ಬೀದರ್: ‘ರಾಜ್ಯದಲ್ಲಿ ಐದು ವರ್ಷಗಳಲ್ಲಿ 25 ಕೋಟಿ ಸಸಿಗಳನ್ನು ನೆಡುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.
ಅರಣ್ಯ ಇಲಾಖೆ ಕಲಬುರಗಿ ವೃತ್ತದಿಂದ ನಗರ ಹೊರವಲಯದ ಕೊಳಾರ ಕೈಗಾರಿಕೆ ಪ್ರದೇಶದಲ್ಲಿರುವ ರೇಷ್ಮೆ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವದಲ್ಲಿ ಭಾಗವಹಿಸಿ, ಸಸಿಗೆ ನೀರೆರೆದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಕ್ರಾಂತಿಕಾರಕ ಕಾರ್ಯಕ್ರಮ ರೂಪಿಸಲಾಗಿದೆ. ಬೀದರ್‌ನಿಂದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಕರ್ನಾಟಕ ರಾಜ್ಯ ಹಸಿರುಮಯಗೊಳಿಸುವುದು, ಪ್ರಕೃತಿ ಉಳಿಸುವುದು ಈ ಕಾರ್ಯಕ್ರಮದ ಉದ್ದೇಶ. ಈ ವರ್ಷ ಒಂದು ಕೋಟಿ ಸಸಿ ನೆಡಲು ಸಂಕಲ್ಪ ಮಾಡಲಾಗಿದೆ. ಐದು ವರ್ಷಗಳಲ್ಲಿ ಒಟ್ಟು 25 ಕೋಟಿ ಸಸಿಗಳನ್ನು ನೆಡುವ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.
ವನಮಹೋತ್ಸವದ ಮೊದಲ ದಿನ ಜಿಲ್ಲೆಯಲ್ಲಿ ಐದು ಲಕ್ಷ ಸಸಿ ನೆಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಅನಂತರ ಇದು ನಿರಂತರವಾಗಿ ನಡೆಯಲಿದೆ. ಇರುವ ಒಂದು ಭೂಮಿ ಮುಂದಿನ ಪೀಳಿಗೆಗೆ ಉಳಿಸಬೇಕು. ಅರಣ್ಯ ಪ್ರದೇಶವನ್ನು ಹೆಚ್ಚಿಸಬೇಕಿದೆ. ಹಸಿರು ಕ್ಷೇತ್ರ ಹೆಚ್ಚಾಗಬೇಕು. ಮಕ್ಕಳನ್ನೆಲ್ಲ ಸೇರಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜನವಾಡ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುತ್ತಿರುವ ಕನ್ನಡ ಕೃಷಿ ಡಿಪ್ಲೊಮಾ ಕೋರ್ಸ್ ಬಂದ್ ಮಾಡಲು ಸರ್ಕಾರ ನಿರ್ಧರಿಸಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಅಧಿವೇಶನದಲ್ಲಿ ಚರ್ಚಿಸುತ್ತೇನೆ. ಸಂಬಂಧಿಸಿದ ಸಚಿವರು, ಅಧಿಕಾರಿಗಳ ಜತೆ ಚರ್ಚಿಸಿ, ಅದಕ್ಕೆ ಬೇಡಿಕೆ ಇದ್ದರೆ ಅದನ್ನು ಮುಂದುವರೆಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಬಿಜೆಪಿಯವರಿಗೆ ಒಂದೇ ಒಂದು ಭರವಸೆ ಈಡೇರಿಸಿಲ್ಲ:
ಬಿಜೆಪಿಯವರಿಗೆ ಏನೂ ಕೆಲಸವಿಲ್ಲ. ಅದಕ್ಕಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ಒಂದೇ ಒಂದು ಭರವಸೆ ಈಡೇರಿಸಿಲ್ಲ. ₹15 ಲಕ್ಷ ಯಾರಿಗಾದರೂ ಕೊಟ್ಟಿದ್ದಾರಾ? ಎರಡು ಕೋಟಿ ಉದ್ಯೋಗ ಕೊಟ್ಟಿದ್ದಾರಾ? ಮನೆಯಿಲ್ಲದವರಿಗೆ ಮನೆ ಕೊಟ್ಟಿದ್ದಾರಾ? ರೈತರ ಆದಾಯ ದುಪ್ಪಟ್ಟು ಮಾಡಿದ್ದಾರಾ? ಒಂದೇ ಒಂದು ಭರವಸೆ ಈಡೇರಿಸಿಲ್ಲ. ಸೋತು ಹತಾಶೆ ಭಾವನೆಯಿಂದ ಹೇಳುತ್ತಿದ್ದಾರೆ. ಗೋದಾಮುಗಳಲ್ಲಿ ಅಕ್ಕಿ ಮುಚ್ಚಿಟ್ಟಿದ್ದಾರೆ. ಜನವಿರೋಧಿ ನೀತಿ ಇದು. ರಾಜ್ಯದಲ್ಲಿ 7 ಲಕ್ಷ ಟನ್ ಅಕ್ಕಿ ಇದೆ. ಅದನ್ನು ಏನು ಮಾಡುತ್ತಾರೆ? ನಮ್ಮ ಕಾರ್ಯಕ್ರಮಕ್ಕೆ ಅಡೆತಡೆ ಮಾಡುತ್ತಿದ್ದಾರೆ. ಅಕ್ಕಿ ವ್ಯವಸ್ಥೆ ಆಗುವವರೆಗೆ ಹಣ ಕೊಡುತ್ತೇವೆ ಎಂದು ಹೇಳಿದರು.
ಕರ್ನಾಟಕ ಶಾಂತಿಯ ತೋಟ. ಅದನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಯಾರೇ ಭ್ರಷ್ಟಾಚಾರ ಮಾಡಿದರೂ ಅದರ ಮೇಲೆ ಲಗಾಮು ಹಾಕುತ್ತೇವೆ. ಬಿಜೆಪಿಯವರು ಅವರವರೇ ಕಚ್ಚಾಟ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸಚಿವರಿಗೆ (ಭಗವಂತ ಖೂಬಾ ಹೆಸರೇಳದೆ) ಸುಳ್ಳು ಹೇಳುವುದಕ್ಕೆ ಇತಿಮಿತಿ ಇರಬೇಕು. ಅವರು ಏನಾದರೂ ಸಾಧನೆ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಕಚೇರಿ ಜಾಗದಲ್ಲೇ ಜಿಲ್ಲಾ ಸಂಕೀರ್ಣ:
‘ಈಗಿರುವ ಜಿಲ್ಲಾಧಿಕಾರಿ ಕಚೇರಿ ಜಾಗದಲ್ಲಿಯೇ ಜಿಲ್ಲಾ ಸಂಕೀರ್ಣ ನಿರ್ಮಿಸಬೇಕೆಂಬ ಉದ್ದೇಶ ಇದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರೊಂದಿಗೆ ಮಾತನಾಡಿದ್ದೇನೆ. ನಾನು ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಇಬ್ಬರು ಈ ವಿಷಯವಾಗಿ ಮುಖ್ಯಮಂತ್ರಿ ಜೊತೆ ಚರ್ಚಿಸಿ ಮನವರಿಕೆ ಮಾಡಿದ್ದೇವೆ. ವಿಷಯ ಸಚಿವ ಸಂಪುಟಕ್ಕೆ ಹೋಗಿ ಮಂಜೂರಾತಿ ಪಡೆಯಬೇಕು. 7 ಎಕರೆ ಜಾಗದಲ್ಲಿ ಜಿಲ್ಲೆಯ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಜಿಲ್ಲಾ ಸಂಕೀರ್ಣ ನಿರ್ಮಿಸಲಾಗುವುದು’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕರಾದ ಅರವಿಂದಕುಮಾರ ಅರಳಿ, ಡಾ. ಶೈಲೈಂದ್ರ ಕೆ. ಬೆಲ್ದಾಳೆ, ಚಂದ್ರಶೇಖರ ರಾವ, ಭೀಮರಾವ ಪಾಟೀಲ, ಡಾ. ಸಿದ್ದಲಿಂಗಪ್ಪ ಪಾಟೀಲ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ರಂಜನ್, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ದೂರ್, ಡಿಸಿಎಫ್ ವಾನತಿ, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.