಡೋಣ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹೆಣ್ಣು ಭ್ರೂಣ ಲಿಂಗ ಪತ್ತೆ ತಡೆ (ಪಿಸಿ ಮತ್ತು ಪಿಎನ್‌ಡಿಟಿ) 1994ರ ಅಡಿಯಲ್ಲಿ ನಡೆದ ಜಿಲ್ಲಾ ತಪಸಣಾ ಮತ್ತು ಪರಿಶೀಲನಾ ಸಮಿತಿ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

"ಅನುಮತಿ ಪಡೆಯದೇ ನಡೆಸುತ್ತಿರುವ ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಕಡಿವಾಣ ಹಾಕಬೇಕು. ಜಿಲ್ಲೆಯಲ್ಲಿ ಈಗಿರುವ ಎಷ್ಟು ಸ್ಕ್ಯಾನಿಂಗ್‌ ಸೆಂಟರ್‌ಗಳು ಮಾನ್ಯತೆ ಪಡೆದಿವೆ ಪರಿಶೀಲಿಸಬೇಕು' ಎಂದು ಸೂಚಿಸಿದರು.

"ಆಸ್ಪತ್ರೆಗಳಲ್ಲಿ ಮಕ್ಕಳನ್ನು ಮಾರಾಟ ಮಾಡುವುದಾಗಲಿ ಮತ್ತು ತೆಗೆದುಕೊಳ್ಳುವುದಾಗಲಿ ಮಾಡಿದರೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎನ್ನುವ ಎಚ್ಚರಿಕೆ ನೀಡಬೇಕು’ ಎಂದು ತಿಳಿಸಿದರು.

‘ಮಕ್ಕಳ ಮಾರಾಟ ಮಾಡುವವರಿಗೆ ಕೊಳ್ಳುವವರಿಗೆ ಬಾಲನ್ಯಾಯ ಕಾಯ್ದೆ (ರಕ್ಷಣೆ ಮತ್ತು ಪೋಷಣೆ) 2015 ಸೆಕ್ಷನ್ 81ರ ಪ್ರಕಾರ ಐದು ವರ್ಷಗಳ ಜೈಲು ಮತ್ತು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎನ್ನುವ ಫಲಕವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಹೆರಿಗೆ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್‌ಗಳಲ್ಲಿ ಕಡ್ಡಾಯ ಅಳವಡಿಸಲು ಕ್ರಮಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಸುಶಿಕ್ಷಿತರು, ಬುದ್ಧಿವಂತರೆನಿಸಿಕೊಂಡ ಬಹಳಷ್ಟು ಜನರೇ ಹೆಣ್ಣು ಮಗು ಜನಿಸಿದರೆ ಸಂತಸ ಪಡುವುದಿಲ್ಲ. ಇದು ನಿಜಕ್ಕೂ ಕಳವಳಕಾರಿ ಸಂಗತಿ. ಇಂತಹ ಮನಸ್ಥಿತಿ ಮೊದಲು ತೊಲಗಬೇಕು. ಹೆಣ್ಣು ಮಗು ಜನಿಸಿದರೆ ಆ ದಿನ ಮಗು ಮತ್ತು ತಾಯಿಯನ್ನು ಗೌರವಿಸುವ ಮನೋಭಾವ ನಮ್ಮಲ್ಲಿ ಬಂದಲ್ಲಿ ಹೆಣ್ಣು ಭ್ರೂಣ ಹತ್ಯೆ ನಿಲ್ಲಲಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
‘ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಲಿದೆ. ಇನ್ನು ಪ್ರತಿ ತಿಂಗಳು ಒಂದು ದಿನ ಅನಿರೀಕ್ಷಿತವಾಗಿ ಸ್ಕ್ಯಾನಿಂಗ್‌ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಲಾಗುವುದು’ ಎಂದು ಹೇಳಿದರು.

‘ಹೆಣ್ಣು ಮಕ್ಕಳ ಸಂಖ್ಯೆ ಅತಿ ಕಡಿಮೆ ಇರುವ ಬೀದರ್ ತಾಲ್ಲೂಕಿನಲ್ಲಿ ಹೆಚ್ಚಿನ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಹೆಣ್ಣು ಭ್ರೂಣ ಹತ್ಯೆ ತಡೆಗೆ ಕ್ರಮ ವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್ ಸೂಚನೆ ನೀಡಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಶಂಕರ ಮಾತನಾಡಿ, ‘ಜಿಲ್ಲೆಯಲ್ಲಿ ಔರಾದ್‌ನಲ್ಲಿ 2, ಬಸವಕಲ್ಯಾಣದಲ್ಲಿ 13, ಭಾಲ್ಕಿನಲ್ಲಿ 8, ಬೀದರ್‌ನಲ್ಲಿ 40, ಚಿಟಗುಪ್ಪದಲ್ಲಿ 1 ಮತ್ತು ಹುಮನಾಬಾದ್‌ನಲ್ಲಿ 6 ಮತ್ತು ಗ್ರಾಮೀಣ ಪ್ರದೇಶದಲ್ಲಿ 1 ಸೇರಿ ಒಟ್ಟು 70 ಸ್ಕ್ಯಾನಿಂಗ್‌ ಸೆಂಟರ್‌ಗಳಿವೆ. 54 ಖಾಸಗಿ ಮತ್ತು 7 ಸರ್ಕಾರಿ ಸ್ಕಾö್ಯನಿಂಗ್ ಸೆಂಟರಗಳಿವೆ’ ಎಂದು ಮಾಹಿತಿ ನೀಡಿದರು.

ಬೀದರ್ ನಗರಸಭೆ ಆಯುಕ್ತ ಅಂಗಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ, ಡಿವೈಎಸ್‌ಪಿ ಬಸವರಾಜ ಹೀರಾ, ತಹಶೀಲ್ದಾರ್ ಗಂಗಾದೇವಿ ಸಿ.ಎಚ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT